ಗೊಳಸಂಗಿ: ಇತ್ತೀಚಿನ ದಿನಗಳಲ್ಲಿ ಶಾಲೆ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರದ ಬಿಸಿಯೂಟ ಯೋಜನೆಯನ್ನು ಸಾರ್ಥಕಗೊಳಿಸಲು ಶಿಕ್ಷಕರು ನಿರ್ಲಕ್ಷೃ ವಹಿಸಬಾರದೆಂದು ಶಿಕ್ಷಣ ಸಂಯೋಜಕ ಜಿ.ಎಸ್. ಗಣಿಯಾರ ಹೇಳಿದರು.
ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ಮೊಟ್ಟೆ ಮತ್ತು ಬಾಳೆಹಣ್ಣು ಪೂರೈಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆರಂಭಿಕ ಹಂತದಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಜಾರಿಯಾದ ಈ ಯೋಜನೆಯ ಸಾಧಕ ಬಾಧಕಗಳನ್ನು ಗುರುತಿಸಿ ರಾಜ್ಯವ್ಯಾಪಿ ವಿಸ್ತರಿಸುವ ಗುರಿ ಹೊಂದಿದ್ದು, ಶಿಕ್ಷಕರು ಮುತುವರ್ಜಿ ವಹಿಸಬೇಕು. ಅಲ್ಲದೆ, ತಿಂಗಳ ಕೊನೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಅದೆಷ್ಟರ ಮಟ್ಟಿಗೆ ನಿವಾರಣೆಯಾಗಿದೆ ಎಂಬ ಮಾಹಿತಿಯನ್ನೂ ಇಲಾಖೆಗೆ ನೀಡಬೇಕು ಎಂದರು.
ಮುಖ್ಯಗುರು ಎಸ್.ಬಿ. ಪಾಗದ ಮಾತನಾಡಿ, ನಮ್ಮ ಶಾಲೆಯ 1 ರಿಂದ 7ನೇ ತರಗತಿಯಲ್ಲಿ 296 ಮಕ್ಕಳು ಕಲಿಯುತ್ತಿದ್ದು, ಬುಧವಾರ ಶಾಲೆಗೆ ಬಂದಂತಹ 235 ಮಕ್ಕಳಲ್ಲಿ 14 ವಿದ್ಯಾರ್ಥಿಗಳು ಬಾಳೆಹಣ್ಣು ಸ್ವೀಕರಿಸಿದರೆ, 221 ಮಕ್ಕಳು ಮೊಟ್ಟೆ ಪಡೆದರು. ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ದೇವಕ್ಕಿ ದಳವಾಯಿ, ಶಿಕ್ಷಕರಾದ ಬಿ.ಬಿ. ಚಿಂಚೋಳಿ, ಎಸ್.ಎಚ್. ದಶವಂತ, ಎಸ್.ಎಲ್. ಕುಂದರಗಿ, ಎಸ್.ಎಂ. ಹಿರೇಮಠ, ಎನ್.ಎಂ. ತಾವರಖೇಡ, ಪಿ.ಆರ್. ಕೋಚಿ, ಬಿ.ಐ. ಚಲ್ಮಿ, ಎಲ್.ಎ್. ಗೋಕಾವಿ, ಎಚ್.ಡಿ. ನದ್ಾ, ಎಂ.ಬಿ. ಬಳಮಕರ ಇದ್ದರು.