More

    ಗ್ರಾಮ ಸ್ವರಾಜ್ ಕಾಯ್ದೆಗೆ ಪೆಟ್ಟು ನೀಡಲು ಸರ್ಕಾರ ಹುನ್ನಾರ

    ಕೂಟಗಲ್: ಪ್ರಸ್ತುತ ಕರೊನಾ ಸೋಂಕು ಎಲ್ಲೆಡೆ ವ್ಯಾಪ್ತಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗುತ್ತಿದೆ. ಆದರೆ, ಸರ್ಕಾರ ಈಗಾಗಲೇ 5 ವರ್ಷಗಳಿಗೆ ಮೀಸಲಾತಿ ಬದಲಾವಣೆ ತಂದಿದ್ದು, ಆ ಮೂಲಕ ಗ್ರಾಮ ಸ್ವರಾಜ್ ಕಾಯ್ದೆಗೆ ಪೆಟ್ಟು ನೀಡಲು ಹುನ್ನಾರ ನಡೆಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.

    ಕೂಟಗಲ್ ಹೋಬಳಿ ಲಕ್ಷ್ಮೀಪುರದಲ್ಲಿ 45 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಪಂ ಕಟ್ಟಡ ಮತ್ತು ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂದರ್ಭಗಳು ಎದುರಾದಾಗ ಈ ಹಿಂದೆ ಗ್ರಾಪಂಗಳ ಅವಧಿ ವಿಸ್ತರಣೆ ಮಾಡಿರುವ ಉದಾಹರಣೆಗಳಿವೆ. ಸರ್ಕಾರಕ್ಕೆ ಚುನಾವಣೆ ನಡೆಸಲು ಆಸಕ್ತಿ ಇಲ್ಲದಿದ್ದರೆ ಆಡಳಿತಾಧಿಕಾರಿ ನೇಮಕ ಮಾಡಬಾರದು. ಬದಲಾಗಿ ಇರುವ ವ್ಯವಸ್ಥೆಯನ್ನೇ ಮುಂದುವರಿಸಲಿ ಎಂದು ಒತ್ತಾಯಿಸಿದರು.

    ಕಡಿಮೆ ಅವಧಿಯಲ್ಲಿ ವಿವಿಧ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಮಾದರಿ ಕಟ್ಟಡವನ್ನು ನಿರ್ಮಾಣ ಮಾಡಿರುವ ಗ್ರಾಪಂ ಅಧ್ಯಕ್ಷ ಎಂ.ಆರ್.ರಮೇಶ್ ಕಾರ್ಯಕ್ಕೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿ: ಕರೊನಾ ಸಮಯದಲ್ಲಿ ವಿಶ್ವದ ಮೂರನೇ ಅತೀ ದೊಡ್ಡ ಪ್ಯಾಕೇಜ್ ಘೋಷಣೆ ಮಾಡಿರುವುದಾಗಿ ಪ್ರಧಾನಮಂತ್ರಿ ಹೇಳುತ್ತಾರೆ. ಇದು ರೈತರ ಕೂಗನ್ನು ಹತ್ತಿಕ್ಕುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಆಹ್ವಾನ ನೀಡಿ, ಎಪಿಎಂಸಿಯನ್ನು ಖಾಸಗೀಕರಣಗೊಳಿಸಿ, ರೈತರ ಬಾಯಿ ಕಟ್ಟಿ ಹಾಕುವ ಹುನ್ನಾರವಾಗಿದೆ ಎಂದು ಸುರೇಶ್ ಕಿಡಿಕಾರಿದರು.

    ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ, ಗ್ರಾಪಂ ಆವರಣದಲ್ಲಿ ಸ್ತ್ರೀಶಕ್ತಿ ಸಮುದಾಯ ಭವನ ಹಾಗೂ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ ಎಂದರು.

    ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಜಿಪಂ ಸದಸ್ಯ ಎಚ್.ಎನ್. ಅಶೋಕ್, ಗ್ರಾಪಂ ಅಧ್ಯಕ್ಷ ಎಂ.ಆರ್. ರಮೇಶ್, ಉಪಾಧ್ಯಕ್ಷೆ ಆಶಾ, ತಾಪಂ ಪ್ರಭಾರ ಅಧ್ಯಕ್ಷೆ ರಮಾಮಣಿ, ಮಾಜಿ ಅಧ್ಯಕ್ಷ ಜಿ.ಎನ್.ನಟರಾಜು, ತಾಪಂ ಸದಸ್ಯೆ ಪ್ರಭಾವತಿ, ಜಿಪಂ ಸಿಇಒ ಇಕ್ರಂ, ತಾಪಂ ಇಒ ಶಿವಕುಮಾರ್, ಪಿಡಿಒ ಶಿವಕುಮಾರ್, ಸದಸ್ಯರಾದ ಬೈರೇಗೌಡ, ವಿಶ್ವನಾಥ್, ಗುರುಮೂರ್ತಿ, ಹರೀಶ್, ಪಾರ್ವತಮ್ಮ, ಜಯಮ್ಮ, ಪುಷ್ಪಾ ಮತ್ತಿತರರು ಇದ್ದರು.

    ಜನರನ್ನು ಹಾದಿ ತಪ್ಪಿಸುವುದು ಬೇಡ: ಬಿಡದಿ ಟೌನ್‌ಶಿಪ್ ವಿಷಯವಾಗಿ ಜನರನ್ನು ದಾರಿ ತಪ್ಪಿಸುವುದು ಬೇಡ. ರೈತರ ಹಿತಕಾಯಲು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗಲೇ, ಇವರೆಲ್ಲರೂ ಮಾತನಾಡುವ ಮೊದಲೇ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಎಲ್ಲ ಭೂಮಿಯನ್ನು ಭೂಸ್ವಾಧೀನ ಮಾಡಿ ಕೇಂದ್ರ ಸರ್ಕಾರದ ಹೊಸ ನೀತಿ ನಿಯಮಗಳಂತೆ ಬೆಲೆ ನೀಡಿದರೆ ರೈತರು ಒಪ್ಪುತ್ತಾರೆ ಎಂದೂ ತಿಳಿಸಿದ್ದೇನೆ ಎಂದು ಡಿ.ಕೆ.ಸುರೇಶ್ ಹೇಳಿದರು.

    ಎಚ್.ಸಿ.ಬಾಲಕೃಷ್ಣ ಹಿರಿಯರಿದ್ದಾರೆ. ಅವರು ವರಿಷ್ಠರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜತೆ ಮಾತನಾಡಲಿ. ನಾನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಸಮಾನವಾಗಿ ಕಾಣುತ್ತೇನೆ. ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರಿಗೇಕೆ ಅನಿಸಿದೆಯೋ ತಿಳಿದಿಲ್ಲ. ಅವರು ಯಾವ ಪಕ್ಷಕ್ಕಾದರೂ ಹೋಗಲಿ, ಅವರಿಗೆ ಎಲ್ಲಿ ಸಮಾಧಾನ ಇರುತ್ತದೆಯೂ ಅಲ್ಲಿ ಕೆಲಸ ಮಾಡಲಿ.
    ಡಿ.ಕೆ.ಸುರೇಶ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts