More

    ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿ

    ಹಿರೇಕೆರೂರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಸಮರ್ಪಕವಾಗಿ ಪರಿಹಾರ ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಗುರುವಾರ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಉಕ್ಕಿ ಹರಿದು ರೈತರ ಜಮೀನುಗಳಿಗೆ ನುಗ್ಗಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ವಿತರಿಸಬೇಕು. ತುಂಗಾ ಮೇಲ್ದಂಡೆ ಕಾಲುವೆ ನಿರ್ವಣದಲ್ಲಿ ರೈತರು ಜಮೀನು ಕಳೆದುಕೊಂಡು 20 ವರ್ಷಗಳಾಗಿದ್ದು ಕೂಡಲೆ ಪರಿಹಾರ ನೀಡಬೇಕು. ಈ ವರ್ಷ ಮಳೆ ಹೆಚ್ಚಾಗಿ ಸುರಿದು ರೈತರ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬ್ಯಾಂಕಿನವರು ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ಈಗಿರುವ ಬೆಳೆ ಸಾಲವನ್ನು ಕಂತು ಮಾಡಿ, ಹೊಸ ಸಾಲ ನೀಡಬೇಕು. ಹೆಸ್ಕಾಂ ಕಂಪನಿ ರೈತರ ಪಂಪ್​ಸೆಟ್​ಗಳಿಗೆ ಹಗಲು ಹೊತ್ತು 5 ಗಂಟೆ ವಿದ್ಯುತ್ ಪೂರೈಸುತ್ತಿದ್ದು, 7 ಗಂಟೆ ನೀಡಲು ಆದೇಶವಿದೆ ಹಾಗೂ ರಾತ್ರಿ ಪೂರ್ಣ ವಿದ್ಯುತ್ ಪೂರೈಕೆ ನಿಲ್ಲಿಸಿರುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಕೂಡಲೆ ಹೊಸ ಆದೇಶವನ್ನು ಹಿಂಪಡೆದು, ಹಿಂದಿನ ಆದೇಶದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು.

    ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ಮಹ್ಮದಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಬಸನಗೌಡ ಗಂಗಪ್ಪನವರ, ಶಾಂತನಗೌಡ ಪಾಟೀಲ, ಶಂಭಣ್ಣ ಮುತ್ತಗಿ, ರಾಜು ಮುತ್ತಗಿ, ಹನುಮಂತಪ್ಪ ಜೊಗೇರ, ಮಂಜುನಾಥ ಆರಿಕಟ್ಟಿ, ಯಶವಂತ ತಿಣಕಾಪುರ, ಪುಟ್ಟಯ್ಯ ಮಳಲಿಮಠ, ಮಲ್ಲನಗೌಡ ಮಾಳಗಿ, ಈರಪ್ಪ ಮಳ್ಳೂರು ಹಾಗೂ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts