More

    ಜಿ-20 ಶೃಂಗಕ್ಕೆ ಸಿಸಿ ಕ್ಯಾಮರಾ ಕಣ್ಗಾವಲು, ಜಾಗತಿಕ ಮಟ್ಟದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ

    ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಲಾಗಿರುವ ಜಿ-20 ಶೃಂಗ ಸಭೆಯಲ್ಲಿ ವಿವಿಧ ದೇಶಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹಂಪಿ ಹಾಗೂ ಕಮಲಾಪುರ ಭಾಗದಲ್ಲಿ 150ಕ್ಕೂ ಹೆಚ್ಚು ಸಿಸಿ ್ಯಮರಾಗಳನ್ನು ಅಳವಡಿಸಲಾಗುತ್ತಿದೆ.

    ಜಿ-20ಶೃಂಗ ಸಭೆಯಲ್ಲಿ 20 ಸದಸ್ಯ ರಾಷ್ಟ್ರಗಳು ಹಾಗೂ 40ಕ್ಕೂ ಹೆಚ್ಚು ದೇಶಗಳ ಆಹ್ವಾನಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಆಯಾ ದೇಶಗಳ ಅಧ್ಯಕ್ಷರು, ಪ್ರಧಾನಿ, ಸಚಿವರು ಹಾಗೂ ವಿದೇಶಾಂಗ ಅಧಿಕಾರಿಗಳು ಆಗಮಿಸಲಿದ್ದು, ಕೃಷಿ, ಕೈಗಾರಿಕೆ, ಆರ್ಥಿಕ, ವಾಣಿಜ್ಯ, ಕಲೆ, ಸಂಸ್ಕೃತಿ ಮತ್ತು ಪಾರಂಪರಿಕ ತಾಣಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಚರ್ಚೆ ಮತ್ತು ನಿರ್ಣಯ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಜಿ-20 ಶೃಂಗಸಭೆ ಮಹತ್ವ ಎನಿಸಿದೆ.

    ಹಂಪಿಯಲ್ಲಿ ಜು.9 ರಿಂದ 16ರ ವರೆಗೆ ಕಲ್ಚರಲ್ ಗ್ರೂಪ್ ಮೀಟಿಂಗ್ ಮತ್ತು 13 ರಿಂದ 16 ರವರೆಗೆ ಶೆರ್ಪಾ ಸಭೆ ಆಯೋಜಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಈಗಾಗಲೇ ಹಂಪಿಯ ಆಯಕಟ್ಟಿನ ಜಾಗಗಳಲ್ಲಿ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೇಂದ್ರೀಯ ಪುರಾತತ್ವ ಇಲಾಖೆಯಿಂದ ಹಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದೀಗ ಪೊಲೀಸ್ ಇಲಾಖೆಯಿಂದ ಜಿ.20 ಶೃಂಗ ನಿಮಿತ್ತ 115 ಸಿಸಿ ಕ್ಯಾಮರಾಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ.

    ಇದನ್ನೂ ಓದಿ: ಜಿ೨೦ ಸಮ್ಮಿಟ್‌ಗೆ ಹಂಪಿ ಭಾಗದಲ್ಲಿ ಸಿದ್ಧತೆ ಚುರುಕು – ಕಮಲಾಪುರದಲ್ಲಿ ರಸ್ತೆ ಅತಿಕ್ರಮಣ ತೆರವು

    ಹಂಪಿಯ ಬಸ್ ನಿಲ್ದಾಣ, ವಾಹನಗಳ ನಿಲುಗಡೆ ಪ್ರದೇಶ, ಶ್ರೀ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನ, ರಥ ಬೀದಿ, ಎದುರು ಬಸವಣ್ಣ, ಚಕ್ರತೀರ್ಥ, ಹಜಾರರಾಮ ದೇವಸ್ಥಾನ, ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಕಮಲ ಮಂಟಪ, ಆನೆ ಸಾಲು-ಒಂಟೆ ಸಾಲು, ವಿಜಯ ವಿಠ್ಠಲ ದೇವಸ್ಥಾನ, ಕಮಲಾಪುರ ಅಂಬೇಡ್ಕರ್ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ 150ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಕಣ್ಗಾವಲು ಇರಲಿದೆ.

    ನದಿ, ಅರಣ್ಯ ಪ್ರದೇಶದಲ್ಲಿ ನಿಗಾ

    ಜಿ-20 ಶೃಂಗಕ್ಕೆ ಆಗಮಿಸುವ ಗಣ್ಯರ ಭದ್ರತೆ ದೃಷ್ಟಿಯಿಂದ ಹಂಪಿ ಪ್ರವೇಶಿಸುವ ಪ್ರಮುಖ ಮಾರ್ಗಗಳನ್ನು ಹೊರತುಪಡಿಸಿ, ಅರಣ್ಯ ಪ್ರದೇಶ ಹಾಗೂ ನದಿ ದಾಟಿ ಹಂಪಿಗೆ ಬರುವುದನ್ನು ನಿರ್ಬಂಧಿಸಲಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ವಿಶೇಷ ತಂಡ, ಐಜಿಎನ್‌ಎಫ್‌ಎ(ಇಂದಿರಾಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ) ಜಂಟಿಯಾಗಿ ಶೃಂಗ ಮುಗಿಯುವವರೆಗೆ ನಿರಂತರ ಕೂಂಬಿಂಗ್ ನಡೆಸಲಿವೆ. ಹಂಪಿಗೆ ಸಂಪರ್ಕ ಕಲ್ಪಿಸುವ ಕಡ್ಡಿರಾಂಪುರ ಮತ್ತು ಕಮಲಾಪುರ ಭಾಗದಲ್ಲಿ ವಾಹನಗಳ ತಪಾಸಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

    ಜಿ-20 ಶೃಂಗಕ್ಕೆ ಆಗಮಿಸುವ ಗಣ್ಯರ ಸುರಕ್ಷತೆ ದೃಷ್ಟಿಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಭುವನಹಳ್ಳಿ ಕ್ರಾಸ್ ಹಾಗೂ ಅನಂತಶಯನಗುಡಿಯಿಂದ ಹಂಪಿವರೆಗೆ ಹಾಗೂ ಹಂಪಿಯ ಆಯ್ದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ 115 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಕಮಲಾಪುರ ಮತ್ತು ಹಂಪಿ ಪೊಲೀಸ್ ಠಾಣೆಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಸಿಸಿ ಕ್ಯಾಮರಾ ಮೇಲೆ ನಿರಂತರ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಲಾಗುವುದು. ಎಲ್ಲೆಡೆ ಹೆಚ್ಚಿನ ಪೊಲೀಸ್ ಪಹರೆ ಹಾಕಲು ಉದ್ದೇಶಿಸಲಾಗಿದೆ.
    ಶ್ರೀಹರಿಬಾಬು, ಎಸ್ಪಿ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts