More

    ಸಂಗೀತ ಕಲೆ ಉಳಿಸಲು ಬೇಕು ಸಂಘಟಿತ ಪ್ರಯತ್ನ

    ಗೋಕರ್ಣ: ಸಂಗೀತ ಕಲೆಯ ವಿಭಿನ್ನ ಪ್ರಕಾರ ಮತ್ತು ವಿವಿಧ ಆಯಾಮಗಳನ್ನು ಉಳಿಸಿ-ಬೆಳೆಸಲು ಸಂಘಟಿತ ಪ್ರಯತ್ನದ ಅಗತ್ಯವಿದೆ. ಈ ಮಹಾನ್ ಕಾರ್ಯ ಸಂಗೀತ ಕ್ಷೇತ್ರದ ಶ್ರೇಷ್ಠ ಕಲಾವಿದರ ಸಹಕಾರದಿಂದ ಮಾತ್ರ ಸಾಧ್ಯವಿದೆ. ಈ ಕಾರ್ಯಕ್ಕೆ ಸಂಗೀತ ಕಲಾ ಸಾಮ್ರಾಜ್ಯದ ಎಲ್ಲ ಮೇರು ಕಲಾವಿದರು ಒಟ್ಟಾಗಿ ಕೈಜೋಡಿಸಬೇಕು ಎಂದು ಚಾತುರ್ಮಾಸ್ಯ ವ್ರತನಿರತ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
    ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯ ನಿಮಿತ್ತ ಬುಧವಾರ ಆಯೋಜಿಸಿದ್ದ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಆಲಿಸಿದ ಬಳಿಕ ಮೇರು ಕಲಾವಿದರನ್ನು ಸನ್ಮಾನಿಸಿ ಅವರು ಆಶೀರ್ವದಿಸಿದರು.
    ಸಂಗೀತಕ್ಕೆ ಅದರದ್ದೆ ಆದ ಮಾಂತ್ರಿಕ ಶಕ್ತಿಯಿದೆ. ಕಾರಣ ಸಂಗೀತ ಕಲೆಯನ್ನು ಉಳಿದ ಪ್ರಕಾರದ ಶಿಕ್ಷಣದ ಜತೆಗೆ ಕಲಿಸುವ ಬದಲು ಈ ಗಂಧರ್ವ ಕಲೆಗಳಿಗಾಗಿಯೇ ಪ್ರತ್ಯೇಕ ಗುರುಕುಲ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
    ಪ್ರವೀಣ ಗೋಡ್ಖಿಂಡಿ ಮಾತನಾಡಿ, ಸಂಗೀತ ಕಲೆ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ಇತರ ವಿಷಯಗಳನ್ನು ಕಲಿಯುವಲ್ಲಿ ಸಂಗೀತ ಕಲೆ ಪೂರಕವಾಗಿದೆ. ಇದು ವಿದ್ಯಾರ್ಥಿಗಳ ಜ್ಞಾಪನಾಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ಕಾರಣ ಸಂಗೀತ ಶಿಕ್ಷಣ ಕ್ಷೇತ್ರದ ವಿವಿಧ ಇತರ ವಿಷಯಗಳ ಜೆತೆಗೂಡಿ ಸಾಗುವಂತಾಗಬೇಕು ಎಂದರು.
    ಪಂಡಿತ್ ರವೀಂದ್ರ ಯಾವಗಲ್ ತಬಲಾ ಸಹಯೋಗವಿತ್ತರು. ಹಿರಿಯ ಕಲಾವಿದ ಕಡತೋಕಾ ಶಂಭು ಭಟ್ಟ, ಹಿಂದುಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ, ಗುರುಕುಲ ಪ್ರಾಚಾರ್ಯ ನೃಸಿಂಹ ಭಟ್ಟ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts