More

    ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..

    ಜನಜೀವನವನ್ನು ಸ್ತಬ್ಧಗೊಳಿಸಿರುವ ಲಾಕ್​ಡೌನ್ ಮಕ್ಕಳ ಬದುಕಿನೊಂದಿಗೂ ಚೆಲ್ಲಾಟವಾಡುತ್ತಿದೆ. ಕರೊನಾದ ಈ ಒಂದು ವರ್ಷದಲ್ಲಿ ಮನೆಯಲ್ಲಿರುವ ಬಾಲಕಿಯರು ಸದ್ದಿಲ್ಲದೇ ಗೃಹಿಣಿಯರಾಗುತ್ತಿದ್ದಾರೆ! ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ತಮ್ಮ ಹೆಣ್ಣುಮಕ್ಕಳನ್ನು ಎಳವೆಯಲ್ಲಿಯೇ ಮದುವೆ ಮಾಡಿ ‘ಕೈತೊಳೆದು ಕೊಂಡು’, ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ!

    | ರವೀಂದ್ರ ಎಸ್. ದೇಶಮುಖ್

    ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿ ಮಾಡುತ್ತಲೇ ಸಾಗಿದೆ. ಯಾವಾಗ, ಯಾವ ಕ್ಷಣ ಏನಾಗುತ್ತದೋ ಎನ್ನುವ ಭಯದಲ್ಲಿ ಪ್ರತಿಯೊಬ್ಬರೂ ಜೀವನ ನೂಕುತ್ತಿರುವಾಗ ಅದೇ ಇನ್ನೊಂದೆಡೆ ಸದ್ದಿಲ್ಲದೇ ಮನೆಯಲ್ಲಿದ್ದ ಪುಟಾಣಿ ಹೆಣ್ಣುಮಕ್ಕಳು ಇನ್ನಾರದೋ ಮನೆ ಸೇರುತ್ತಿದ್ದಾರೆ! ಅಕ್ಕ ಪಕ್ಕದವರಿಗೂ ತಿಳಿಯದ ರೀತಿಯಲ್ಲಿ ಬಾಲಕಿಯರು ಕಣ್ಮರೆಯಾಗುತ್ತಿದ್ದರೆ, ಅವರ ಹೆತ್ತವರ ಮೊಗದಲ್ಲಿ ಏನೋ ಧನ್ಯತಾ ಭಾವ, ಏನೋ ಸಾಧಿಸಿದ ಹೆಮ್ಮೆ.

    ಇದು ಲಾಕ್​ಡೌನ್​ನಲ್ಲಿ ನಡೆಯುತ್ತಿರೋ ಬಾಲ್ಯವಿವಾಹದ ಎಫೆಕ್ಟ್. ಈ ರೀತಿಯಲ್ಲಿ ಭಾರತದಲ್ಲಿ 1 ಕೋಟಿಗೂ ಹೆಚ್ಚು ಬಾಲಕಿಯರು ಕರೊನಾದ ಈ ಒಂದು ವರ್ಷದ ಅವಧಿಯಲ್ಲಿ 18 ತುಂಬುವ ಮೊದಲೇ ವಿವಾಹ ಬಂಧನಕ್ಕೆ ಒಳಾಗಿರುವ ಆತಂಕದ ವರದಿಯನ್ನು ಯುನಿಸೆಫ್ ನೀಡಿದೆ. ಜೀವನದ ಕುರಿತು ಕಿಂಚಿತ್ತೂ ಅರಿವಿಲ್ಲದ, ಬಾಲ್ಯದ ತುಂಟಾಟದಲ್ಲಿ ಖುಷಿ ಅನುಭವಿಸಬೇಕಾದ ಮಕ್ಕಳು ಗೃಹಿಣಿಯರಾಗಿ ತಮ್ಮ ಬದುಕನ್ನು ನರಕಸದೃಶ ಮಾಡಿಕೊಳ್ಳುತ್ತಿರುವ ಘಟನೆಯನ್ನು ಕರೊನಾದ ಈ ದಿನಗಳು ತಂದೊಡ್ಡಿವೆ. ಒಂದೆಡೆ ಶಾಲೆ ಇಲ್ಲದಿದ್ದರೆ, ಇನ್ನೊಂದೆಡೆ ಮನೆಯಲ್ಲಿಯೇ ಮದುವೆಗೆ ಅವಕಾಶ ನೀಡಿರುವ ಕಾರಣ, ಯಾರಿಗೂ ತಿಳಿಯದ ರೀತಿಯಲ್ಲಿ ಹೆಣ್ಣು ಹೆತ್ತವರು ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಭರದಲ್ಲಿ ಆಟವಾಡುವ ಮಕ್ಕಳನ್ನು ಮದುವೆ ಎಂಬ ಬಂಧನಕ್ಕೆ ದೂಡುತ್ತಿದ್ದಾರೆ! ಮೊದಲೆಲ್ಲ ಕಲ್ಯಾಣ ಮಂಟಪ, ದೇವಸ್ಥಾನ ಅಥವಾ ಗ್ರಾಮದ ಮುಖ್ಯ ಕೇಂದ್ರಗಳಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ಸುತ್ತಮುತ್ತಲಿನವರು ಎಚ್ಚೆತ್ತುಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿಗೆ ತಕ್ಷಣ ಮಾಹಿತಿ ತಲುಪಿಸುತ್ತಿದ್ದರು, ಸಂಬಂಧಿಸಿದವರು ಬಂದು ಮದುವೆ ತಡೆಯುತ್ತಿದ್ದರು. ಈಗ ಹಾಗಲ್ಲ. ಕರೊನಾ ನಿಯಮಗಳೇ ವರದಾನವಾಗಿವೆ. ಇಂಥ ಮದುವೆ ಕಾನೂನು ಉಲ್ಲಂಘನೆ ಎಂದು ತಿಳಿದಿದ್ದರೂ ಕದ್ದುಮುಚ್ಚಿ ಮನೆಯಲ್ಲೇ ಕುಟುಂಬದ ಕೆಲ ಸದಸ್ಯರು ಮದುವೆ ಶಾಸ್ತ್ರ ಮುಗಿಸುತ್ತಿದ್ದು, ಬಾಲ್ಯವಿವಾಹ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ತೀವ್ರವಾಗಿ ಕಾಡುತ್ತಿರುವ ಆರ್ಥಿಕ ಸಂಕಷ್ಟ ಅಸಂಖ್ಯ ಕುಟುಂಬಗಳನ್ನು ಹೈರಾಣಾಗಿಸಿದೆ. ಅಲ್ಲದೆ, ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಅಥವಾ ಶಿಕ್ಷಣ ಮೊಟಕುಗೊಂಡಿರುವುದು, ಜೀವನಕ್ಕೆ ಸವಾಲಾಗಿರುವ ಅಭದ್ರತೆ, ಹೆಣ್ಣು ಹೊರೆ ಎಂಬ ವಿಚಿತ್ರ ಮಾನಸಿಕತೆ, ಈಗ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಮುಗಿಸಬಹುದು ಎಂಬ ಯೋಚನೆ, ‘ಜವಾಬ್ದಾರಿ’ ಮುಗಿಸಬೇಕೆಂಬ ಪಾಲಕರ ಧಾವಂತ- ಹೀಗೆ ಮನೆಯ ದುಸ್ಥಿತಿ, ಸಾಮಾಜಿಕ ಪರಿಸ್ಥಿತಿಗಳೆಲ್ಲ ಬಾಲ್ಯವಿವಾಹ ಹೆಚ್ಚಲು ಕಾರಣವಾಗುತ್ತಿವೆ.

    ಎಲ್ಲೆಲ್ಲಿ ಹೆಚ್ಚು?: ಕಳೆದೊಂದು ವರ್ಷದಲ್ಲೇ ಉತ್ತರ ಕರ್ನಾಟಕದ ಎಂಟು ಮತ್ತು ದಕ್ಷಿಣ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಸರಾಸರಿ ನೂರಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡದಿವೆ. ಈ ಪೈಕಿ ಅತಿ ಹೆಚ್ಚು ಬಳ್ಳಾರಿ-253, ಮೈಸೂರು-196, ಚಿಕ್ಕಬಳ್ಳಾಪುರ-154, ಮಂಡ್ಯ-141, ಬೆಳಗಾವಿ-105. ಉತ್ತರ ಕರ್ನಾಟಕದ ಯಾದಗಿರಿ, ಕೊಪ್ಪಳ, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚು. ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆಯಾದರೂ, ಈಗ ಮನೆಗಳಲ್ಲೇ ಮದುವೆಗಳು ನಡೆಯುತ್ತಿರುವುದರಿಂದ ಬಾಲ್ಯವಿವಾಹ ಪತ್ತೆ ಹಚ್ಚುವುದು ಸವಾಲಾಗಿದೆ. ಅದರಲ್ಲೂ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಮುಹೂರ್ತಗಳು ಹೆಚ್ಚಿರುವ ಕಾರಣದಿಂದ, ಈ ಅವಧಿಯಲ್ಲೇ ಬಾಲ್ಯವಿವಾಹಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತವೆ.

    ಮದುವೆ ಮಾಡಿದವರಿಗೆ ಏನಿದೆ ಶಿಕ್ಷೆ?: ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಬಾಲ್ಯ ವಿವಾಹ ಮಾಡಿದರೆ ಎರಡು ವರ್ಷ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ತಂದೆ-ತಾಯಿ, ಪುರೋಹಿತರು, ಕಲ್ಯಾಣ ಮಂಟಪ/ಹಾಲ್ ಮಾಲೀಕರು, ಮದುವೆಯಲ್ಲಿ ಭಾಗವಹಿಸಿದವರು ಶಿಕ್ಷೆ ವ್ಯಾಪ್ತಿಗೆ ಬರುತ್ತಾರೆ. ಜತೆಗೆ ಇಂಥ ಮದುವೆಗಳನ್ನು ಅಸಿಂಧು ಎಂದು ಘೋಷಿಸಲಾಗುತ್ತದೆ. ನಿಯಮದಂತೆ ಪುರುಷರಿಗೆ 21 ವರ್ಷ, ಮಹಿಳೆಗೆ 18 ವರ್ಷ ಆಗಿರಬೇಕು.

    ಎಂಟೇ ತಿಂಗಳಲ್ಲಿ 2000 ಬಾಲ್ಯವಿವಾಹ!: ಮಕ್ಕಳ ಹಕ್ಕುಗಳ ಆಯೋಗದ ಪ್ರಕಾರ 2020 ಏಪ್ರಿಲ್​ನಿಂದ 2021 ಜನವರಿವರೆಗೆ ರಾಜ್ಯದಲ್ಲಿ ನಡೆದಿರುವ ಬಾಲ್ಯವಿವಾಹಗಳ ಸಂಖ್ಯೆ 2180! 2020 ಡಿಸೆಂಬರ್​ನಲ್ಲೇ ಬಾಲ್ಯವಿವಾಹಕ್ಕೆ ಸಂಬಂಧಿಸಿದ 365 ದೂರುಗಳು ಆಯೋಗಕ್ಕೆ ಬಂದಿವೆ. 2020 ಮೇನಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದಾಗ ಬಾಲ್ಯವಿವಾಹಕ್ಕೆ ಸಂಬಂಧಿಸಿದ 579 ದೂರುಗಳು ಮಕ್ಕಳ ಸಹಾಯವಾಣಿಗೆ ಬಂದಿದ್ದವು. ಆಗಸ್ಟ್​ನಲ್ಲಿ 214, ಸೆಪ್ಟೆಂಬರ್​ನಲ್ಲಿ 111 ದೂರು ಬಂದಿವೆ. ಅಕ್ಟೋಬರ್​ನಲ್ಲಿ 190, ನವೆಂಬರ್​ನಲ್ಲಿ 321. 2021 ಜನವರಿಯಲ್ಲಿ ಮಕ್ಕಳ ಸಹಾಯವಾಣಿಗೆ 1947 ದೂರು ಬಂದಿದ್ದು, ಈ ಪೈಕಿ 288 ಬಾಲ್ಯವಿವಾಹಕ್ಕೆ ಸಂಬಂಧಿಸಿದ್ದು.

    ಎರಡನೇ ಸ್ಥಾನದಲ್ಲಿ ಭಾರತ!: ಕಳೆದ ವರ್ಷ ಯುನಿಸೆಫ್ ಬಿಡುಗಡೆ ಮಾಡಿದ ವರದಿ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿರುವುದು ಬಾಂಗ್ಲಾದೇಶದಲ್ಲಿ. ದುರದೃಷ್ಟವಶಾತ್ ಆನಂತರದ ಸ್ಥಾನ ಭಾರತಕ್ಕೆ ಸಿಕ್ಕಿದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಉತ್ತರಭಾರತದಲ್ಲಿ ಬಾಲ್ಯ ವಿವಾಹಗಳು ಕಾನೂನಿನ ಭಯವಿಲ್ಲದೆ ನಡೆಯುತ್ತಿರುವುದನ್ನು ವರದಿ ಉಲ್ಲೇಖಿಸಿದೆ. ಭಾರತದಲ್ಲಿ ಶೇ. 47ರಷ್ಟು ಯುವತಿಯರ ವಿವಾಹ 18 ವರ್ಷ ತುಂಬುವ ಮುಂಚೆ ನಡೆಯುತ್ತಿದೆ. ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಂತೂ ಶೇಕಡ 82ರಷ್ಟು ವಿವಾಹಗಳು 18 ವರ್ಷ ತುಂಬುವ ಮೊದಲೇ ನಡೆಯುತ್ತಿವೆ. ರಾಜಸ್ಥಾನದಲ್ಲಿ ಬಾಲಕರೂ ಬಾಲ್ಯವಿವಾಹದ ಪಾಶಕ್ಕೆ ಸಿಲುಕಿದ್ದಾರೆ.

    ನಿಯಮ ಬದಲಿಸಿದ ಸರ್ಕಾರ: ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ರಾಜ್ಯ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ವಿವಾಹ ನೋಂದಣಿಯ ವೇಳೆ ಜನನ ಪ್ರಮಾಣಪತ್ರ, ಶಾಲಾ ದೃಢೀಕರಣ ಪತ್ರ ಅಥವಾ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಾತ್ರ ದಾಖಲೆಯಾಗಿ ಪರಿಗಣಿಸಬೇಕು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆಧಾರ್, ವೋಟರ್ ಐಡಿ ತಿರುಚಿ, ಸುಳ್ಳು ವಯಸ್ಸಿನ ಲೆಕ್ಕ ನೀಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

    ನೀವೂ ಮಾಹಿತಿ ನೀಡಬಹುದು…

    ಬಾಲ್ಯವಿವಾಹಗಳನ್ನು ತಡೆಯುವಲ್ಲಿ ಜನರ ಪಾತ್ರವೂ ಬಹುಮುಖ್ಯ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಥ ಘಟನೆಗಳು ನಡೆಯುತ್ತಿದ್ದರೆ ಕೂಡಲೇ ಮಕ್ಕಳ ಸಹಾಯವಾಣಿ 1098ಕ್ಕೆ ಇಲ್ಲವೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಬೇಕು. ಸೂಕ್ತ ಅರಿವು ತುಂಬುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಸಂಘಟನೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಕೆಲಸ ಮಾಡಬೇಕು. ಒಂದು ಬಾಲ್ಯವಿವಾಹ ತಡೆದರೂ ಆ ಮಕ್ಕಳ ಬಾಲ್ಯವನ್ನು ರಕ್ಷಿಸಿದಂತೆ ಆಗುತ್ತದೆ. ಇದು ನಮ್ಮ ಕರ್ತವ್ಯ ಕೂಡ.

    ಇಂಥ ಸ್ವಾರ್ಥ ಒಳ್ಳೆಯದು…; ಮನೋಲ್ಲಾಸ

    ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಡೈರೆಕ್ಟ್ ಮಾನೆಟೈಸೇಶನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts