More

    ಅತಿಥಿ ಉಪನ್ಯಾಸಕರಿಂದ ತರಕಾರಿ, ಹಣ್ಣಿನ ವ್ಯಾಪಾರ

    ಚಿಕ್ಕಮಗಳೂರು: ಸೇವೆ ಕಾಯಂ ಮಾಡಿ ಭದ್ರತೆ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಎಂಎಲ್​ಸಿ ಎಸ್.ಎಲ್.ಬೋಜೇಗೌಡ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುವ ಮೂಲಕ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    10ರಿಂದ 25 ವರ್ಷ ದುಡಿಸಿಕೊಂಡು ಬಂದಿರುವ ಸರ್ಕಾರ ಇವರ ಸೇವಾ ಭದ್ರತೆ ಬಗ್ಗೆ ಈವರೆಗೂ ರ್ಚಚಿಸಿಲ್ಲ. ಅವರಿಗೆ ವಿದ್ಯಾರ್ಹತೆ ಇಲ್ಲವಾ? ಈಗ ಅವರನ್ನು ಮನೆಗೆ ಕಳುಹಿಸುತ್ತೀರಾ? ಸರ್ಕಾರ ಮನಸ್ಥಿತಿ ಬದಲಾಯಿಸಿಕೊಂಡು ಸಮಸ್ಯೆಗೆ ಸ್ಪಂದಿಸಬೇಕು ಎಂದು ಎಸ್.ಎಲ್.ಬೋಜೇಗೌಡ ಆಗ್ರಹಿಸಿದರು.

    ಸಂಬಳ ನೀಡಿದರೂ ಅಥವಾ ನೀಡದಿದ್ದರೂ ಸೆ.1ರಿಂದ ಉಪನ್ಯಾಸಕರ ಕೆಲಸ ಆರಂಭವಾಗುತ್ತದೆ. ಆನ್​ಲೈನ್ ಶಿಕ್ಷಣ ಅಥವಾ ಕಾಲೇಜಿನಲ್ಲೇ ಪಾಠ ಮಾಡುವುದಿರಬಹುದು. ಹಾಜರಾಗಲೇಬೇಕಾದ ಪರಿಸ್ಥಿತಿ ಇದೆ. ಪಾಲ್ಗೊಳ್ಳದಿದ್ದರೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದ ಹಾಗೆ. ಶಿಕ್ಷಣ ಕ್ಷೇತ್ರಕ್ಕೆ ಅತಿಥಿ ಉಪನ್ಯಾಸಕರ ಕೊಡುಗೆ ಅಪಾರ. ಇವರ ವಿಚಾರದಲ್ಲಿ ಮೊಸಳೆ ಕಣ್ಣೀರು ಬೇಡ ಎಂದರು.

    ಪದವಿ ಕಾಲೇಜುಗಳಲ್ಲಿ ಶೇ.80 ಅತಿಥಿ ಉಪನ್ಯಾಸಕರೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡುತ್ತಿರುವ ಸಂಬಳ 10ರಿಂದ 12 ಸಾವಿರ ರೂ. ಮಾತ್ರ. 5 ತಿಂಗಳಿಂದ ಅದನ್ನು ಕೂಡ ನೀಡಿಲ್ಲ. ಜೀವನ ನಿರ್ವಹಣೆ ಹೇಗೆ. ತಳ್ಳೋಗಾಡಿಯಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ಪ್ರದರ್ಶನ ಮಾಡಿದ್ದು ಪ್ರತಿಭಟನೆಗೆಗಾಗಿಯಲ್ಲ. ಕೆಲಸವಿಲ್ಲದೆ ಕೆಲವರು ತರಕಾರಿ, ಹಣ್ಣು ಮಾರಾಟ, ತೋಟ ಕಾರ್ವಿುಕರು, ಗಾರೆ, ಪೈಂಟ್ ಕೆಲಸ ಮಾಡುತ್ತಿರುವುದು ವಾಸ್ತುವ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ 14 ಸಾವಿರ, ಜಿಲ್ಲೆಯಲ್ಲಿ 300 ಜನ ಅತಿಥಿ ಉಪನ್ಯಾಸಕರಿದ್ದಾರೆ. ಬಹಳಷ್ಟು ಮಂದಿ ತೋಟಗಳಲ್ಲಿ ಕೆಲಸ ಮಾಡುತ್ತ, ಹಲವರು ಟ್ಯಾಕ್ಸಿ, ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರ ಇದನ್ನು ಮನಗಂಡು ಸೇವಾ ಭದ್ರತೆ ಒದಗಿಸಬೇಕು. ಲಾಕ್​ಡೌನ್ ಅವಧಿಯ ವೇತನ ಬಿಡುಗಡೆ ಮಾಡಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪೂರ್ಣೆಶ್ ಒತ್ತಾಯಿಸಿದರು.

    ಗಾಂಧಿ ಪಾರ್ಕ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ಡಾ. ಬಗಾದಿ ಗೌತಮ್ ಮನವಿ ಸ್ವೀಕರಿಸಿದರು. ಸಂಘದ ಗೌರವಾಧ್ಯಕ್ಷ ಪರ್ವತೇಗೌಡ, ಕಾರ್ಯದರ್ಶಿ ಈರಪ್ಪ ಶೆಟ್ಟಿ , ಡಾ. ಮಂಜುನಾಥ್, ಸಂದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts