More

    ಉತ್ಸವದತ್ತ ಸಾರ್ವಜನಿಕರ ಉತ್ಸಾಹದ ಹೆಜ್ಜೆ

    ವಿ.ಕೆ. ರವೀಂದ್ರ

    ಉತ್ಸವದತ್ತ ಸಾರ್ವಜನಿಕರ ಉತ್ಸಾಹದ ಹೆಜ್ಜೆ

    ಹಂಪಿ: ಬರದ ನಡುವೆಯೂ ಹಂಪಿ ಉತ್ಸವ ಜನರ ಉತ್ಸಾಹದ ಬುಗ್ಗೆಯಾಗಿದ್ದು, ಎರಡನೇ ದಿನವಾದ ಶನಿವಾರ ಜನರು ಬೆಳಗಿನಿಂದಲೇ ಹಂಪಿಯತ್ತ ಹರಿದು ಬಂದರು. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮೇಳದಲ್ಲಿ ಪಾಲ್ಗೊಂಡು ಖುಷಿಪಟ್ಟರು.

    ಮೊದಲ ದಿನವಾದ ಶುಕ್ರವಾರ ಹಗಲು ಹೊತ್ತಿನಲ್ಲಿ ಉತ್ಸವದತ್ತ ಜನರು ಆಸಕ್ತಿ ತೋರಿರಲಿಲ್ಲ. ಆದರೆ, ರಾತ್ರಿ ವೇದಿಕೆ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ತಡರಾತ್ರಿವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಿವಿಯಾದರು. ಕೆಲ ಯುವಕರು ಸಂಗೀತ, ನೆಚ್ಚಿನ ಗಾಯಕರ ಹಾಡಿಗೆ ಪ್ರೇಕ್ಷಕರ ಗ್ಯಾಲರಿಯಲ್ಲೇ ಹೆಜ್ಜೆ ಹಾಕಿ ನಲಿದರು.

    ಉತ್ಸವದತ್ತ ಸಾರ್ವಜನಿಕರ ಉತ್ಸಾಹದ ಹೆಜ್ಜೆ

    ಉತ್ಸವ ಕಾರಣಕ್ಕೆ ಶನಿವಾರ ರಜೆ ಘೋಷಿಸಿದ್ದು, ನಿರೀಕ್ಷೆಯಂತೆ ಜನರು ಮಕ್ಕಳೊಂದಿಗೆ ಆಗಮಿಸಿದರು. ಸಿರಿಧಾನ್ಯ ಮೇಳದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸಿರಿಧಾನ್ಯ ಖರೀದಿಸಿ ಜನರಿಗೆ ಸಿರಿಧಾನ್ಯಗಳ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಮೇಳಗಳಲ್ಲಿ ಸಂಚರಿಸಿ ಅಧಿಕಾರಿಗಳಿಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಸಾರ್ವಜನಿಕರ ಸೆಲ್ಫಿಗೆ ಫೋಸ್ ನೀಡಿದರು. ನಾಲ್ಕು ವೇದಿಕೆಗಳಿಗೆ ಬಿಡುವಿಲ್ಲದೆ ಓಡಾಡಿ ಸಕಾಲಕ್ಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಾಲನೆ ನೀಡಿದರು.

    ವಿದ್ಯಾರ್ಥಿಗಳು, ಯುವಕ, ಯುವತಿಯರು, ಮಹಿಳೆಯರು, ಪುರುಷರು ಕುಟುಂಬ ಸಮೇತ ಆಗಮಿಸಿ ಮೇಳ ವೀಕ್ಷಿಸಿದರು. ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಬೆಳಗಿನ ಅವಧಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ಉಪಾಹಾರ ನೀಡಲಾಯಿತು. ವೇದಿಕೆ ಮುಂಭಾಗದಿಂದಲೇ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಸಾಕಷ್ಟು ಜನ ಹೋದರೂ ವೇದಿಕೆಗೆ ಬರಲಿಲ್ಲ. ಆಗಾಗ ವಿದ್ಯುತ್ ಕೈಕೊಟ್ಟ ಕಾರಣ ಕೆಲ ಪ್ರೇಕ್ಷಕರು ಬೇಸರಗೊಂಡು ಎದ್ದು ಹೋದರು.

    ಸಾಸಿವೆ ಕಾಳು ಗಣಪ, ಎದುರು ಬಸವಣ್ಣ ವೇದಿಕೆಗಳಲ್ಲಿ ಸಂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾದವು. ಗಾಯತ್ರಿ ಪೀಠ ವೇದಿಕೆಯಲ್ಲಿ ಮಧ್ಯಾಹ್ನದಿಂದ ಸಂಗೀತ ಕಾರ್ಯಕ್ರಮದ ತಾಲೀಮು ಕಂಡುಬಂತು. ಯುವಕರು, ಜನರು ವೇದಿಕೆಯಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

    ಪೌರಸೇವಾ ನೌಕರರಿಂದ ನಿರಂತರ ಸ್ವಚ್ಛತೆ

    ಉತ್ಸವದಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ಅಚ್ಚುಕಟ್ಟಾದ ವ್ಯವಸ್ಥೆ ಕೈಗೊಂಡಿದೆ. ನಗರ, ಸ್ಥಳೀಯ ಸಂಸ್ಥೆಗಳ ಪೌರ ಸೇವಾ ನೌಕರರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವೇದಿಕೆಗಳು, ಕೃಷಿ, ಫಲ-ಪುಷ್ಪ ಪ್ರದರ್ಶನ, ಮೀನುಗಾರಿಕೆ ಮೇಳ, ಪುಸ್ತಕ ಮೇಳ ಹಾಗೂ ಆಹಾರ ಮೇಳಗಳಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿದರು. ಅಂಗಡಿಕಾರರಿಂದಲೂ ತ್ಯಾಜ್ಯ ಪಡೆದು ಸ್ವಚ್ಛತೆ ಕಾಪಾಡಿದರು.

    ಸಿರಿಧಾನ್ಯ ಬಳಕೆ ಹೆಚ್ಚಬೇಕು. ಇದರಿಂದ ಆರೋಗ್ಯ ಸುಧಾರಿಸಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಭಾಗಿಯಾದವರೆಲ್ಲ ಒಂದು ರೀತಿಯಲ್ಲಿ ವಿಜೇತರೇ ಆಗಿದ್ದಾರೆ. ವಿವಿಧ ಪ್ರಯೋಗಗಳ ಮೂಲಕ ಸಿರಿಧಾನ್ಯ ಆಹಾರ ವಸ್ತುಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು.
    | ಶರಣಪ್ಪ ಮುದಗಲ್ ಕೃಷಿ ಇಲಾಖೆ ಜಂಟಿ ನಿರ್ದೇಶಕ, ವಿಜಯನಗರ

    ಸಿರಿಧಾನ್ಯ ಆರೋಗ್ಯಕ್ಕೆ ಪೂರಕವಾಗಿದ್ದು, ನಾವು ನಿರಂತರ ಸಿರಿಧಾನ್ಯ ಬಳಸುತ್ತೇವೆ. ಸಾಂಪ್ರದಾಯಿಕ ಆಹಾರ ಮಾಡಿದರೆ ಮಕ್ಕಳು ತಿನ್ನುವುದಿಲ್ಲ. ರೊಟ್ಟಿ ಫ್ರೈ, ಸಮೋಸಾ ಸೇರಿ ರುಚಿಕಟ್ಟಾಗಿ ಮಾಡಿದರೆ ತಿನ್ನುತ್ತಾರೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಖುಷಿ ಆಗಿದೆ.

    |ಪ್ರತಿಮಾ ಪಾಟೀಲ್ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತೆ, ಹೊಸಪೇಟೆ

    ಈ ಬಾರಿ ಉತ್ಸವದಲ್ಲಿನ ಮೇಳಗಳು ಆಕರ್ಷಕ ಹಾಗೂ ಮಾಹಿತಿ ಪೂರ್ಣವಾಗಿವೆ. ಸಿರಿಧಾನ್ಯ ಬಳಕೆ ಬಗ್ಗೆ ಅರಿವು ಮೂಡಿತು. ಫಲ- ಪುಷ್ಪ ಪ್ರದರ್ಶನ ಮಕ್ಕಳಿಗೆ ಇಷ್ಟವಾದವು. ಬರ ಕಾರಣ ಈ ಬಾರಿ ಉತ್ಸವ ಆಗುತ್ತದೆಯೋ, ಇಲ್ಲವೆಂದು ಅನಿಸಿತ್ತು. ಆದರೂ ಮೂರು ದಿನ ಹಮ್ಮಿಕೊಂಡಿದ್ದು ಖುಷಿ ನೀಡಿದೆ. ಉತ್ಸವದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ.
    | ಶಿವಲೀಲಾ ಹಗರಿಬೊಮ್ಮನಹಳ್ಳಿ ನಿವಾಸಿ

    ಉತ್ಸವದತ್ತ ಸಾರ್ವಜನಿಕರ ಉತ್ಸಾಹದ ಹೆಜ್ಜೆ
    ಉತ್ಸವದತ್ತ ಸಾರ್ವಜನಿಕರ ಉತ್ಸಾಹದ ಹೆಜ್ಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts