More

    ಸರ್ಕಾರಿ ಪ್ರೌಢಶಾಲೆಗಾಗಿ ಸಹಿ ಸಂಗ್ರಹ!

    ಬೆಳಗಾವಿ: ಗಡಿಭಾಗದಲ್ಲಿ ಕನ್ನಡ ಗಟ್ಟಿಗೊಳಿಸುವ ಕೈಂಕರ್ಯ ಇಟ್ಟುಕೊಂಡು ಹಲವು ಹೋರಾಟಗಳು ನಡೆದಿವೆ. ಸರ್ಕಾರಗಳು ಕೂಡ ಕನ್ನಡತನ ಬಿತ್ತುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಆ ಯೋಜನೆಗಳು ಕೆಲವೊಮ್ಮೆ ಇಚ್ಛಾಶಕ್ತಿ ಕೊರತೆಯಿಂದ ಗರಿಷ್ಠ ಮಟ್ಟದಲ್ಲಿ ಅನುಷ್ಠಾನವಾಗುತ್ತಿಲ್ಲ. ಅಂಥದ್ದೇ ಸಮಸ್ಯೆಯನ್ನು ಗಳತಗಾ ಗ್ರಾಮಸ್ಥರು ಎದುರಿಸುತ್ತಿದ್ದು, ಹಲವು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ ಆರಂಭಿಸುವ ಬೇಡಿಕೆ ಈಡೇರಿಸಿಕೊಳ್ಳಲು ಇಂದಿಗೂ ಹೆಣಗುತ್ತಿದ್ದಾರೆ. ಆದರೂ ಕನಸು ಸಾಕಾರವಾಗಿಲ್ಲ.

    ಗಡಿಭಾಗದ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕೆನ್ನುವ ಗ್ರಾಮಸ್ಥರ ಬೇಡಿಕೆ ಹಲವು ವರ್ಷಗಳದ್ದು. ಆದರೆ, ಇದಕ್ಕೆ ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗದ ಕಾರಣ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ‘ನಮ್ಮೂರಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರುಗೊಳಿಸಿ’ ಎನ್ನುವ ಆಶಯದಡಿ ವಿದ್ಯಾರ್ಥಿಗಳ ಪಾಲಕರಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಹೇಗಾದರೂ ಮಾಡಿ ಶಾಲೆ ಪಡೆಯಲೇಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ 600ಕ್ಕಿಂತ ಅಧಿಕ ಪಾಲಕರು ಸಹಿ ಹಾಕಿದ್ದು, ಶೀಘ್ರ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಸರ್ಕಾರದ ಮೇಲೆ ಒತ್ತಡ ತರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ಸುತ್ತಲಿನ ಗ್ರಾಮಗಳಲ್ಲಿಲ್ಲ ಪ್ರೌಢಶಾಲೆ: ಗಳತಗಾ ಸುತ್ತಮುತ್ತ ಬೇಡಕಿಹಾಳ, ಭೋಜ, ಶಮನೇವಾಡಿ, ಖಡಕಲಾಟ, ಮಮದಾಪುರ, ಅಕ್ಕೋಳ ಗ್ರಾಮಗಳಿವೆ. ಆದರೆ, ಯಾವ ಗ್ರಾಮಗಳಲ್ಲೂ ಸರ್ಕಾರಿ ಪ್ರೌಢಶಾಲೆ ಇಲ್ಲ. ಇದರಿಂದ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಭರಿಸಿ, ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಅನುದಾನಿತ ಶಾಲೆಯೇ ಆಧಾರ: ಗಳತಗಾ ಗ್ರಾಮಕ್ಕೆ 55 ವರ್ಷಗಳ ಹಿಂದೆ ಅನುದಾನಿತ ಶಾಲೆ ಮಂಜೂರಾಗಿದೆ. ಆಗಿನ ಕಾಲಕ್ಕೆ ಹೋಲಿಸಿದರೆ ಈಗ ಗ್ರಾಮದ ಜನಸಂಖ್ಯೆ ಹೆಚ್ಚಿದೆ. ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ. ಸುತ್ತಲಿನ ಎಂಟ್ಹತ್ತು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಗಳತಗಾದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಿದರೆ, ಬಡ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎನ್ನುತ್ತಾರೆ ಗ್ರಾಮಸ್ಥರಾದ ದುಂಡಪ್ಪ ಕಮತನೂರೆ, ರಸವಂತಿ ಕಾಮಣ್ಣವರ.
    ಯಾವುದೇ ಗ್ರಾಮದಲ್ಲಿ ಅನುದಾನಿತ ಪ್ರೌಢಶಾಲೆ ಇದ್ದರೆ, ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮಂಜೂರಾತಿ ನೀಡಲು ಸರ್ಕಾರಿ ನಿಯಮದಲ್ಲಿ ಅವಕಾಶವಿಲ್ಲ. ಆದರೆ, ಗಡಿಭಾಗ ಗಳತಗಾ ಹೆಚ್ಚಿನ ಜನಸಂಖ್ಯೆ ಹೊಂದಿದ್ದರಿಂದ ಸರ್ಕಾರಿ ನಿಯಮವನ್ನೇ ಸಡಿಲಗೊಳಿಸಿ, ಸರ್ಕಾರಿ ಪ್ರೌಢಶಾಲೆ ಮಂಜೂರುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ, ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ಉಪನಿರ್ದೇಶಕ ಗಜಾನನ ಮನ್ನಿಕೇರಿ ಪ್ರತಿಕ್ರಿಯಿಸಿದ್ದಾರೆ.

    ಪ್ರೌಢಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ ಮಕ್ಕಳು

    ಗಳತಗಾ ಗ್ರಾಮ 18 ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗಳತಗಾ, ದಿಲಾಲಪುರವಾಡಿ, ಹಳ್ಳದಕಟ್ಟಿ, ಶಿಲಂಗಡಿ ಮರಡಿ, ಭೀಮಾಪುರವಾಡಿಯಲ್ಲಿ 8 ಸರ್ಕಾರಿ ಪ್ರಾಥಮಿಕ ಹಾಗೂ 2 ಖಾಸಗಿ ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿ 1,211 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವರು ಗಳತಗಾದಲ್ಲೇ ಪ್ರೌಢಶಿಕ್ಷಣ ಪಡೆದರೆ, ಇನ್ನೂ ಕೆಲವರು ನಿಪ್ಪಾಣಿ, ಬೇಡಕಿಹಾಳ, ಬೋರಗಾಂವ ಮತ್ತು ಯಕ್ಸಂಬಾಗೆ ತೆರಳಿ ಅಭ್ಯಾಸ ಕೈಗೊಳ್ಳುತ್ತಾರೆ. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಹಲವು ವಿದ್ಯಾರ್ಥಿಗಳು 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ, ಪ್ರೌಢ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ.

    ಗಳತಗಾ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಅಗತ್ಯ ಹೆಚ್ಚಿದೆ. ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದು, ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ಪ್ರೌಢಶಾಲೆಯ ಕನಸು ನನಸಾದರೆ ಸುತ್ತಲಿನ ಗ್ರಾಮಗಳ ಬಡ ಮಕ್ಕಳಿಗೆ ಅನುಕೂಲವಾಗಲಿದ್ದು, ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆದಾಡುವುದು ತಪ್ಪಲಿದೆ. ಸರ್ಕಾರ ಮನಸ್ಸು ಮಾಡಬೇಕಷ್ಟೇ.
    | ಶ್ರೀಕಾಂತ ಬನ್ನೆ ಗ್ರಾಪಂ ಮಾಜಿ ಅಧ್ಯಕ್ಷ

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts