More

    ಪುತ್ತೂರಿನ ಕಬಕದ 23 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

    • ಶ್ರವಣ್‌ಕುಮಾರ್ ನಾಳ/ಶಶಿ ಈಶ್ವರಮಂಗಲ ಪುತ್ತೂರು
    • ಕಳೆದ 10 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ಬೇಡಿಕೆಯಿದ್ದು, ಮಂಗಳೂರಿನ ಕೊಣಾಜೆ, ಪುತ್ತೂರಿನ ಕಬಕ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿವೇಶನ ಕಾಯ್ದಿರಿಸಲಾಗಿದೆ. ಈ ಪೈಕಿ ಕಬಕ ಗ್ರಾಮದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಜಮೀನು ನೀಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

    ಶೀಘ್ರದಲ್ಲಿಯೇ ಕೆಎಸ್‌ಸಿಎ ಜತೆ ಜಮೀನಿಗೆ ಸಂಬಂಧಪಟ್ಟ ಕರಾರು ದಾಖಲೆಗಳ ವಿನಿಮಯ ಕಾರ್ಯ ನಡೆಯಲಿದೆ. ಸುಮಾರು 48.5 ಕೋಟಿ ರೂ. ಅನುದಾನದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಯೋಜನೆ ರೂಪಿಸಿದೆ.

    23 ಎಕರೆ ಜಾಗ ಮೀಸಲು: ದ.ಕ. ಜಿಲ್ಲೆಯ ಕ್ರಿಕೆಟ್ ತರಬೇತಿಗಾಗಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅಗತ್ಯ ಎಂದು ಮಂಗಳೂರು ಭೇಟಿ ಸಂದರ್ಭ ಕ್ರಿಕೆಟಿಗ ಅನಿಲ್ ಕುಂಬ್ಳೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು.

    ಅದರಂತೆ ಮಂಗಳೂರು ನಗರದಲ್ಲಿ ನಿವೇಶನ ಕೊರತೆ ಇರುವುದರಿಂದ ಗ್ರಾಮಾಂತರ ಭಾಗದಲ್ಲಿ ನಿವೇಶನ ಕಾಯ್ದಿರಿಸಲು ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಹಸೀಲ್ದಾರ್‌ಗಳಿಗೆ ಉಪವಿಭಾಗಾಧಿಕಾರಿ ಮೂಲಕ ಸೂಚಿಸಿದ್ದರು. 2017ರಲ್ಲಿ ಡಾ.ರಾಜೇಂದ್ರ ಕೆ.ವಿ. ಪುತ್ತೂರಿನ ಸಹಾಯಕ ಕಮಿಷನರ್ ಆಗಿದ್ದಾಗ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ಸರ್ವೇ ನಂ.260/1ಪಿಯಲ್ಲಿ 23.25 ಎಕರೆ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಕಾದಿರಿಸಿದ್ದರು. ಸರ್ಕಾರಿ ವಸತಿ ಪ್ರದೇಶ ನಿರ್ಮಾಣಕ್ಕೆ ಈ ಜಾಗ ಸೂಕ್ತವಾಗಿದ್ದು, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಬೇಡ ಎಂಬ ಆಗ್ರಹ ಅಂದಿನ ಸ್ಥಳೀಯಾಡಳಿತದಿಂದ ಕೇಳಿಬಂದಿದ್ದರಿಂದ ಈ ಪ್ರಸ್ತಾವನೆ ಅರ್ಧದಲ್ಲೇ ಉಳಿದಿತ್ತು.

    ಸ್ಟೇಡಿಯಂನಲ್ಲಿ ಏನೇನಿರುತ್ತದೆ?: ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿ 23 ಎಕರೆ ಪ್ರದೇಶದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, 2024ಕ್ಕೆ ಸಿದ್ಧಗೊಳ್ಳಲಿದೆ. ಅದೇ ಮಾದರಿಯಲ್ಲಿ ಪುತ್ತೂರಿನಲ್ಲೂ ಸ್ಟೇಡಿಯಂ ನಿರ್ಮಾಣಕ್ಕೆ ಕೆಎಸ್‌ಸಿಎ ಯೋಜನೆ ರೂಪಿಸಿದೆ. ಈಜುಕೊಳ, ರೆಸ್ಟೋರೆಂಟ್, ಸಾವಿರ ಜನ ಸಾಮರ್ಥ್ಯದ ಸಭಾಂಗಣ, ಶಟಲ್ ಬ್ಯಾಡ್ಮಿಂಟನ್, ಬಿಲಿಯರ್ಡ್ಸ್, ಸ್ಕ್ವಾಶ್, ಬಾಸ್ಕೆಟ್‌ಬಾಲ್ ಕೋರ್ಟ್ ಇರಲಿದೆ.

    40 ಸಾವಿರ ಆಸನ ಸಾಮರ್ಥ್ಯ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ 40 ಸಾವಿರ ಆಸನಗಳ ಗರಿಷ್ಠ ಸಾಮರ್ಥ್ಯ ಹೊಂದಿದೆ. ಪುತ್ತೂರಿನಲ್ಲಿ ಇದಕ್ಕಿಂದ ದೊಡ್ಡದಾದ ಮತ್ತು ವಿಭಿನ್ನ ಮಾದರಿಯ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ. ಆದರೆ ಸ್ಟೇಡಿಯಂ ಆರಂಭದಲ್ಲಿ ತರಬೇತಿ ಹಾಗೂ ರಣಜಿ, ದೇಶೀಯ ಪಂದ್ಯಾಟಕ್ಕಾಗಿ ಮಾತ್ರ ಬಳಕೆಯಾಗಲಿದೆ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಬೇಕಿದ್ದರೆ ಐಸಿಸಿ ನಿಯಮದಂತೆ ಅಗತ್ಯ ಮಾರ್ಪಾಡುಗಳನ್ನು ಬಿಸಿಸಿಐ ಉಸ್ತುವಾರಿಯಲ್ಲಿ ಮಾಡಬೇಕಾಗುತ್ತದೆ.

    ಕೊಣಾಜೆ, ಮೇರಿಹಿಲ್‌ನಲ್ಲೂ ಜಾಗ: ನಿವೇಶನ ಕಾಯ್ದಿರಿಸುವಂತೆ ಕೆಎಸ್‌ಸಿಎ ಪದೇಪದೆ ಒತ್ತಡ ಹಾಕಿದ್ದರಿಂದ ದ.ಕ. ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ.ವಿ. ಮಂಗಳೂರಿನ ಕೊಣಾಜೆಯಲ್ಲಿ 22 ಎಕರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಹಾಗೂ ಮೇರಿಹಿಲ್‌ನಲ್ಲಿ 6 ಎಕರೆ ಕಿರು ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿದ್ದಾರೆ. ಇದಕ್ಕೂ ಮುನ್ನ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 18 ಎಕರೆ ಜಾಗವನ್ನು ಕಾಯ್ದಿರಿಸಲಾಗಿತ್ತು.

    ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಕ್ರಿಕೆಟ್ ಕ್ರೀಡಾಪಟುಗಳ ತರಬೇತಿಗೋಸ್ಕರ ಮತ್ತು ಕ್ರಿಕೆಟ್‌ನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಒಂದೆರಡು ತಿಂಗಳೊಳಗೆ ಕೆಎಸ್‌ಸಿಎ ಜತೆ ದಾಖಲೆಗಳ ವಿನಿಮಯ ಕಾರ್ಯ ನಡೆಯಲಿದೆ.
    | ಕೆ.ಸಿ ನಾರಾಯಣ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ

    ಕಬಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪುತ್ತೂರಿನ ಯೂನಿಯನ್ ಕ್ರಿಕೆಟರ್ಸ್‌ ಕಾರ್ಯದರ್ಶಿ ವಿಶ್ವನಾಥ ನಾಯಕ್ ಸಹಿತ ಅವರ ಇಡೀ ತಂಡ ಇದಕ್ಕಾಗಿ ಶ್ರಮಿಸಿದೆ. ಇವೆಲ್ಲ ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಲಿದೆ.
    | ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts