More

    ಹಾನಗಲ್ಲ ಕ್ಷೇತ್ರದಲ್ಲಿ ಅನುದಾನ ರಾಜಕೀಯ!, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ

    ಹಾವೇರಿ: ಹಾನಗಲ್ಲ ಕ್ಷೇತ್ರಕ್ಕೆ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 15 ಕೋಟಿ ರೂ. ಮಂಜೂರಾಗಿತ್ತು. ಅದನ್ನು ಅತಿವೃಷ್ಟಿಯ ಕಾರಣ ನೀಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಪಂ ಸಿಇಒ ಸೆ. 6ರಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡಿದ್ದಾರೆ.

    ಈ ವಿಷಯವು ಇದೀಗ ಹಾನಗಲ್ಲ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದೆ. ಇದೇ ವಿಷಯವನ್ನಿಟ್ಟುಕೊಂಡು ಕೈ ಪಕ್ಷದವರು ವಾಟ್ಸ್ ಆಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಮಾಜಿ ಶಾಸಕ ಶಿವರಾಜ ಸಜ್ಜನರ ವಿರುದ್ಧ ವ್ಯಂಗ್ಯವಾಗಿ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಕಮಲ ಪಕ್ಷದವರು ಶಾಸಕ ಶ್ರೀನಿವಾಸ ಮಾನೆ ವಿರುದ್ಧವೂ ವ್ಯಂಗ್ಯವಾಗಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

    ಈ ಎರಡು ಸಂದೇಶಗಳು ಹಾಗೂ ಅನುದಾನ ವಿಷಯದ ಮೇಲಿನ ಚರ್ಚೆ ಹಲವರಿಗೆ ಮನರಂಜನೆಯ ವಿಷಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಿದಾಡತೊಡಗಿವೆ.

    ಕೈ ಪಕ್ಷದವರು ಕ್ಷೇತ್ರದ 293 ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಂಜೂರಾದ 15 ಕೋಟಿ ರೂ.ಗಳ ಅನುದಾನವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ ಪ್ರತಿಯನ್ನು ಹಾಕಿ ಅದರ ಜತೆಗೆ ‘ಕೇಳ್ರಪೋ ಕೇಳಿ… ನಮ್ಮ ಹಾನಗಲ್ಲ ತಾಲೂಕಿನ 80 ಹಳ್ಳಿ ರಸ್ತೆ ಕೆಲ್ಸಗಳು ಸಂಗೂರ ಶುಗರ್ ಫ್ಯಾಕ್ಟ್ರಿ ಖಾಲಿ ಗೋಣಿ ಚೀಲದಾಗ ಪ್ಯಾಕ್ ಆದ್ವಂತಪಾ… ಇದಕ್ಕ ಗೌರಾಪುರದ ಗುಡ್ಡದಾಗಿನ ಈಶ್ವರಪ್ಪನ ಸಾಕ್ಷಿ ಅಂತಪಾ… ಕೇಳ್ರಪೋ ಕೇಳಿ..! ಹಾನಗಲ್ಲ ತಾಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಕೊಳ್ಳಿ ಇಟ್ಟ ಶಿವರಾಜ ಸಜ್ಜನರ’ ಎಂಬ ಸಂದೇಶವನ್ನು ಫಾರ್ವರ್ಡ್ ಮಾಡುತ್ತಿದ್ದಾರೆ.

    ಇದಕ್ಕೆ ಪ್ರತಿಯಾಗಿ ಕಮಲ ಪಕ್ಷದ ಕಾರ್ಯಕರ್ತರು ಶಾಸಕ ಶ್ರೀನಿವಾಸ ಮಾನೆಯವರು ಕಾರ್ಯಕ್ರಮವೊಂದರಲ್ಲಿ ನಿದ್ರೆ ಮಾಡುತ್ತಿರುವ ದೃಶ್ಯವೊಂದನ್ನು ಹಾಕಿ ‘ನೋಡ್ರಪೋ ನೋಡ್ರಿ… ಈ ತರಹ ನಿದ್ದೆಯಲ್ಲಿದ್ರೆ, ಯಾವ ಅನುದಾನ ತರೋಕೆ ಆಗುತ್ತೆ ಹೇಳಿ… ನಿದ್ದೆಯಲ್ಲಿದ್ದವರ ಕೈಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯನಾ…, 15 ಕೋಟಿ ಅನುದಾನ ವಾಪಸ್ 20 ಪರ್ಸೆಂಟ್ ಕಮಿಶನ್​ಗೆ ಬ್ರೇಕ್, 7 ಪರ್ಸೆಂಟ್ ಅಡ್ವಾನ್ಸ್ ಕಮಿಶನ್ ವಾಪಸ್. ಹುಬ್ಬಳ್ಳಿ ರೋಲ್ ಕಾಲ್, ಹಾನಗಲ್ಲ ಬಿಲ್ ಕುಲ್, ತುಂಡು ಗುತ್ತಿಗೆಗಳ ಸರದಾರ’ ಎಂಬ ಸಂದೇಶ ಹಾಕಿ ತಿರುಗೇಟು ನೀಡುತ್ತಿದ್ದಾರೆ.

    ಇದರ ಜತೆಗೆ ಅನುದಾನ ತಡೆ ಹಿಡಿಯಲು ನಾವೇ ಕಾರಣ ಎಂಬ ಆರೋಪ ಶುದ್ಧ ಸುಳ್ಳು, ಅಭಿವೃದ್ಧಿ ಬದಲು ಕೆಲವರ ಜೇಬು ತುಂಬುತ್ತದೆ ಎಂದು ಸರ್ಕಾರವೇ ತಡೆ ಹಿಡಿದಿದೆ. 15 ಕೋಟಿ ರೂ. ಮತ್ತೆ ಬರಲಿದೆ. ಟೆಂಡರ್ ಮೂಲಕ ಪಾರದರ್ಶಕವಾಗಿ ಕಾಮಗಾರಿಗಳು ಆರಂಭವಾಗಲಿವೆ. ಸರ್ಕಾರದ ಉದ್ದೇಶದ ಬದಲಾಗಿ ಬಹುತೇಕ ರಸ್ತೆಗಳಿಗೆ 5 ಲಕ್ಷ ದಂತೆ ಕಾಮಗಾರಿ ನಡೆಸಲು ಹೊರಟಿದ್ದರು. ಹಾನಗಲ್ಲ ತಾಲೂಕಿನ ಜನತೆ ಮುಗ್ಧರು, ಆದರೆ ಮುಟ್ಠಾಳರಲ್ಲ. ನಮ್ಮ ಜನಾ ಭಾಳಾ ಶ್ಯಾಣಾ ಅದಾರ ಎಂದು ಪೋಸ್ಟ್ ಮಾಡುವ ಜತೆಗೆ ಶಾಸಕ ಮಾನೆ ವಿರುದ್ಧ ತುಂಡು ಗುತ್ತಿಗೆಗಳ ಸರದಾರ, 20 ಪರ್ಸೆಂಟ್ ಕಮಿಶನ್​ಗೆ ಬ್ರೇಕ್ ಎಂದೆಲ್ಲ ಪ್ರತಿಕ್ರಿಯೆಗಳನ್ನು ಹಾಕುತ್ತಿದ್ದಾರೆ.

    ಒಟ್ಟಿನಲ್ಲಿ ಈ ಎರಡೂ ಸಂದೇಶಗಳನ್ನು ಕ್ಷೇತ್ರದ ಕೆಲ ಜನರು ತಮಾಷೆಯಿಂದ ನೋಡುತ್ತಿದ್ದರೆ, ಇನ್ನು ಕೆಲವರು ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬೀಳುತ್ತಿವೆ ಎಂದು ಹರಿಹಾಯುತ್ತಿದ್ದಾರೆ.

    ಚುನಾವಣೆ ಇನ್ನೂ ದೂರ ಇದೆ. ಆದರೆ, ಆರೋಪ-ಪ್ರತಿ ಆರೋಪ, ಸ್ಪಷ್ಟನೆ-ಪ್ರತಿವಾದಗಳು ಈಗಲೇ ಚುರುಕು ಪಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts