More

    ನಮಗ ಫ್ರೀಯಾಗಿ ಪೌಡರ್ ಕೊಟ್ಟಾರ

    ಸಿಂದಗಿ: ಸರ್ ನಾವು ಸಾಲಿ.. ಕಾಲೇಜಿಗಿ ಬರುವಾಗ ಮನ್ಯಾಗಿನ ಪೌಡರ್ ಹಚ್ಚಗೊಂಡು ಬರೋದು ಬಿಟ್ಟೇವ್ರಿ…ಯಾಕಂದ್ರ ಗುತ್ತಿಗೆದಾರ ನಮಗೆ ಫ್ರೀಯಾಗಿ ಪೌಡರ್ ಕೊಟ್ಟಾರ‌್ರೀ… ಮನೆಗೆ ಹೊಂಟರೂ ಧೂಳು ಬಡಕೊಂಡೇ ಹೋಗ್ತೀವ್ರಿ.

    ಈ ಫ್ರೀ ಪೌಡರ್ ಮಾತು, ನಗರದ ಸರ್ಕಾರಿ ಆದರ್ಶ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿನಿಯರದ್ದು.

    ಇಂತಹ ವ್ಯಂಗ್ಯಕ್ಕೆ ಕಾರಣವಾಗಿದ್ದು, ಕನಕದಾಸ ವೃತ್ತದಿಂದ ಕೊಡಂಗಲ್ಲ ರಾಜ್ಯ ಹೆದ್ದಾರಿವರೆಗಿನ 9ಕೋಟಿ ರೂ. ವೆಚ್ಚದ 1ಕಿಮೀಗೂ ಅಂತರದ ಅಪೂರ್ಣ ರಸ್ತೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಕಾಮಗಾರಿ.

    ಕೇವಲ 1ಕಿಮೀ ಅಂತರದ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಅಪೂರ್ಣ ಕಾಮಗಾರಿಯಿಂದಾಗಿ ಇದೇ ರಸ್ತೆ ಆಶ್ರಯಿಸಿರುವ ಸಂಚಾರಿಗಳ, ಪಾಠಕ್ಕೆ ಬರುವ ವಿದ್ಯಾರ್ಥಿಗಳ ಹಾಗೂ ವಸತಿ ನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿತ್ಯ ಧೂಳಿನ ಮಜ್ಜನ ಸಾಮಾನ್ಯವಾಗಿದೆ.

    ಗುತ್ತಿಗೆದಾರ ರಸ್ತೆ ಕಾಮಗಾರಿಯ ಆರಂಭಿಕ ಸ್ಥಳದಿಂದ ರಸ್ತೆ ಸುಧಾರಣೆಗೆ ಅಣಿಗೊಳ್ಳದೇ, ಭಗೀರಥ ಮಹರ್ಷಿ ವೃತ್ತದದಿಂದ ಕನಕದಾಸ ವೃತ್ತದವರೆಗೆ ಡಿವೈಡರ್ ನಿರ್ಮಿಸಿ, ರಸ್ತೆಯ ಒಂದು ಬದಿಗೆ ಖಡೀಕರಣ, ಇನ್ನೊಂದು ಬದಿಗೆ ಡಾಂಬರೀಕರಣ ಮಾಡಿ, ಸಮಾಜಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ನಿಂದ ಕನಕದಾಸ ವೃತ್ತದವರೆಗೆ ಡಾಂಬರೀಕರಣ ಮಾಡದೇ, ಅರ್ಧಂಬರ್ಧ ಕಾಮಗಾರಿ ನಡೆಸಿದ ಪರಿಣಾಮ ಪಟ್ಟಣದಿಂದ ಹೊರಹೋಗುವ ಹಾಗೂ ಪಟ್ಟಣಕ್ಕೆ ಒಳಬರುವ ರಭಸದ ವಾಹನಗಳ ಸಂಚಾರದಿಂದ ಮೇಲೇಳುವ ಧೂಳಿಗೆ ಸಂಚಾರಿಗಳು ಮಾಸ್ಕ್ ಮತ್ತು ಕರವಸ್ತ್ರ ಬಳಸಿದರೆ, ವಿದ್ಯಾರ್ಥಿನಿಯರು ಮುಖ-ಮೂಗು ಮುಚ್ಚಿಕೊಳ್ಳಲು ವೇಲ್‌ನ ಮೊರೆ ಹೋಗುವಂತಾಗಿರುವುದು ವಿಪರ್ಯಾಸವಾಗಿದೆ.

    ವರ್ಷವೇ ಉರುಳಿದರೂ ಪೂರ್ಣಗೊಳ್ಳದ ಕಾಮಗಾರಿ, ಕೂಡಲೇ ಪೂರ್ಣಗೊಳಿಸದೇ ಹೋದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಂಚಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts