More

    ಪ್ರತಿಪಕ್ಷ ನಾಯಕ ಹೇಳಿದಂತೆ ರಾಜಕಾರಣ ಮಾಡಕ್ಕೆ ಆಗಲ್ಲ; ಸಚಿವ ಗೋವಿಂದ ಕಾರಜೋಳ

    ಬೆಂಗಳೂರು: ಗಡಿ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆಯುವ ಸಂದರ್ಭ ಬಂದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ ರಾಜಕಾರಣ ಮಾಡಲಾಗದು ಎಂದು ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

    ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು‌ ‘ಆಡಳಿತ ನಡೆಸುವವರಿಗೆ ಯಾವಾಗ ಏನು ಮಾಡಬೇಕೆಂದು ಗೊತ್ತಿದೆ. ಅವರು ನಾಟಕ ಮಾಡುತ್ತಾರೆ ಎಂದರೆ ನಾವು ಪಾತ್ರಧಾರಿಗಳಾಗಬೇಕಾದ ಅಗತ್ಯವಿಲ್ಲ’ ಎಂದರು.

    ‘ಅಂತಹ ಸಮಸ್ಯೆ ಉದ್ಭವಿಸಿದಾಗ ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿಯಿಡುತ್ತೇವೆ. ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಗಡಿ ಜಿಲ್ಲೆಗಳ ಕನ್ನಡಿಗ-ಮರಾಠ ಭಾಷಿಕರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಕೆಲವು ಪುಂಡರು,ಪುಢಾರಿಗಳು ಗಡಿ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಮಹಾರಾಷ್ಟ್ರ ಸಚಿವರ ಭೇಟಿ ಬೇಡವೆಂದು ಅಲ್ಲಿನ ಸರ್ಕಾರಕ್ಕೆ ಸೂಕ್ಷ್ಮವಾಗಿ ಸಂದೇಶ ಕಳುಹಿಸಿದ್ದು, ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಇಷ್ಟಕ್ಕೂ ಮೀರಿ ಭೇಟಿಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಗೋವಿಂದ ಕಾರಜೋಳ ಎಚ್ಚರಿಸಿದರು.

    ಸುಮ್ಮನೆ ಬಿಡಲ್ಲ!

    ಗಡಿ ನೆಪವೊಡ್ಡಿ ತಂಟೆ, ತರಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಮಹಾರಾಷ್ಟ್ರದವರು ಅಲ್ಲಿ ಏನಾದರೂ ಮಾತಾಡಿಕೊಳ್ಳಲಿ. ಕನ್ನಡಿಗರು ಸಂಯಮವನ್ನು ಕಾಪಾಡಿಕೊಳ್ಳೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ನೆಲ, ಜಲ, ಭಾಷೆ ಸರ್ಕಾರ ಬದ್ಧವಾಗಿದೆ. ಪ್ರಚೋದನೆಗೆ ಒಳಗಾಗಿ ಶಾಂತಿಗೆ ಭಂಗ ತರುವುದು ಬೇಡ. ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದರು.

    ಮಹಾರಾಷ್ಟ್ರ ಸರ್ಕಾರದ ಜತೆಗೆ ಮುಖ್ಯಮಂತ್ರಿ ಮಾತನಾಡಿದ್ದು, ಉಭಯ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಾಗಿದೆ. ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

    ಕಾನೂನು ಹೋರಾಟ ನಡೆಸುತ್ತೇವೆ. ಜನರ ಕೈಗೆ ಈ ವಿಚಾರ ಬಿಟ್ಟು ಕೊಡಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ನಾವು ಮಾತಿನ ಬದಲು ನಡವಳಿಕೆಯಲ್ಲಿ ತೋರಿಸುತ್ತೇವೆ. ಅಗತ್ಯ ಬಂದೋಬಸ್ತ್ ಮಾಡಿದ್ದು, ಕಾನೂನು ಕೈಗೆತ್ತಿಕೊಂಡರೆ ತಕ್ಕಶಾಸ್ತಿಯಾಗಲಿದೆ ಎಂದು ಆರಗ ಜ್ಞಾನೇಂದ್ರ ಖಡಕ್ ಆಗಿ ಹೇಳಿದರು.

    ಯಾವುದೇ ಸಚಿವರು ಎಲ್ಲಿಗೆ ಬೇಕಾದರೂ ಭೇಟಿ ನೀಡುವುದಕ್ಕೆ ಮುಕ್ತ ಅವಕಾಶವಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಗೆ ತರುವಂತಹ ಪ್ರಚೋದನಕಾರಿ ಭಾಷಣಕ್ಕೆ ಅವಕಾಶವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts