More

    29 ಶೈಕ್ಷಣಿಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಭಾಗ್ಯ

    ಡಿಪಿಎನ್ ಶ್ರೇಷ್ಠಿ
    ಚಿತ್ರದುರ್ಗ:
    ಕರೊನಾ ಭೀತಿಯಿಂದ ಶೈಕ್ಷಣಿಕ ಚಟುವಟಿಕೆಗಳು ಇನ್ನೂ ಆರಂಭವಾಗದ ಈ ಹೊತ್ತಿನಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.
    ಕಳೆದ ವರ್ಷ ನೆರೆ ಹಾವಳಿಗೆ ತುತ್ತಾಗಿದ್ದ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 29 ಜಿಲ್ಲೆಗಳ 3243 ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 6143 ಹೊಸ ಕೊಠಡಿಗಳ ನಿರ್ಮಾಣವಾಗಲಿವೆ. ಇದಕ್ಕಾಗಿ ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ನಬಾರ್ಡ್‌ನ ಆರ್‌ಐಡಿಎಫ್‌ನಡಿ 718.65 ಕೋಟಿ ರೂ. ಮಂಜೂರು ಮಾಡಿದ್ದು, ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದೆ.

    ಕರೊನಾ ಅಬ್ಬರದ ನಡುವೆ ಹೊಸ ಕೊಠಡಿ

    718 ಕೋಟಿ ರೂ. ಅನುದಾನ

    29 ಶೈಕ್ಷಣಿಕ ಜಿಲ್ಲೆಗಳ 3243 ಶಾಲೆಗಳ ಅಭಿವೃದ್ಧಿ

    ಹೊಸ ಕೊಠಡಿಗಳ ನಿರ್ಮಾಣಕ್ಕೆ ನಬಾರ್ಡ್ ನೆರವು ದೊರೆತು ಮೂರು ತಿಂಗಳಾಗಿದ್ದರೂ ಲಾಕ್‌ಡೌನ್‌ನಿಂದಾಗಿ ಆರಂಭವಾಗದ ಕಾಮಗಾರಿಗಳಿಗೆ ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆ ಚಾಲನೆ ನೀಡುವ ನಿರೀಕ್ಷೆ ಇದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಸ್ವಾತಂತ್ರೃಪೂರ್ವದಿಂದಲೂ ಅನೇಕ ಕಡೆ ಹೊಸ ಕೊಠಡಿಗಳು ನಿರ್ಮಾಣವಾಗದೆ ಶಿಥಿಲ ಕಟ್ಟಡಗಳಲ್ಲೇ, ಜೀವ ಕೈಯಲ್ಲಿ ಹಿಡಿದುಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದರು. ಇನ್ನು ವಿದ್ಯಾರ್ಥಿಗಳು ಅದೇ ಭಯದಲ್ಲಿ ಶಾಲೆಗೆ ಹೋಗಿ ಬರುವಂತಾಗಿತ್ತು. ಉದ್ದೇಶಿತ ಹೊಸ ಕೊಠಡಿಗಳಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಿಂಹಪಾಲು (ಶೇ.80) ಸಿಕ್ಕಿದೆ. ಸಾಮಾನ್ಯ ಮಣ್ಣು ಹಾಗೂ ಕಪ್ಪು ಮಣ್ಣಿನ ಪ್ರದೇಶಗಳಲ್ಲಿಯ ನಿರ್ಮಾಣಕ್ಕೆ ಪ್ರತ್ಯೇಕ ವೆಚ್ಚ ಅಂದಾಜಿಸಿ, ಅನುದಾನ ಬಿಡುಗಡೆ ಮಾಡಲಾಗಿದೆ.

    ಯಾವ ಶೈಕ್ಷಣಿಕ ಜಿಲ್ಲೆ, ಎಷ್ಟು ಶಾಲೆ, ಎಷ್ಟು ಕೊಠಡಿ?
    ಬಾಗಲಕೋಟೆ ಜಿಲ್ಲೆಯ 92 ಶಾಲೆಗಳಲ್ಲಿ 192 ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಬಳ್ಳಾರಿ-220-418, ಬೆಳಗಾವಿ-279-560, ಬೆಂಗಳೂರು ಉತ್ತರ-1-2, ಬೆಂಗಳೂರು ಗ್ರಾ.-10-15, ಬೀದರ್-11-15, ಚಾಮರಾಜನಗರ-49-61, ಚಿಕ್ಕಬಳ್ಳಾಪುರ-24-26, ಚಿಕ್ಕಮಗಳೂರು-56-126, ಚಿಕ್ಕೋಡಿ-555-1067, ಚಿತ್ರದುರ್ಗ-198-294, ದಾವಣಗೆರೆ-38-55, ಧಾರವಾಡ-199-444, ಗದಗ-132-314, ಹಾಸನ-48-72, ಹಾವೇರಿ-172-264, ಕಲಬುರಗಿ-244-538, ಕೊಡಗು-3-3, ಕೊಪ್ಪಳ-4-13, ಮಧುಗಿರಿ-40-41, ಮಂಡ್ಯ-49-66, ಮೈಸೂರು-334-635, ರಾಯಚೂರು-204-408, ಶಿವಮೊಗ್ಗ-56-92, ಶಿರಸಿ-28-45, ತುಮಕೂರು-133-246, ಉಡುಪಿ-8-13, ಉತ್ತರ ಕನ್ನಡ-30-43 ಹಾಗೂ ವಿಜಯಪುರ ಜಿಲ್ಲೆಯ 26 ಶಾಲೆಗಳಲ್ಲಿ 75 ಹೊಸ ಕೊಠಡಿಗಳ ನಿರ್ಮಾಣವಾಗಲಿವೆ.

    ಇನ್ನಷ್ಟು ಅನುದಾನಕ್ಕೆ ಪ್ರಯತ್ನ
    ಚಿತ್ರದುರ್ಗದಲ್ಲಿ 810 ಕಿರಿಯ, 835 ಹಿರಿಯ ಹಾಗೂ 114 ಪ್ರೌಢಶಾಲೆಗಳ ಸಹಿತ 1759 ಶಾಲೆಗಳಿವೆ. ಇವುಗಳ ಪೈಕಿ ಅನೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ನಬಾರ್ಡ್ ನೆರವಿನೊಂದಿಗೆ ಈಗ ನಿರ್ಮಾಣವಾಗಲಿರುವ ಹೊಸ ಕೊಠಡಿಗಳನ್ನು ಹೊರತುಪಡಿಸಿ ಜಿಲ್ಲಾ ಖನಿಜ ಪ್ರತಿಷ್ಠಾನದ ಹಾಗೂ ಇತರೆ ಅನುದಾನಗಳನ್ನು ಬಳಸಿ ಹೊಸ ಕೊಠಡಿ, ಶೌಚಗೃಹ ನಿರ್ಮಾಣಕ್ಕೆ ತೀವ್ರ ಪ್ರಯತ್ನ ನಡೆಸಲಾಗಿದೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹೇಳಿದ್ದಾರೆ.

    ಶಾಲೆಗಳಿಗೆ ಎರಡನೇ, ನಾಲ್ಕನೇ ಶನಿವಾರವೂ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts