More

    ಶಿಕ್ಷಣ ವ್ಯವಸ್ಥೆ ಗಟ್ಟಿಗೊಳಿಸಲು ಮುಂದಾಗಿ

    ಹುಣಸೂರು: ಶೈಕ್ಷಣಿಕ ವ್ಯವಸ್ಥೆ ಗಟ್ಟಿಗೊಳಿಸುವ ಮತ್ತು ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಶಿಕ್ಷಕರು ಬುದ್ಧಿವಂತಿಕೆ ಮತ್ತು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಕೆ.ಪಾಂಡು ಸೂಚಿಸಿದರು.

    ನಗರದ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ ಹುಣಸೂರು ಉಪವಿಭಾಗ ಮಟ್ಟದ ಅನುಷ್ಠಾನಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮತ್ತು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಕ್ರಿಯಾಯೋಜನೆ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದರು.

    ಅನುಷ್ಠಾನ ಅಧಿಕಾರಿಗಳಾದ ಸಿಅರ್‌ಪಿ, ಬಿಆರ್‌ಸಿ, ಇಸಿಒ, ಬಿಐಇಅರ್‌ಟಿ ಅಧಿಕಾರಿಗಳು ಕೇವಲ ಪಾಠ, ಪುಸ್ತಕ, ಅಕ್ಷರದಾಸೋಹ, ದಾಖಲಾತಿ ಮುಂತಾದ ವಿಷಯಗಳ ಕುರಿತು ವರದಿ ನೀಡಿದರೆ ಸಾಲದು, ಸರ್ಕಾರ ರೂಪಿಸಿದ ಯೋಜನೆಗಳ ಅಂತಃಸತ್ವವನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.

    ಸಿಆರ್‌ಪಿ ಸಂಪನ್ಮೂಲ ವ್ಯಕ್ತಿಯಾಗಿ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ ಎಂದರೆ ಅದರ ನೇರ ಹೊಣೆ ಸಿಆರ್‌ಪಿಯೇ ಆಗುತ್ತಾರೆ ಎನ್ನುವ ನೆನಪು ನಿಮಗಿರಲಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 22:1 ಆಗಿದ್ದು, ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಎಲ್ಲ ಅನುಕೂಲಗಳಿವೆ. ಶಾಲೆಯ ಸುತ್ತಮುತ್ತಲ ಪರಿಸರ ಸ್ವಚ್ಛತೆ, ಶೌಚಗೃಹಗಳ ಸ್ವಚ್ಛತೆಗೆ ಆಯಾ ಗ್ರಾಪಂಗಳ ಸಹಕಾರ ಪಡೆಯಬೇಕು. ಶಾಲಾ ಆವರಣದಲ್ಲಿ ವಿದ್ಯುತ್ ಕಂಬ, ಟಿಸಿ ಮುಂತಾದವುಗಳು ಇದ್ದರೆ ಕೂಡಲೇ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತರಬೇಕು. ಕೊಳವೆಬಾವಿ, ಓವರ್ ಹೆಡ್ ಟ್ಯಾಂಕ್‌ಗಳಿದ್ದರೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಬೇಕು. ಅಕ್ಷರದಾಸೋಹ ಕೊಠಡಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

    ದಾಖಲಾತಿ, ಹಾಜರಾತಿ ಗಮನಿಸಿ: ಜೂನ್ ತಿಂಗಳು ಅತ್ಯಂತ ಮುಖ್ಯವಾದ ತಿಂಗಳಾಗಿದ್ದು, ದಾಖಲಾತಿ ಆಂದೋಲನ ನಡೆಸಬೇಕು. ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಹಂತದ ಶಿಕ್ಷಣಕ್ಕೆ ಹೋಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಶಾಲೆಗೆ ಸೇರಿಸಲು ಬರುವ ಪಾಲಕರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ನಿಮ್ಮಲ್ಲಿ ಅರಿವು ಇರಲಿ. ಆ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಗಮನಿಸಿ ಶಿಕ್ಷಣ ದೊರೆಯುವಲ್ಲಿ ಯಾವುದೇ ತೊಂದರೆ ಎದುರಾಗದಂತೆ ಕ್ರಮವಹಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಸಮುದಾಯುದತ್ತ ಶಾಲೆ ಯೋಜನೆಯಡಿ ಶೈಕ್ಷಣಿಕ ವರ್ಷ ಕಾರ್ಯಕ್ರಮಗಳ ಕುರಿತು ಡಿಟಿಪಿ ಮಾಡಿಸಿ ಗ್ರಾಮದ ಮುಖಂಡರಿಗೆ ಮಾಹಿತಿ ನೀಡುವ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಹುಣಸೂರು, ಕೆ.ಅರ್.ನಗರ, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನ 143ಕ್ಕೂ ಹೆಚ್ಚು ಸಿಆರ್‌ಪಿ, ಬಿಆರ್‌ಪಿ, ಇಸಿಒ, ಬಿಐಇಆರ್‌ಟಿಗಳು, ನಾಲ್ವರು ಬಿಆರ್‌ಸಿಗಳು, ನಾಲ್ವರು ಟಿಪಿಇಒಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಬಿಇಒಗಳಾದ ಎಸ್.ರೇವಣ್ಣ, ಪಿರಿಯಾಪಟ್ಟಣದ ಬಸವರಾಜು, ಕೆ.ಆರ್.ನಗರದ ಕೃಷ್ಣಪ್ಪ, ಎಚ್.ಡಿ.ಕೋಟೆಯ ಮಾದಯ್ಯ, ಬಿಆರ್‌ಸಿ ಕೆ.ಸಂತೋಷ್‌ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts