More

    ಅನುದಾನ ಬಳಕೆಯಾಗದಿದ್ದರೆ ಅಧಿಕಾರಿಗಳೇ ಹೊಣೆ: ಹರಿಹರ ತಾಪಂ ಆಡಳಿತಾಧಿಕಾರಿ ಸೌಮ್ಯಶ್ರೀ ಎಚ್ಚರಿಕೆ

    ಹರಿಹರ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನ ಸಂಪೂರ್ಣ ಬಳಕೆಯಾಗಬೇಕು. ಬಳಕೆಯಾಗದಿದ್ದರೆ ಆಯಾ ಇಲಾಖೆ ಮುಖ್ಯಸ್ಥರ ಮೇಲೆ ಹೊಣೆ ಹೊರಿಸಲಾಗುವುದೆಂದು ತಾಪಂ ಆಡಳಿತಾಧಿಕಾರಿ ಸೌಮ್ಯಶ್ರೀ ಸೂಚನೆ ನೀಡಿದರು.

    ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರ ಆರ್ಥಿಕ ವರ್ಷಕ್ಕೆ ಇಲಾಖೆಗಳ ಬೇಡಿಕೆಯಂತೆ ಅನುದಾನ ನೀಡಿರುತ್ತದೆ. ಅದರನುಸಾರ ನಿಗದಿತ ಸಮಯದೊಳಗೆ ಅನುದಾನ ಬಳಕೆ ಮಾಡಬೇಕು, ಇಲ್ಲದಿದ್ದರೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಳವಾಗಬೇಕು. ಈ ಹಿನ್ನಲೆಯಲ್ಲಿ ಜಿಪಂ ಸಿಇಒ ಹಲವಾರು ಸೂಚನೆ ನೀಡಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಗುಣಾತ್ಮಕ ಶಿಕ್ಷಣ ನೀಡುವ ಕಡೆ ಹೆಚ್ಚಿನ ಗಮನ ಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರಿಗೆ ತಾಕೀತು ಮಾಡಿದರು.

    ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಶೇ.90ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ 95ಕ್ಕೆ ಏರಿಕೆಯಾಗಬೇಕು. ಫಲಿತಾಂಶ ಹೆಚ್ಚಳಕ್ಕೆ ಬೇಕಾದ ಕ್ರಮ ಕೈಗೊಳ್ಳುವಂತೆ ಬಿಇಒಗೆ ಸೂಚಿಸಿದರು.

    ಬಿಇಒ ಹನುಮಂತಪ್ಪ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಒಟ್ಟು 3285 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಈಗಾಗಲೇ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿದ್ದು, ಕಲಿಕೆಯಲ್ಲಿ ಹಿಂದುಳಿದ 1100 ಮಕ್ಕಳನ್ನು ಗುರುತಿಸಿ ಅವರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಿದ್ದೇವೆ ಎಂದರು.

    ಸಹಾಯಕ ಕೃಷಿ ನಿರ್ದೇಶಕ ನಾರನಗೌಡ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ.38ರಷ್ಟು ಕಡಿಮೆ ಮಳೆಯಾಗಿದೆ. 489.34 ಲಕ್ಷ ರೂ. ಬರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಈ ವೇಳೆ ಮಾತನಾಡಿದ ಸೌಮ್ಯಶ್ರೀ, ಎಲ್ಲ ರೈತರು ಭತ್ತ ಬೆಳೆಯುವುದನ್ನು ಬಿಟ್ಟರೆ ಭವಿಷ್ಯದಲ್ಲಿ ಆಹಾರದ ಉತ್ಪಾದನೆ ಕ್ಷೀಣಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾರ್ಮಿಕ ಇಲಾಖೆಯ ಕವಿತಾ ಮಾತನಾಡಿ, 538 ಬೋಗಸ್ ಕಾರ್ಮಿಕರ ಕಾರ್ಡ್‌ಪತ್ತೆ ಮಾಡಿ ರದ್ದು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿ ಕೋವಿಡ್ ಮತ್ತೆ ಮರುಕಳಿಸುತ್ತಿದೆ. ಈ ಹಿನ್ನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಟಿಎಚ್‌ಒ ಡಾ. ಪ್ರಶಾಂತ್‌ಕುಮಾರ್‌ಗೆ ಸೂಚನೆ ನೀಡಿದರು. ಈ ವೇಳೆ ಮಾತನಾಡಿದ ಡಾ. ಪ್ರಶಾಂತ್, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೇರಿದಂತೆ ಇತರೆ ಸೌಲಭ್ಯಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

    ತಾಪಂ ಇಒ ರಮೇಶ್ ಸುಲ್ಪಿ, ಜಿಪಂ ಇಲಾಖೆಯ ಎಇಇ ಗಿರೀಶ್, ಪಶು ಇಲಾಖೆಯ ಡಾ.ಸಿದ್ದೇಶ್, ಬೆಸ್ಕಾಂ ಇಲಾಖೆಯ ನಾಗರಾಜ್ ನಾಯ್ಕ, ಸಿಡಿಪಿಒ ಪೂರ್ಣಿಮಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts