More

    ಕೇಂದ್ರದಿಂದ ರಾಜ್ಯಕ್ಕೆ ಮಾಸ್ಟರ್‌ಸ್ಟ್ರೋಕ್: ರೇಷನ್ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ಕೊಡಿ

    ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ(ಎನ್‌ಎಫ್​​​ಎಸ್‌ಎ) ಕೇಂದ್ರ ಸರ್ಕಾರ, ಕಾರ್ಡ್‌ದಾರರಿಗೆ ಉಚಿತವಾಗಿ ವಿತರಿಸಲಾಗುವ ಅಕ್ಕಿಯನ್ನು ತನ್ನದಂದು ಬಿಂಬಿಸಿಕೊಳ್ಳುತ್ತಿದ್ದ ರಾಜ್ಯ ಸರ್ಕಾರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಸದ್ಯ ಕೇಂದ್ರ ಸರ್ಕಾರವು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹೆಸರಿನಲ್ಲಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುತ್ತಿದ್ದರೆ, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಕಾರ್ಡ್‌ದಾರರಿಗೆ ಹಣ ನೀಡುತ್ತಿದೆ.

    ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು ಕಾರ್ಡ್‌ದಾರರಿಗೆ ಆಹಾರಧಾನ್ಯ ಸಂಬಂಧಿಸಿದಂತೆ ಮುದ್ರಿತ ರಸೀದಿ ನೀಡುವಂತೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿರುವ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಆಹಾರಧಾನ್ಯಕ್ಕೆ ರಸೀದಿ ನೀಡಬೇಕಿದೆ. ಇದಕ್ಕಾಗಿ ಆಹಾರ ದತ್ತಾಂಶ ಮುಖೇನ ಅಗತ್ಯ ರಸೀದಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್‌ಐಸಿ) ನಮಗೆ ತಿಳಿಸಿದೆ. ಹೀಗಾಗಿ, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಆಹಾರ ಧಾನ್ಯಕ್ಕೆ ರಸೀದಿ ನೀಡಲು ಪ್ರಿಂಟರ್ ಖರೀದಿಸುವಂತೆ ಆಹಾರ ಇಲಾಖೆ, ಮಾಲೀಕರಿಗೆ ಸೂಚನೆ ಕೊಟ್ಟಿದೆ. ಕೆಲವೆಡೆ ಈಗಾಗಲೇ ಕಾರ್ಡ್‌ದಾರರರಿಗೆ ರಸೀದಿ ನೀಡಲಾಗುತ್ತಿದೆ.

    ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಕೆಜಿಗೆ 30 ರೂ.ನಂತೆ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ ಕೆಜಿ ಅಕ್ಕಿಗೆ 3 ರೂ., ಕೆಜಿ ಗೋಧಿಗೆ 2 ರೂ.ನಂತೆ ಸಬ್ಸಿಡಿ ಮೂಲಕ ನೀಡುತ್ತಿತ್ತು. ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಪಡಿತರ ಧಾನ್ಯಗಳನ್ನು ನೀಡುವ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ಸರ್ಕಾರ, ಅನ್ನಭಾಗ್ಯ ಯೋಜನೆ ಹೆಸರಿನಡಿ ಆಹಾರ ಇಲಾಖೆ ಮೂಲಕ 1.52 ಕೋಟಿ ರೇಷನ್ ಕಾರ್ಡ್‌ಗಳಿಗೆ ರೇಷನ್ ವಿತರಿಸಲಾಗುತ್ತಿತ್ತು. ನಾಲ್ಕು ತಿಂಗಳ ಹಿಂದೆಯೇ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ವಹಿಸಿಕೊಂಡಿದೆ.ಅದರಂತೆ, ಉಚಿತವಾಗಿ ಕಾರ್ಡ್‌ದಾರರಿಗೆ ಅಕ್ಕಿ ನೀಡುತ್ತಿದೆ. ಇದಕ್ಕೆ ತಗಲುವ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತಿದೆ. ರಾಜ್ಯ ಸರ್ಕಾರ ಆರಂಭಿಸಿರುವ ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ಹಣ ನೀಡುವ ವ್ಯವಸ್ಥೆ ಜು.10ರಿಂದ ಜಾರಿಗೆ ಬಂದಿದೆ. ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ. ಅದೇರೀತಿ, ಅಂತ್ಯೋದಯ ಕಾರ್ಡ್‌ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ.ಹಣ ಹಾಕಲಾಗುತ್ತಿದೆ.

    ರಸೀದಿಯಲ್ಲಿ ಏನಿರಲಿದೆ?
    ರಾಜ್ಯದಲ್ಲಿ 1,16,95,029 ಬಿಪಿಎಲ್, 24,17,131 ಎಪಿಎಲ್ ಹಾಗೂ 10,88,421 ಅಂತ್ಯೋದಯ ಸೇರಿ ಒಟ್ಟು 1,52,00,581 ರೇಷನ್ ಕಾರ್ಡ್‌ಗಳಿಗೆ ಪ್ರತಿ ತಿಂಗಳು 20,204 ನ್ಯಾಯಬೆಲೆ ಅಂಗಡಿಗಳು ಹಾಗೂ ಕನ್‌ಜ್ಯೂಮರ್ಸ್‌ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್) ರೇಷನ್ ವಿತರಿಸುತ್ತಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ದಾರರು, ಬಯೋ ಮೆಟ್ರಿಕ್ ಕೊಟ್ಟು ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಆಹಾರಧಾನ್ಯ ವಿತರಣೆ ವೇಳೆ ರಸೀದಿ ನೀಡಬೇಕೆಂಬ ನಿಯಮ ಈಗ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಆಹಾರ ಪದಾರ್ಥಗಳನ್ನು ನೀಡುವ ವೇಳೆ ಮಾಲೀಕರು, ಕಾರ್ಡ್‌ದಾರರಿಗೆ ರಸೀದಿ ನೀಡಲಾಗುತ್ತದೆ. ಈ ರಸೀದಿಯಲ್ಲಿ ಯೋಜನೆ, ಜಿಲ್ಲೆ, ತಾಲೂಕು ಹೆಸರು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರು ಎಷ್ಟು, ಹಂಚಿಕೆ ದಿನಾಂಕ, ಆಹಾರ ಧಾನ್ಯದ ವಿವರ, ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು, ಪಾವತಿಸಬೇಕಾದ ಮೊತ್ತ ಸೇರಿ ಎಂಬಿತ್ಯಾದಿ ಮಾಹಿತಿಗಳು ಇರಲಿವೆ. ಇದರಿಂದಾಗಿ, ಪಡಿತರದಾರರಿಗೆ ರೇಷನ್ ಹಂಚಿಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತ್ಯೇಕ ಯೋಜನೆಗಳ ವಿವರವನ್ನು ರಸೀದಿಯಲ್ಲಿ ನಮೂದಿಸಲಾಗುತ್ತಿದೆ.

    ಇದನ್ನೂ ಓದಿ:ತೆಲಂಗಾಣ ವಿಧಾನಸಭೆ ಚುನಾವಣೆ; ಕಾಂಗ್ರೆಸ್​ ಗ್ಯಾರಂಟಿಗಳಿಗೆ ಸೆಡ್ಡು ಹೊಡೆದ ಬಿಆರ್​ಎಸ್​ ಪ್ರಣಾಳಿಕೆ

    ಪಡಿತರ ಸಂಘ ವಿರೋಧ:
    ಆಹಾರಧಾನ್ಯ ವಿತರಣೆ ವೇಳೆ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಸರ್ಕಾರದ ಆದೇಶದ ಬಗ್ಗೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ನಿಯಮದಂತೆ ಬಯೋಮೆಟ್ರಿಕ್ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಪ್ರತಿ ತಿಂಗಳು ಅಂಗಡಿ ಮಾಲೀಕರಿಗೆ ಕಂ್ಯೂಟರ್, ಲ್ಯಾಪ್‌ಟಾಪ್, ಇಂಟರ್‌ನೆಟ್, ವಿದ್ಯುತ್, ಮಳಿಗೆ ಬಾಡಿಗೆಗಾಗಿ ಸಾವಿರಾರು ರೂ.ಖರ್ಚು ಬರುತ್ತದೆ. ಈಗ ಪ್ರಿಂಟರ್‌ಗೆ ಖರೀದಿಸಲು ಇನ್ನಷ್ಟು ಆರ್ಥಿಕ ಹೊರೆಯಾಗುತ್ತದೆ. ಮಾಲೀಕರ ಆರ್ಥಿಕ ಪರಿಸ್ಥಿತಿ ತುಂಬ ಹದಗಟ್ಟಿದೆ. ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣವೂ ಹಲವು ವರ್ಷಗಳಿಂದ ಬಾಕಿ ಉಳಿದಿದೆ. 200-500 ಕಾರ್ಡ್ ಇರುವವರಿಗೆ ಸಮಸ್ಯೆಯಾಗುತ್ತದೆ. ಸರ್ಕಾರದ ವತಿಯಿಂದಲೇ ಪ್ರಿಂಟರ್ ಮೆಷಿನ್ ನೀಡಬೇಕು. ಇಲ್ಲದಿದ್ದರೆ, ಈ ಆದೇಶವನ್ನು ನಾವು ಪಾಲಿಸಲು ಆಗುವುದಿಲ್ಲ ಎಂದು ಸಂಘ ವಿರೋಧ ವ್ಯಕ್ತಪಡಿಸಿದೆ.

    ಕೋಟ್:
    ಪ್ರತಿ ತಿಂಗಳು ಕಾರ್ಡ್‌ದಾರರಿಗೆ ಸಮರ್ಪಕವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಎಷ್ಟು ಎತ್ತುವಳಿ ಮಾಡಿದ್ದೇವೆ, ಎಷ್ಟು ಕಾರ್ಡ್‌ದಾರರಿಗೆ ರೇಷನ್ ನೀಡಲಾಗಿದೆ ಹಾಗೂ ಎಷ್ಟು ರೇಷನ್ ಉಳಿದಿದೆ ಎಂಬುದರ ಬಗ್ಗೆ ಆಹಾರ ಇಲಾಖೆಗೆ ಈಗಾಗಲೇ ಸೂಕ್ತ ಮಾಹಿತಿ ಸಿಗುತ್ತದೆ. ಹೀಗಿದ್ದರೂ, ಅನಗತ್ಯವಾಗಿ ಕಾರ್ಡ್‌ದಾರರಿಗೆ ರಸೀದಿ ನೀಡುವಂತೆ ಹೊರಡಿಸಿರುವ ಆದೇಶವನ್ನು ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು.
    ಟಿ.ಕೃಷ್ಣಪ್ಪ. ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts