More

    ಸರ್ಕಾರಿ ಕಚೇರಿಗಳಲ್ಲಿಲ್ಲ ಒತ್ತಡ

    ಕೊವಿಡ್-19 ಹಿನ್ನೆಲೆಯಲ್ಲಿ ಶೇ.50 ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಬಹುದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಕಚೇರಿಗಳಲ್ಲಿ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.

    ಮಂಗಳೂರು: ಹೊರಗಿನಿಂದ ಬರುವ ಜನರಿಲ್ಲ, ದೈನಂದಿನ ಕೆಲಸ ಬಿಟ್ಟರೆ ಉಳಿದ ಕೆಲಸ ಕಡಿಮೆ, ಆರೋಗ್ಯ, ಕಂದಾಯ, ಪೊಲೀಸ್ ಹೊರತುಪಡಿಸಿದರೆ, ಉಳಿದ ಕಚೇರಿಗಳಿಗೆ ಯೋಜನಾನುಷ್ಠಾನದ ಒತ್ತಡವಿಲ್ಲ.
    – ಇದು ದ.ಕ.ಜಿಲ್ಲೆಯ ಪ್ರಸ್ತುತ ಸರ್ಕಾರಿ ಕಚೇರಿಗಳ ಸ್ಥಿತಿ.
    ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಕರೊನಾ ಕಾರಣಕ್ಕೆ ಭಾನುವಾರ ರಜೆಯೂ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಉಲ್ಲೇಖಾರ್ಹ. ಉಳಿದಂತೆ ಪೊಲೀಸ್, ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ, ಪಂಚಾಯತ್‌ರಾಜ್ ಇಲಾಖೆಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿದೆ.

    ದ.ಕ ಜಿಲ್ಲಾ ಪಂಚಾಯಿತಿ
    ದ.ಕ.ಜಿಪಂ.ಅಡಿ 30 ಇಲಾಖೆಗಳಿವೆ. ಮಂಗಳೂರು ನಗರದ ಉರ್ವಾದಲ್ಲಿರುವ ಕಚೇರಿಯಲ್ಲಿ ಕೊವಿಡ್ ಪ್ರಾರಂಭದ ಕೆಲವು ದಿನ ಬಿಟ್ಟರೆ ಉಳಿದಂತೆ ಶೇ.60ಕ್ಕೂ ಹೆಚ್ಚು ಮಂದಿ ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ದೂರದಿಂದ ಬರುವವರು ಮಾತ್ರ ಬರುತ್ತಿರಲಿಲ್ಲ. ಬಾರದವರಿಗೆ ಆ ದಿನಗಳನ್ನು ರಜೆಯನ್ನಾಗಿ ಪರಿವರ್ತಿಸಬೇಕೇ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಿಲ್ಲ. ಸಾಮಾನ್ಯವಾಗಿ ಜಿಪಂ ಕಚೇರಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಕೆಲಸದ ಒತ್ತಡ ಕಡಿಮೆ, ಮೇ-ಜೂನ್ ವೇಳೆಗೆ ಕ್ರಿಯಾ ಯೋಜನೆ ರೂಪಿಸುವ ಒತ್ತಡ ಶುರುವಾಗುತ್ತದೆ. ಜಿಪಂ ಹಾಗೂ ಅಧೀನದ 30 ಕಚೇರಿಗಳಲ್ಲಿ ಒಟ್ಟು 200 ಸಿಬ್ಬಂದಿ ಇದ್ದಾರೆ. ಇದರಲ್ಲಿ ಹಲವು ಇಲಾಖೆಗಳಿಗೆ ಕರ್ತವ್ಯದಿಂದ ರಿಯಾಯಿತಿ ಇದೆ. ಹಾಗಾಗಿ 140-150 ಮಂದಿ ಬರುತ್ತಿದ್ದಾರೆ.

    ಮಿನಿ ವಿಧಾನಸೌಧ ಬಂದ್
    ಮಂಗಳೂರು ಮಿನಿವಿಧಾನ ಸೌಧದಲ್ಲಿರುವ ಎಸಿ ಕಚೇರಿ, ತಹಸೀಲ್ದಾರ್ ಕಚೇರಿ, ಉಪನೋಂದಣಾಧಿಕಾರಿ ಕಚೇರಿಗಳು ಸಾಮಾನ್ಯವಾಗಿ ಜನರಿಂದ ಗಿಜಿಗುಡುತ್ತವೆ. ಆದರೀಗ ಜನರಿಗೆ ನಿರ್ಬಂಧ ಇದೆ. ಕೊವಿಡ್ ಪಾಸ್ ನೀಡುವ ಅಧಿಕಾರವನ್ನು ಎಸಿಯವರಿಗೆ ನೀಡಲಾಗಿತ್ತು. ಈಗ ಅವರೂ ಪಾಸ್ ಕೊಡುತ್ತಿಲ್ಲ. ಹಾಗಾಗಿ ಮಿನಿ ವಿಧಾನಸೌಧದ ಪ್ರವೇಶದ್ವಾರವನ್ನೇ ಬಂದ್ ಮಾಡಿದ್ದಾರೆ. ಆದರೂ ಕೆಲವು ನಾಗರಿಕರು ಪಾಸ್‌ಗಳಿಗಾಗಿ ಕೇಳಿಕೊಂಡು ಬರುತ್ತಿರುವುದು ಕಂಡುಬಂತು. ಏಪ್ರಿಲ್ 14ರಿಂದ ಮೇ 3ರ ವರೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎನ್ನುವ ಫಲಕವನ್ನು ಹಾಕಲಾಗಿದೆ.

    ಜಿಲ್ಲಾಧಿಕಾರಿ ಕಚೇರಿ
    ಕೊವಿಡ್ ನಿಯಂತ್ರಣದಲ್ಲಿ ಅತಿಮುಖ್ಯ ಭೂಮಿಕೆಯಿರುವ ಕಚೇರಿ ಇದು. ಆಹಾರ ಇಲಾಖೆಯಂತಹ ಪ್ರಮುಖ ಇಲಾಖೆಯೂ ಇದೇ ಕಟ್ಟಡದಲ್ಲಿದೆ. ಆದರೆ ಕಂದಾಯ ವಿಭಾಗದಲ್ಲಿ ಸಾಮಾನ್ಯವಾಗಿ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯತಂತ್ರ ರೂಪಿಸುವುದು, ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ಇತ್ಯಾದಿ ನಡೆಯುತ್ತದೆ. ಈಗೀಗ ಜಿಲ್ಲಾಧಿಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೇ ಈ ಸಮಾಲೋಚನೆ ನಡೆಸುವುದು ಹೆಚ್ಚು. ಉಳಿದಂತೆ ಕಚೇರಿಗೆ ಬೇರೆ ಯಾವುದೇ ಕೆಲಸವೂ ಈಗಿಲ್ಲ, ಬಾಕಿ ಇದ್ದ ಕಡತಗಳ ವಿಲೇವಾರಿಯಷ್ಟೇ ಮಾಡುತ್ತಾರೆ. ಹೊಸ ಅರ್ಜಿಗಳು, ಸುತ್ತೋಲೆಗಳು ಬರುತ್ತಿಲ್ಲವಾದ್ದರಿಂದ ಯಾವುದಕ್ಕೂ ಇರಲಿ ಎಂದು ಕೆಲವು ವಿಭಾಗಗಳಲ್ಲಿ 50ರ ಮೇಲ್ಪಟ್ಟ ಸಿಬ್ಬಂದಿಗಳು ರಜೆ ಹಾಕಿ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.

    ಲೋಕೋಪಯೋಗಿ ಇಲಾಖೆಯಲ್ಲಿ ಕಡಿಮೆ ಒತ್ತಡ
    ಲೋಕೋಪಯೋಗಿ ಇಲಾಖೆಯಲ್ಲೂ ಅತಿ ಮುಖ್ಯ ಕಾಮಗಾರಿಗಳನ್ನಷ್ಟೇ ಕೈಗೊಳ್ಳಲು ಅನುವು ಮಾಡಲಾಗಿದೆ. ಮಳೆಗಾಲದ ಮೊದಲು ಆಗಬೇಕಾದ ಕಾಮಗಾರಿಗಳಿಗೆ ಮಾತ್ರವೇ ಅನುಮತಿ ಸಿಗುವ ಸಾಧ್ಯತೆ ಇದೆ. ಹಾಗಾಗಿ ಸಿಬ್ಬಂದಿಗಳಲ್ಲಿ ಟೆಕ್ನಿಕಲ್, ಅಕೌಂಟ್ಸ್ ಹಾಗೂ ಆಡಳಿತ ಮೂರೂ ವಿಭಾಗ ಮಾಡಿ ಅವರಲ್ಲಿ ದಿನದಲ್ಲಿ ಕನಿಷ್ಠ 2 ಮಂದಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕೆಲಸದ ಒತ್ತಡ ಕಡಿಮೆ ಇರುವುದರಿಂದ ಈ ವ್ಯವಸ್ಥೆ ಮಾಡಲಾಗಿದೆ.

    ಉಡುಪಿಯಲ್ಲಿ ಶೇ.90 ನೌಕರರು ಹಾಜರ್
    ಉಡುಪಿ: ಇಪ್ಪತ್ತು ದಿನಗಳಿಂದ ಖಾಲಿ ಖಾಲಿಯಾಗಿದ್ದ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಆರಂಭವಾಗಿದ್ದು, ಏ.20ರಿಂದ ಶೇ.90 ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
    ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು ಪೂರೈಕೆ ಹೀಗೆ ತುರ್ತು ಅಗತ್ಯವಿರುವ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಶೇ.33 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರದಿಂದ ಸರ್ಕಾರದ ನಿರ್ದೇಶನದಂತೆ ಉಳಿದ ಸಿಬ್ಬಂದಿಯೂ ಕಚೇರಿಗೆ ಆಗಮಿಸಿದ್ದಾರೆ. ಆದರೆ ಸಾಮಾನ್ಯ ಕೌಂಟರ್‌ಗಳು ತೆರೆದಿಲ್ಲ. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಯಥಾಸ್ಥಿತಿ ಮುಂದುವರಿದೆ.

    ಪಾಸ್ ಕೇಳಲು ಬರುವವರೇ ಅಧಿಕ
    ತರಕಾರಿ, ಹಣ್ಣುಗಳನ್ನು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಟ ಮಾಡಲು, ಇನ್ನೊಂದು ಜಿಲ್ಲೆಗೆ ಭೇಟಿ ನೀಡಲು, ಪಾಸ್‌ಗಳ ವಿಚಾರಣೆಗೆ ತಾಲೂಕು ಕಚೇರಿಗಳಿಗೆ ಹಲವರು ಭೇಟಿ ನೀಡುತ್ತಿದ್ದಾರೆ. ದಿನಕ್ಕೆ ಹೀಗೆ 30ರಿಂದ 35 ಅರ್ಜಿಗಳು ತಹಸೀಲ್ದಾರ್‌ಗೆ ಸಲ್ಲಿಕೆಯಾಗುತ್ತಿವೆ.

    ತಾಲೂಕು ಕಚೇರಿಯಲ್ಲಿ ಕಚೇರಿ ಹಾಗೂ ಫೀಲ್ಡ್ ವರ್ಕ್ ಇದೆ. ಒಬ್ಬರು ಕಂದಾಯ ನಿರೀಕ್ಷಕರು ಸೇರಿ 15 ಮಂದಿ ಗ್ರಾಮ ಲೆಕ್ಕಾಧಿಕಾರಿಗಳು ಫೀಲ್ಡ್‌ನಲ್ಲಿದ್ದಾರೆ. ಕೆಲವರಿಗೆ ನಿರಾಶ್ರಿತ ಕೇಂದ್ರದ ಉಸ್ತುವಾರಿ, ವಲಸೆ ಕಾರ್ಮಿಕರಿಗೆ ಕಿಟ್ ವಿತರಣೆ ಜವಾಬ್ದಾರಿ ವಹಿಸಲಾಗಿದೆ. ಉಳಿದವರಿಗೆ ಹಳೇ ಕಡತಗಳ ವಿಲೇ ಮಾಡಲು ಸೂಚಿಸಲಾಗಿದೆ. ಒಟ್ಟು 45 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಪ್ರದೀಪ್ ಕುರ್ಡೇಕರ್
    ಉಡುಪಿ ತಹಸೀಲ್ದಾರ್

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೇ.90 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಹೆಚ್ಚಿನ ಸಿಬ್ಬಂದಿ ಕೊವಿಡ್ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿದ್ದಾರೆ. ಉಳಿದವರಿಗೆ ಹಳೆ ಕಡತಗಳನ್ನು ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಆಯಾ ಇಲಾಖೆ ಮುಖ್ಯಸ್ಥರೇ ಸಿಬ್ಬಂದಿ ಹಾಜರಾತಿಯನ್ನು ನಿರ್ಧರಿಸಲಿದ್ದಾರೆ.
    ಸದಾಶಿವ ಪ್ರಭು
    ಅಪರ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts