More

    ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೋನಂದಾಜಲ

    ಗಣೇಶ್ ಮಾವಂಜಿ, ಸುಳ್ಯ
    ಪ್ರಕೃತಿದತ್ತ ವಸ್ತುಗಳನ್ನೇ ಬಳಸಿ ಉತ್ಪಾದನೆ ಮಾಡುವ ‘ಗೋನಂದಾಜಲ’ ಎಂಬ ದ್ರವ ಗೊಬ್ಬರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಗೋನಂದಾಜಲ ಗೋವಿನ ಮಹತ್ವ ಹೆಚ್ಚಿಸುವ, ಮರಣಾನಂತರವೂ ಗೋವು ಉಪಯುಕ್ತ ಎನ್ನುವುದನ್ನು ರೈತನಿಗೆ ಮನವರಿಕೆ ಮಾಡುವ ಯಶಸ್ವಿ ಪ್ರಯೋಗ.

    ನಾಲ್ಕು ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಗೊಬ್ಬರ ತಯಾರಿ ಈಗ ಪ್ರಸಿದ್ಧಿಗೆ ಬರುತ್ತಿದೆ. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಭಾಗಗಳಲ್ಲಿ ಬಳಕೆಯಾಗುತ್ತಿದ್ದು, ಕೆಲವರು ಈ ಗೊಬ್ಬರ ಬಳಸಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿದ ಕೃಷಿಕರು, ಮಣ್ಣಿನ ಫಲವತ್ತತೆ ಕ್ರಮೇಣ ನಾಶವಾಗಿ ಕೃಷಿಗೆ ರೋಗ ಬಾಧಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಾವಯವದತ್ತ ಒಲವು ತೋರುತ್ತಿದ್ದಾರೆ.

    ತಯಾರಿ ಹೇಗೆ?: ಸಹಜವಾಗಿ ಮೃತಪಟ್ಟ ಗೋವು ಅಥವಾ ಹೋರಿ, ಸಮಾನ ತೂಕದ ಸೆಗಣಿ, ಮೂತ್ರ, ಮಜ್ಜಿಗೆ ಜತೆಗೆ ಶವವನ್ನು ದೊಡ್ಡ ಪ್ಲಾಸ್ಟಿಕ್ ಟ್ಯಾಂಕ್‌ನಲ್ಲಿ ಇರಿಸಬೇಕು. ಗೋವಿನ ಶರೀರದ ಹತ್ತನೆ ಒಂದು ಭಾಗ ತೂಕದ ಬೆಲ್ಲ ಹಾಗೂ ಅಷ್ಟೇ ಪ್ರಮಾಣದ ಹಣ್ಣು ಅಥವಾ ಕೊಳೆತ ಪಪ್ಪಾಯಿ ಬಳಸಬಹುದು. ಬಳಿಕ ಟ್ಯಾಂಕ್ ಮುಚ್ಚಬೇಕು. ನಾಲ್ಕು ತಿಂಗಳ ಬಳಿಕ ಗೋನಂದಾಜಲ ಸಿದ್ಧ. ಸೆಗಣಿಗೆ ಬದಲಾಗಿ ಗೋಬರ್ ಗ್ಯಾಸ್‌ನ ಸ್ಲರಿ ಬಳಸಬಹುದು. ಗೋಶಾಲೆಗಳಿಂದ ಸೆಗಣಿ ತರಿಸಿ, ಗೋಮೂತ್ರ ಹಾಗೂ ಮಜ್ಜಿಗೆ ಹಾಕಬಹುದು. ಅದಕ್ಕಾಗಿ ಎರಡು ಇಂಚಿನ ಪೈಪ್, ಮುಚ್ಚಳ ಸಹಿತ ಜೋಡಿಸಿದರೆ ಉತ್ತಮ. ಪ್ರಮಾಣ ವ್ಯತ್ಯಾಸ ಆಗಬಾರದು. ಮೃತ ಗೋವು ಲಭ್ಯವಿಲ್ಲದಿದ್ದರೆ ಇತರ ಪ್ರಾಣಿಗಳ ಮೃತದೇಹವನ್ನೂ ಬಳಸಬಹುದು.

    ವರ್ಷದಲ್ಲಿ ಮೂರು ಬಾರಿ ಬಳಕೆ: ಗೋನಂದಾಜಲವನ್ನು ತೋಟಗಾರಿಕಾ ಬೆಳೆಗಳಿಗೆ ಎಕರೆಗೆ ಐದು ಲೀಟರ್‌ನಂತೆ ವರ್ಷದಲ್ಲಿ ಮೂರು ಬಾರಿ ಭೂಮಿಗೆ ನೀಡಬೇಕು. ಸಿಂಪಡಣೆ ಮಾಡುವುದಾದರೆ ನೂರು ಮಿಲಿ ಲೀಟರ್ ಗೋನಂದಾಜಲವನ್ನು 10 ಲೀಟರ್ ನೀರಿಗೆ ಸೇರಿಸಿ ಬಳಸಬಹುದು. ತರಕಾರಿ, ಹೂವಿನ ಗಿಡಗಳ ಬುಡಗಳಿಗೆ ತಲಾ 20 ಎಂ.ಎಲ್. ಗೋನಂದಾಜಲವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಎರೆಯಬೇಕು.(ಐವತ್ತು ಲೀಟರ್ ನೀರಿಗೆ, ಒಂದು ಲೀಟರ್ ಗೋನಂದಾಜಲ-ಇದು ಐವತ್ತು ಗಿಡಗಳಿಗೆ ಎರೆಯಬಹುದು). ನಗರದಲ್ಲಿ ತಾರಸಿ ಗಾರ್ಡನ್ ಮಾಡುವ ಹವ್ಯಾಸಿ ಕೃಷಿಕರೂ ಇದನ್ನು ಬಳಸಬಹುದು.

    ಗೋನಂದಾಜಲವನ್ನು ರೈತನೇ ತಯಾರಿಸುವಂತಾಗಬೇಕು. ಜಿಲ್ಲೆಯ ಕೆಲವೆಡೆ ಕೃಷಿಕರು ತಾವೇ ಈ ದ್ರವ ರೂಪದ ಗೊಬ್ಬರ ಸಿದ್ಧಪಡಿಸಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.
    -ಪ್ರವೀಣ ಸರಳಾಯ
    ಪ್ರಾಂತ ಗೋಸೇವಾ ಪ್ರಮುಖ, ತಯಾರಿಸಿ ಬಳಸುತ್ತಿರುವ ಕೃಷಿಕ

    ಮೃತಪಟ್ಟ ಗೋವು ಲಭ್ಯವಿಲ್ಲದ ಕಾರಣ ಮೃತ ಆಡಿನಿಂದ ದ್ರವ ರೂಪದ ಗೊಬ್ಬರ ತಯಾರಿಸಿ ಅಡಕೆ ಹಾಗೂ ಇತರ ಕೃಷಿಗೆ ಹಾಕಿದ್ದೇನೆ. ತರಕಾರಿ ಹಾಗೂ ಹೂವಿನ ಗಿಡಗಳಿಗೆ ಹಾಕಿದ್ದರಿಂದ ತಕ್ಷಣ ಫಲಿತಾಂಶ ದೊರಕಿದೆ.
    -ಪದ್ಮನಾಭ ಬೊಳ್ಳೂರು, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts