More

    ಪದವೀಧರರಿಗೆ ಮುಂಬಡ್ತಿ, ಶಾಲಾ ಶಿಕ್ಷಕರಿಗೆ ಗುಡ್​ನ್ಯೂಸ್; ಶೇ.60 ಹುದ್ದೆಗೆ ನೇರ ನೇಮಕಾತಿ, ಶೇ.40 ಹುದ್ದೆ ಬಡ್ತಿ

    ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ. 6ರಿಂದ 8ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಶೇ.40 ಹುದ್ದೆಗಳಿಗೆ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

    ಆರ್ಥಿಕ ಇಲಾಖೆಯು ಕರ್ನಾಟಕ ಶಿಕ್ಷಣ ಇಲಾಖೆಯ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ/ನೇಮಕಾತಿ) ನಿಯಮಗಳಲ್ಲಿ 6ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿ ನಿಯಮವನ್ನು ಮಾರ್ಪಡಿಸಲು ಅವಕಾಶ ಕಲ್ಪಿಸಿದೆ. ಶೇ.60 ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಶೇ.40 ಹುದ್ದೆಗಳನ್ನು ಸೇವಾನಿರತ ಪ್ರಾಥಮಿಕ ಶಿಕ್ಷಕರ ವೃಂದದಿಂದ ಮುಂಬಡ್ತಿ ಮೂಲಕ ಭರ್ತಿಗೆ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯೂ ಸಮ್ಮತಿಸಿದೆ.

    ಸದ್ಯ ರಾಜ್ಯದಲ್ಲಿ 1.53 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಅಂದಾಜು 85 ಸಾವಿರ ಶಿಕ್ಷಕರು ಪದವೀಧರರಾಗಿದ್ದಾರೆ. ಮುಂದಿನ ಬಾರಿ 6ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಅದರಲ್ಲಿ ಶೇ.40 ಹುದ್ದೆಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ದೊರೆಯಲಿದೆ. ಆರ್ಥಿಕ ಇಲಾಖೆ ಅನುಮತಿಗೂ ಮುನ್ನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಾಗೂ ಕಾನೂನು ಇಲಾಖೆ ಕೂಡ ಒಪ್ಪಿಗೆ ನೀಡಿದೆ. ಮುಂಬಡ್ತಿಗೆ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಇದೀಗ ಶಿಕ್ಷಣ ಇಲಾಖೆ ನಿಯಮಗಳನ್ನು ರೂಪಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬಹುದಾಗಿದೆ.

    ಬಹುದಿನಗಳ ಬೇಡಿಕೆ: ಶಿಕ್ಷಕರ ನೇಮಕಾತಿಯಲ್ಲಿ ಸಿ ಆಂಡ್ ಆರ್ ನಿಯಮ ತಿದ್ದುಪಡಿ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. 2017ರಲ್ಲಿ ಶೇ.25 ಶಿಕ್ಷಕರಿಗೆ ಪರೀಕ್ಷೆ ನಡೆಸಿ ಮುಂಬಡ್ತಿ ನೀಡಲು ಒಪ್ಪಿಗೆ ನೀಡಿತು. ಬಿ,ಸಿ,ನಾಗೇಶ್ ಅವರು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವರಾದ ಬಳಿಕ ಅದನ್ನು ಶೇ.33ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಅದನ್ನು ಶೇ.40ಕ್ಕೆ ಹೆಚ್ಚಿಸಿರುವುದು ಮಾತ್ರವಲ್ಲ, ಶಿಕ್ಷಕರನ್ನು ಪರೀಕ್ಷೆ ನಡೆಸದೆ ಮುಂಬಡ್ತಿ ನೀಡುವುದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದು ಖುಷಿ ನೀಡಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾವ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಏನೆಲ್ಲ ಪ್ರಕ್ರಿಯೆಗಳು ಬಾಕಿ ಇವೆ?: ವೃಂದ ಮತ್ತು ನೇಮಕಾತಿಗೆ ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಾಗೂ ಕಾನೂನು ಇಲಾಖೆ ಒಪ್ಪಿಗೆ ನೀಡಿರುವ ಆಧಾರದಲ್ಲಿ ಶಿಕ್ಷಣ ಇಲಾಖೆ ನಿಯಮಗಳನ್ನು ರೂಪಿಸಬೇಕಿದೆ. ಈ ನಿಯಮಗಳ ಕರಡು ತಯಾರಿಸಿ ವಿಧಾನಮಂಡಲ ಅಧಿವೇಶನದಲ್ಲಿ ರ್ಚಚಿಸಬೇಕು. ಬಳಿಕ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಬೇಕು. ಆನಂತರ ಹೊಸ ನಿಯಮವನ್ನು ಅಳವಡಿಸಿಕೊಳ್ಳಲಾಗುತ್ತದೆ.

    ಮುಂದಿನ ನೇಮಕಕ್ಕೆ ಅನ್ವಯ: ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪದವೀಧರ ಶಿಕ್ಷಕರನ್ನು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಸೇವಾ ಜ್ಯೇಷ್ಠತೆಯೊಂದಿಗೆ 6ರಿಂದ 8ನೇ ತರಗತಿಗೆ ನಿಯುಕ್ತಿಗೊಳಿಸಲು ಶಿಕ್ಷಕರ ಸಂಘವು ಕೋರಿತ್ತು. ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದರಿಂದ ಹೊಸ ನಿಯಮವನ್ನು ಮುಂದಿನ ನೇಮಕಾತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂದು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಸದ್ಯ 6ರಿಂದ 8ನೇ ತರಗತಿಗೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಪರಿಶೀಲಿಸುವಂತೆ ಸೂಚನೆ ನೀಡಿದ್ದೆ. ಎಲ್ಲ ಪರಿಶೀಲನೆ ಮುಗಿದಿರುವುದರಿಂದ ಪದವೀಧರ ಶಿಕ್ಷಕರಿಗೆ ಅನುಕೂಲವಾಗಿದೆ ಎಂದು ಪ್ರತಿಕ್ರಿಯಿಸಿದರು.

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts