More

    ಗೋಪಾಲ ಗೌಡರ ನಾಯಕತ್ವಕ್ಕೆ ಸರಿಸಾಟಿಯಿಲ್ಲ

    ಶಿವಮೊಗ್ಗ: ವಿಧಾನಸೌಧವನ್ನೇ ನಡುಗಿಸಿದ ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲ ಗೌಡರು. ನಾಯಕತ್ವ ವಿಚಾರದಲ್ಲಿ ಅವರಿಗೆ ಸರಿಸಾಟಿ ಮತ್ತೊಬ್ಬರಿರಲಿಲ್ಲ ಎಂದು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಬಣ್ಣಿಸಿದರು.

    ಎನ್‌ಇಎಸ್‌ನ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರ ಜನ್ಮಶತಮಾನೋತ್ಸವದಲ್ಲಿ ಅವರ ಬದುಕು ಮತ್ತು ಹೋರಾಟ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಎಲ್ಲ ಶಾಸಕರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ರೂಪಿಸಲಾಗಿತ್ತು. 22 ಸಾವಿರ ರೂ. ಪಾವತಿಸಿ ಹಕ್ಕುಪತ್ರ ಪಡೆಯಬಹುದಾಗಿತ್ತು. ಅಂತಹ ಅವಕಾಶ ತಿರಸ್ಕರಿಸಿದ ಗೋಪಾಲ ಗೌಡರು, ವಸತಿ ಹೀನರಿಗೆ ನಿವೇಶನ ಕೊಟ್ಟು ಉಳಿದರೆ ನನಗೆ ನೀಡಿ ಎಂದು ಪ್ರತಿಕ್ರಿಯಿಸಿದ್ದನ್ನು ಸ್ಮರಿಸಿದರು.
    ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಮಾಜವಾದಿ ಚಿಂತನೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯವಿದೆ. ಕೂಡು ಕುಟುಂಬದ ದೊಡ್ಡ ವಿಸ್ತರಣೆಯೇ ಸಮಾಜವಾದ. ಒಟ್ಟು ಸಂಪನ್ಮೂಲವನ್ನು ಸಮಾಜದ ಪ್ರತಿಯೊಬ್ಬರಿಗೂ ಹಂಚಿಕೆಯಾಗುವಂತೆ ಮಾಡುವುದೇ ಸಮಾಜವಾದದ ಪರಿಕಲ್ಪನೆ. ಅಂತಹ ಚಿಂತನೆಗಳನ್ನು ಚಳವಳಿಗಳ ಮೂಲಕ ಜನರ ಮನದಲ್ಲಿ ಬಿತ್ತರಿಸುವ ಕಾರ್ಯ ನಡೆಸಿದ ಅದ್ಭುತ ವ್ಯಕ್ತಿತ್ವ ಗೋಪಾಲಗೌಡರು ಎಂದು ಹೇಳಿದರು.
    ಸಾಹಿತಿ ಡಾ. ಎಂ.ಬಿ.ನಟರಾಜ ಮಾತನಾಡಿ, ಶಿಕ್ಷಕರು ಸಮಾಜದ ಪ್ರಭಾವಿ ಮಾಧ್ಯಮ. ಒಂದೇ ವೇದಿಕೆಯಲ್ಲಿ ನೂರಾರು ಭಾವಿ ಪ್ರಜೆಗಳನ್ನು ರೂಪಿಸುವ ಶಕ್ತಿ ಅವರಿಗಿದೆ. ಗೋಪಾಲ ಗೌಡರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲ ಗೌಡರಂತಹ ರಾಜಕಾರಣಿಯ ಬದುಕು ಇಂದಿನ ಪೀಳಿಗೆಗೆ ಬಹಳ ದೊಡ್ಡ ಅಶ್ಚರ್ಯವೇ ಸರಿ ಎಂದು ಹೇಳಿದರು.
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ರೈತ ಮುಖಂಡ ಕೆ.ಟಿ.ಗಂಗಾಧರ, ಕುವೆಂಪು ಶತಮಾನೋತ್ಸವ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಧು, ಅಲ್ ಮೊಹಮದ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಸೋಮಶೇಖರ್, ಪದಾಧಿಕಾರಿಗಳಾದ ಮಹಾದೇವಿ, ಪ್ರತಿಮಾ ಡಾಕಪ್ಪ, ಬಿ.ಟಿ.ಅಂಬಿಕಾ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಕೆ.ಚಿದಾನಂದ, ಲೇಖಕ ಬಿ.ಚಂದ್ರೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts