More

    ಗೋಕಾಕದಲ್ಲಿ ಮರಳು ಸಾಗಣೆ ಅವ್ಯಾಹತ

    ಗೋಕಾಕ : ಲಾಕ್‌ಡೌನ್ ನಡುವೆಯೂ ಗೋಕಾಕದಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಯಿಂದಲೇ ಮರಳು ತುಂಬಿದ ಲಾರಿಗಳು ರಾಜಾರೋಷವಾಗಿ ಓಡಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಸಮೀಪದ ಗಟ್ಟಿಬಸವಣ್ಣ ಏತ ನೀರಾವರಿ ಬಳಿಯ ಮಾರ್ಕಂಡೇಯ ನದಿಯಿಂದ ಮರಳು ಸಾಗಣೆ ನಿರಾತಂಕವಾಗಿ ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಮಾರ್ಕಂಡೇಯ ನದಿಯಿಂದ ಎತ್ತಿದ ಸುಮಾರು 103 ಟ್ರಿಪ್ ಮರಳನ್ನು ಸಮೀಪದ ಕನಸಗೇರಿ ಗ್ರಾಮದಲ್ಲಿ ಶೇಖರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಲಾಕ್‌ಡೌನ್ ಮಧ್ಯೆಯೂ ಮರಳು ತುಂಬಿದ ಲಾರಿಗಲು ಯಾವುದೇ ಅಡೆತಡೆ ಇಲ್ಲದೆ ಓಡಾಡುತ್ತಿವೆ.

    ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎನ್ನಲಾಗುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಒಂದಕ್ಕೊಂದು ಸಾಮ್ಯತೆ ಇಲ್ಲದ ಉತ್ತರಗಳು ಬರುತ್ತಿವೆ. ಡಿಎಸ್ಪಿ ಡಿ.ಟಿ. ಪ್ರಭು ಅವರು, ಇದು ಸೀಜ್ ಮಾಡಿದ ಸ್ಯಾಂಡ್ ಎನ್ನುತ್ತಾರೆ. ಇನ್ನು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರನ್ನು ಕೇಳಿದರೆ, 3-4 ಟ್ರಿಪ್ ಸೀಜ್ ಮಾಡಿದ ಮರಳು ಸಾಗಿಸುತ್ತಿರಬೇಕು, ಈ ಕುರಿತು ಮಾಹಿತಿ ಪಡೆದು ಹೇಳುತ್ತೇನೆ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಆರ್. ಗಾಣಿಗೇರ ಅವರನ್ನು ವಿಚಾರಿಸಿದರೆ, ಸುಮಾರು 30 ಟ್ರಿಪ್ ಮರಳು ಸಾಗಿಸಲಾಗುತ್ತಿದ್ದು, ಅದರ ಬಾಬತ್ತು 3 ಲಕ್ಷ 40 ಸಾವಿರ ರೂ. ಪಾವತಿಯಾಗಿದೆ ಎನ್ನುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮರಳು ಸಾಗಣೆ ಮಾಡುವ ಅನಿವಾರ್ಯತೆಯಾದರೂ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಹೈಕೋರ್ಟ್‌ಗೆ ದೂರು ಸಲ್ಲಿಸುವೆ

    ಲಾಕ್‌ಡೌನ್ ಮಧ್ಯೆಯೂ ಗೋಕಾಕದಲ್ಲಿ ಮರಳು ಸಾಗಿಸುತ್ತಿದ್ದು, ಕ್ರಮಕ್ಕೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ನೀರು, ತರಕಾರಿ ಸೇರಿ ಜೀವನಾವಶ್ಯಕ ವಸ್ತುಗಳನ್ನು ತರಲು ಬಂದ ಜನರನ್ನು ಮನಬಂದಂತೆ ಥಳಿಸುತ್ತಿರುವ ಪೊಲೀಸರು ಮರಳು ಲಾರಿಗಳನ್ನು ಹೇಗೆ ಬಿಟ್ಟರು? ಈಗ ಮರಳಿನ ಅವಶ್ಯಕತೆ ಏನಿತ್ತು? ಲೋಕೋಪಯೋಗಿ ಇಲಾಖೆ ಎಲ್ಲ ನಿಯಮ ಗಾಳಿಗೆ ತೂರಿ ಮರಳು ಸಾಗಣೆಗೆ ಹೇಗೆ ಅವಕಾಶ ಮಾಡಿಕೊಟ್ಟಿತು? ಕಂದಾಯ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎಂಬೆಲ್ಲ ವಿಷಯಗಳನ್ನೆತ್ತಿಕೊಂಡು ಹೈಕೋರ್ಟ್ ಮೊರೆ ಹೋಗುತ್ತೇನೆ. ಮನಬಂದಂತೆ ಕೆಲಸ ಮಾಡುವ ಅಧಿಕಾರಿಗಳಿಗೆ ಕಾನೂನು ಮೂಲಕ ಪಾಠ ಕಲಿಸಲಾಗುವುದು. ಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯವೇ? ಜನರ ಹಿತಕಾಯುವ ಜವಾಬ್ದಾರಿ ಆಡಳಿತ ಪಕ್ಷದವರಷ್ಟೇ ನಮ್ಮ ಮೇಲೂ ಇದೆ ಎಂದು ಶಾಸಕ ಸತೀಶ ತೀಕ್ಷ್ಣವಾಗಿ ಪ್ರತಿಕ್ರಿಸಿದರು.

    | ಅಮೋಘ ಡಿ.ಎಂ. ಗೋಕಾಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts