More

    ದೇವರ ವಿಗ್ರಹ ಕೆರೆಗೆ ಎಸೆದಿದ್ದಕ್ಕೆ ರಸ್ತೆ ತಡೆ; ಒಂದು ಗಂಟೆ ಟ್ರಾಫಿಕ್ ಜಾಮ್

    ಶಿವಮೊಗ್ಗ: ಶಾಸಕರೊಬ್ಬರು ದೇವರ ವಿಗ್ರಹವನ್ನು ಕೆರೆಗೆ ಎಸೆದಿದ್ದಾರೆ ಎಂದು ಹೇಳಲಾಗಿದ್ದು, ಈ ಘಟನೆ ಖಂಡಿಸಿ ಕೃಷಿ ಕಾಲೇಜು ಎದುರಿನ ಚನ್ನಮುಂಬಾಪುರ ಬಳಿ ಗುರುವಾರ ಮಧ್ಯಾಹ್ನ ಹಿಂದುಪರ ಸಂಘಟನೆಗಳ ಪ್ರಮುಖರು ಮತ್ತು ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
    ಶಾಸಕರ ಒಡೆತನದ ಶಾಲೆ ಮತ್ತು ಕಾಲೇಜಿಗೆ ಅನುಕೂಲ ಮಾಡಿಕೊಡಲು ಪುರಾತನ ಹಿಂದು ದೇವರ ಕಲ್ಲಿನ ವಿಗ್ರಹವನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಕಲ್ಲಿನ ವಿಗ್ರಹವನ್ನು ಪಕ್ಕದ ಕೆರೆಗೆ ಎಸೆಯಲಾಗಿದೆ. ಈ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹಲವು ವರ್ಷಗಳಿಂದ ಭೂತರಾಯನ ಗುಡಿ ಇದ್ದು ಭೂತರಾಯನ ಪೂಜೆಗೆ ಗ್ರಾಮಸ್ಥರು ಬರುತ್ತಿದ್ದರು. ತಕ್ಷಣವೇ ಶಾಸಕರು ಕ್ಷಮೆ ಕೋರಿ ಭೂತರಾಯನ ಗುಡಿಯನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿದರು.
    ಶಾಸಕರ ಖಾಸಗಿ ಶಾಲೆ-ಕಾಲೇಜಿಗೆ ಹೊಂದಿಕೊಂಡಂತೆ ಕೆರೆ ಇದ್ದು ಕೆರೆ ಏರಿ ಮೇಲೆ ಮರದ ಕೆಳಗೆ ಭೂತರಾಯಪ್ಪನ ಕಲ್ಲಿನ ವಿಗ್ರಹ ಅನೇಕ ವರ್ಷಗಳಿಂದ ಇತ್ತು. ಚನ್ನಮುಂಬಾಪುರ ಸೇರಿದಂತೆ ಸುತ್ತಮುತ್ತಲಿನ ಊರಿನವರು ಪೂಜೆ ಮಾಡುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕುರಿ, ಕೋಳಿ ಬಲಿ ಕೊಡುವ ಮೂಲಕ ಹರಕೆ ತೀರಿಸುತ್ತಿದ್ದರು. ಆದರೆ ಇದರಿಂದ ಶಾಲೆ ಮತ್ತು ಕಾಲೇಜಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಶಾಸಕರು ಈ ಕೃತ್ಯವೆಸಗಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
    ಅನಾದಿ ಕಾಲದಿಂದಿದ್ದ ಭೂತರಾಯಪ್ಪ ದೇವರ ಗುಡಿ ಸುತ್ತಮುತ್ತ ಇತ್ತೀಚೆಗಷ್ಟೇ ಸ್ವಚ್ಛಗೊಳಿಸಿ ಕಾಂಕ್ರೀಟ್ ಹಾಕಲಾಗಿತ್ತು. ಶಾಸಕರ ಮಾಲೀಕತ್ವದ ಶಾಲೆ ಮತ್ತು ಕಾಲೇಜು ಕೆರೆ ಬಫರ್ ಜೋನ್‌ನಲ್ಲಿದ್ದು ಶಾಲೆ-ಕಾಲೇಜನ್ನು ತೆರವುಗೊಳಿಸಬೇಕೆಂದು ಪಟ್ಟು ಹಿಡಿದರು. ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ಎರಡೂ ಬದಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದವು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts