More

    ಶುದ್ಧ ನೀರು ಪೂರೈಸುವಲ್ಲಿ ಅಧಿಕಾರಿಗಳ ನಿರ್ಲಕ್ಷೃ ಆರೋಪಿಸಿ ಪ್ರತಿಭಟನೆ

    ಮುದ್ದೇಬಿಹಾಳ: ನಲ್ಲಿ ಮೂಲಕ ಅಶುದ್ಧ ನೀರು ಪೂರೈಕೆಯಾಗುತ್ತಿದ್ದರೂ ಅದನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ನಿರ್ಲಕ್ಷೃ ತೋರಿಸುತ್ತಿರುವ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ವಿದ್ಯಾನಗರ ಬಡಾವಣೆಯ ಸಿಬಿಎಸ್‌ಇ ಸೆಂಟ್ರಲ್ ಶಾಲೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ರಸ್ತೆಗೆ ಕಲ್ಲುಗಳನ್ನಿಟ್ಟು, ಅಲ್ಲಿಯೇ ಕುಳಿತು ಮಂಗಳವಾರ ದಿಢೀರ್ ಪ್ರತಿಭಟಿಸಿದರು.

    ತಮ್ಮ ಜತೆ ಕೊಡ ಹಾಗೂ ಗ್ಲಾಸ್‌ನಲ್ಲಿ ತಂದಿದ್ದ ಅಶುದ್ಧ, ದುರ್ವಾಸನೆ ಬೀರುವ ನೀರನ್ನು ಪ್ರದರ್ಶಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಇದರಿಂದಾಗಿ ಬಹಳ ಸಮಯದವರೆಗೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು.

    ನಿವಾಸಿಗಳಾದ ವಿಜಯಕುಮಾರ ಬಡಿಗೇರ, ಶರಣು ಮಾಡಗಿ, ರವಿ ಕಮತ, ಮಹಾಂತೇಶ ಹಿರೇಮಠ, ವಿರೂಪಾಕ್ಷಿ ಪತ್ತಾರ, ವಿಜಯ ವಡವಡಗಿ ಮಾತನಾಡಿ, ಹಲವು ದಿನಗಳಿಂದ ಒಳಚರಂಡಿಯ ಕೊಳಚೆ ಮಿಶ್ರಿತ ಅಶುದ್ಧ ನೀರು ಪೈಪ್‌ಗಳ ಮುಖಾಂತರ ಬರುತ್ತಿದೆ. ಶುದ್ಧ ನೀರಿನಂತಿದ್ದರೂ ಕೆಟ್ಟ ವಾಸನೆಯನ್ನೊಳಗೊಂಡಿದೆ. ಇದನ್ನು ಪುರಸಭೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ನೀರು ಕುಡಿದು ಅನಾರೋಗ್ಯಕ್ಕೀಡಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಒಂದು ತಿಂಗಳಿನಿಂದ ಒಳಚರಂಡಿಯ ಕೊಳಚೆ ನೀರು ರಸ್ತೆಯ ಮೇಲೆಲ್ಲ ಹರಿದಾಡುತ್ತಿದೆ. ನಿವಾಸಿಗಳಿಗೆ ನೆಮ್ಮದಿಯ ಜೀವನ ಇಲ್ಲವಾಗಿದೆ. ಕೊಳಚೆ ನೀರಿನಲ್ಲಿಯೇ ಸಂಚರಿಸಬೇಕಿದೆ. ಪುರಸಭೆಯ ಅಧಿಕಾರಿಗಳು ಇದೇ ರಸ್ತೆಯ ಮೇಲೆ ತಿರುಗಾಡಿದರೂ ಪರಿಹಾರಕ್ಕೆ ಕ್ರಮ ಕೈಕೊಂಡಿಲ್ಲ. ಸಮಸ್ಯೆ ಬಗೆಹರಿಸುವಂತೆ ಕೇಳಿದರೆ ಪುರಸಭೆಯವರು ಒಳಚರಂಡಿ ಇಲಾಖೆಯವರ ಮೇಲೆ, ಒಳಚರಂಡಿ ಇಲಾಖೆಯವರು ಪುರಸಭೆಯವರ ಮೇಲೆ ಹೀಗೆ ಒಬ್ಬರ ಮೇಲೆ ಮತ್ತೊಬ್ಬರು ಹಾಕುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ನಿವಾಸಿಗಳ ಮನವೊಲಿಕೆಗೆ ಮುಂದಾದರು. ಈ ವೇಳೆ ಮುಖ್ಯಾಧಿಕಾರಿ, ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ಮುಖ್ಯಾಧಿಕಾರಿ ಎಲ್ಲರೆದುರು ಒಳಚರಂಡಿ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ.

    ನಂತರ ಸ್ಥಳಕ್ಕಾಗಮಿಸಿದ ಪಿಎಸ್‌ಐ ಸಂಜಯ ತಿಪ್ಪರಡ್ಡಿ ತಿಳಿಹೇಳಿ ಪ್ರತಿಭಟನೆ ಕೈಬಿಡುವಂತೆ ಕೋರಿದರು. ಸಮಸ್ಯೆ ಗಂಭೀರತೆ ಅರಿತ ಮುಖ್ಯಾಧಿಕಾರಿ ಅವರು, ಕುಡಿಯುವ ನೀರಿಗಾಗಿ ಹೊಸ ಪೈಪ್‌ಲೈನ್‌ನನ್ನು ಸಿಸಿ ರಸ್ತೆ ಪಕ್ಕದಲ್ಲಿ ಹಾಕಿಸುವುದಾಗಿ ಹಾಗೂ ಬೇಡಿಕೆಯಂತೆ ಬೀದಿ ದೀಪ ಅಳವಡಿಸುವುದಾಗಿ ಭರವಸೆ ನೀಡಿದ ನಂತರವೇ ಪ್ರತಿಭಟನೆ ಕೈಬಿಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts