More

    ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಪುಟ್ಟನಾಯ್ಕ ಸಲಹೆ

    ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪುಟ್ಟನಾಯ್ಕ ತಿಳಿಸಿದರು.
    ನಗರದ ಮಲೆನಾಡು ವಿದ್ಯಾಸಂಸ್ಥೆ, ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ವಿದ್ಯಾರ್ಥಿ ಸಂಘದ ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಲೆಯು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವುದರಿಂದ ವಿದ್ಯಾರ್ಥಿಗಳು ಯಾವುದಾದರೂ ಕಲೆ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಒಳ್ಳೆಯ ಅಂಶಗಳನ್ನು ಮಾತ್ರ ಬಳಸಿಕೊಂಡು ಆ ಮೂಲಕ ಉದ್ಯೋಗದ ವಿವಿಧ ರಂಗಗಳ ಕುರಿತ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿ ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ. ಜೀವನ ಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳು ಎಲ್ಲವನ್ನೂ ಸರಿಸಮಾನವಾಗಿ ತೆಗೆದುಕೊಂಡು ಮುನ್ನಡೆದರೆ ಮಾತ್ರ ಯಶಸ್ಸಿನ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
    ಮಾನವೀಯತೆ ರೂಢಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ. ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
    ಎಂಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಶಿಕ್ಷಣದಲ್ಲಿ ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಆತ್ಮಪ್ರಜ್ಞೆ, ಅಂತಃಸತ್ವ ರೂಢಿಸಿಕೊಳ್ಳಬೇಕು. ಗುರಿ ಇಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.
    ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ ಮಾತನಾಡಿ, ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
    ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎಂಇಎಸ್ ಉಪಾಧ್ಯಕ್ಷೆ ರಾಧಾ ಸುಂದರೇಶ್, ಸಹ ಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಪದನಿಮಿತ್ತ ಸದಸ್ಯೆ ಉಮಾ ನಾಗೇಶ್, ಕಾಲೇಜು ಪ್ರಾಚಾರ್ಯೆ ಜಯಶ್ರೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts