More

  ಗಿರಿಜಾಕಲ್ಯಾಣ ಕಣ್ತುಂಬಿಕೊಂಡ ಭಕ್ತರು, ಶಿವಗಂಗೆ ಕ್ಷೇತ್ರದಲ್ಲಿ ಸಂಕ್ರಾಂತಿ ಸಂಭ್ರಮ, ಶಿವ-ಪಾರ್ವತಿಗೆ ವಿಶೇಷ ಪೂಜೆ

  ದಾಬಸ್‌ಪೇಟೆ: ಶಿವಗಂಗೆ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

  ಗಂಗಾಧರೇಶ್ವರ ಸ್ವಾಮಿಗೆ ಪಂಚಾಮೃತ, ರುದ್ರ, ಮೃತ್ಯುಂಜಯ ಅಭಿಷೇಕ ನೆರವೇರಿಸಲಾಯಿತು. ನಂತರ ಪಾರ್ವತಿದೇವಿಗೆೆ ಅರಿಶಿಣ-ಕುಂಕುಮ ಸೇವೆ, ತ್ರಿಶಕ್ತಿ ಸೇವೆ, ಚಂಡಿಕಾ ಹೋಮಗಳ ನೆರವೇರಿಸಲಾಯಿತು.

  ಮುಂಜಾನೆ 5.19ಕ್ಕೆ ಕಕುದ್ಗಿರಿ ಶಿಖರದಲ್ಲಿ ತೀರ್ಥೋದ್ಭವವಾದ ಗಂಗೆಯಿಂದ ಶಾಸ್ತ್ರೋಕ್ತವಾಗಿ ಗಂಗಾಧರೇಶ್ವರ ದೇವಾಲಯದಲ್ಲಿ ಮುಂಜಾನೆ 6.30ರಿಂದ 7 ಗಂಟೆಯೊಳಗಿನ ಮಕರ ಲಗ್ನದಲ್ಲಿ ಗಿರಿಜಾ ಕಲ್ಯಾಣೋತ್ಸವ ನೆರವೇರಿತು. ಪ್ರಧಾನ ಅರ್ಚಕ ಎಸ್.ಎನ್.ಸೋಮಸುಂದರ ದೀಕ್ಷಿತ್ ಗಂಗಾಧರೇಶ್ವರನಿಗೆ ಪೂಜೆ ಸಲ್ಲಿಸಿ ವಿಶೇಷ ಅಭಿಷೇಕದ ಮೂಲಕ ಮಹಾಮಂಗಳಾರತಿ ನೆರವೇರಿಸಿದರು.

  ನೆಲಮಂಗಲ ತಹಸೀಲ್ದಾರ್ ಎಂ.ಶ್ರೀನಿವಾಸ್, ಉಪತಹಸೀಲ್ದಾರ್ ಜುಂಜೇಗೌಡ, ರಾಜಸ್ವ ನಿರೀಕ್ಷಕ ಎಚ್.ಎಂ.ಕುಮಾರಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಸಿ.ಎಲ್.ಚಂದ್ರಶೇಖರ್, ತಾಪಂ ಸದಸ್ಯೆ ಸಿದ್ದಗಂಗಮ್ಮ ತಮ್ಮಯ್ಯ, ಶಿವಗಂಗೆ ಗ್ರಾಪಂ ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷೆ ರಂಗಮ್ಮ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಟಿ.ಸಿದ್ದರಾಜು, ಸದಸ್ಯರಾದ ವೈ.ಎಸ್. ರೇಣುಕೇಶ, ಬಿ.ಕೆ.ಮಂಗಳಾ ಹೊನ್ನಗಂಗಶೆಟ್ಟಿ, ಬಿ.ಸಿ.ರಾಜಣ್ಣ, ಎಸ್.ಪಿ ಯಡಿಯೂರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಸಿ.ಹೊನ್ನಗಂಗಶೆಟ್ಟಿ, ಬಿಬಿಎಂಪಿ ಮಾಜಿ ಮೇಯರ್ ಅಂದಾನಪ್ಪ, ಸಮಾಜ ಸೇವಕ ಗೋಲ್ಡನ್ ನಟರಾಜು, ಪಾರುಪತ್ತೆದಾರ ಟಿ.ಶ್ರೀನಿವಾಸ್, ಎಪಿಎಂಸಿ ಸದಸ್ಯ ಗಂಗಣ್ಣ, ಜಿಪಂ ಸದಸ್ಯ ನಂಜುಂಡಯ್ಯ, ಜಿಪಂ ಮಾಜಿ ಸದಸ್ಯ ಹೊನ್ನಸಿದ್ದಪ್ಪ, ಪಿಡಿಒ ಡಿ.ಆರ್.ಮಂಜುನಾಥ್, ಬಮುಲ್ ನಿರ್ದೇಶಕ ಜಿ.ಆರ್ ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

  ಯಾತ್ರಿನಿವಾಸ ಉದ್ಘಾಟನೆ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಶಿವಗಂಗೆ ಯಾತ್ರಿನಿವಾಸವನ್ನು ಶಾಸಕ ಶ್ರೀನಿವಾಸಮೂರ್ತಿ ಉದ್ಘಾಟಿಸಿದರು. ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಹಾಗೂ ಪ್ರವಾಸಿಗರಿಗಾಗಿ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣವಾಗಿದ್ದ ಯಾತ್ರಿನಿವಾಸ ಉದ್ಘಾಟನೆಯಾಗದ ಬಗ್ಗೆ 2018 ಆ.20ರಂದು ‘ಸೇವೆಗೆ ಲಭ್ಯವಾಗದ ಯಾತ್ರಿನಿವಾಸ’ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಉಪಚುನಾವಣೆ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಇದೀಗ ಯಾತ್ರಿಕರಿಗೆ ಮುಕ್ತವಾಗಿದೆ ಎಂದರು.

  ಬಹುಮಾನ ವಿತರಣೆ: ಶಿವಗಂಗೆಯಲ್ಲಿ ಈ ಬಾರಿ ನಡೆದ ಜಾನುವಾರು ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಶಾಸಕ ಶ್ರೀನಿವಾಸಮೂರ್ತಿ ಬಹುಮಾನ ವಿತರಿಸಿದರು. ಪಾಪಣ್ಣ (ಪ್ರಥಮ), ಬೈರೇಗೌಡ (ದ್ವಿತೀಯ), ನಾಗರಾಜಯ್ಯ (ತೃತೀಯ) ಸ್ಥಾನಕ್ಕೆ ಭಾಜನರಾದರು. ಬಸವರಾಜು, ನರಸಿಂಹಮೂರ್ತಿ, ಸಿದ್ದಲಿಂಗಯ್ಯ ಮತ್ತಿತರರು ಬಹುಮಾನ ಪಡೆದರು.

  ದಾಸೋಹ ಸೇವೆ: ಭಕ್ತರಿಗೆ ಹೊನ್ನದೇವಿ ಗಂಗಾಧರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್‌ನಿಂದ ಬೆಳಗ್ಗೆ ಉಪಹಾರವಾಗಿ ಕೇಸರಿಬಾತ್, ಉಪ್ಪಿಟ್ಟು, ಮಧ್ಯಾಹ್ನ ಪಾಯಸದ ಜತೆ ಪ್ರಸಾದ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷೆ ನಾರಾಯಣಮ್ಮ, ಕಾರ್ಯದರ್ಶಿ ಎಂ.ಸೋಮಶೇಖರ್, ಉಪಾಧ್ಯಕ್ಷೆ ಸುನೀತಾದೇವಿ, ಎಸ್.ಪಿ ಯಡಿಯೂರಪ್ಪ, ಜಿ. ನಂಜುಂಡಯ್ಯ, ಎ.ಸಿ ಹೊನ್ನಗಂಗಶೆಟ್ಟಿ, ಎ ಜಗನ್ನಾಥ್, ಎಂ.ಪಿ ಶಿವಶಂಕರ್, ಎಸ್.ಕೆ ಶಾಮ್‌ಪ್ರಸಾದ್ ದೀಕ್ಷಿತ್, ವ್ಯವಸ್ಥಾಪಕ ಎಂ. ಚಿಕ್ಕವೀರಯ್ಯ ದಾಸೋಹ ವ್ಯವಸ್ಥೆ ಉಸ್ತುವಾರಿ ವಹಿಸಿದ್ದರು. ಬಮೂಲ್ ನಿಂದ 20 ಸಾವಿರ ಮಜ್ಜಿಗೆ ಪ್ಯಾಕೆಟ್ ವಿತರಿಸಲಾಯಿತು.

  ಬಸ್ ವ್ಯವಸ್ಥೆ: ನೆಲಮಂಗಲದಿಂದ 17, ತುಮಕೂರಿನಿಂದ 20ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್‌ಪಿ ಮೋಹನ್‌ಕುಮಾರ್, ವೃತ್ತನಿರೀಕ್ಷಕ ಶಿವಣ್ಣ, ಆರಕ್ಷಕ ನಿರೀಕ್ಷಕ ಎಚ್.ಟಿ ವಸಂತ, ಡಿ.ಆರ್ ಮಂಜುನಾಥ್ ಸೇರಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ತುರ್ತು ಆರೋಗ್ಯ ಘಟಕ ಸ್ಥಾಪಿಸಲಾಗಿತ್ತು.

  ಶಿವಗಂಗೆಯ ಮೇಲಿನ ನಂಬಿಕೆ ಹಾಗೂ ಗಿರಿಯ ಮಹಿಮೆ ತಾಲೂಕಿಗೆ ಕಳಶಪ್ರಾಯವಾಗಿದ್ದು ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಮುಂದಿನ ದಿನಗಳಲ್ಲಿ ದನಗಳ ಜಾತ್ರೆ ನಡೆಯುವ ಅವಧಿ ವಿಸ್ತರಣೆಗೆ ಕ್ರಮಕೈಗೊಳ್ಳಲಾಗುವುದು.
  ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ

  ತಾಲೂಕಿನ ವೈಭವದ ಶಿವಗಂಗೆ ಜಾತ್ರೆಗೆ ಆಗಮಿಸುವ ಲಕ್ಷಾಂತರ ಜನರ ಅನುಕೂಲಕಾಗಿ ಮೂಲಸೌಕರ್ಯ, ಭದ್ರತೆ ಒದಗಿಸಲಾಗಿದೆ. ಈ ಶುಭ ದಿನದಂದು 13 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.
  ಎಂ.ಶ್ರೀನಿವಾಸಯ್ಯ, ತಹಸೀಲ್ದಾರ್

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts