More

    ಭೂತದಂತೆ ಕಾಡುತ್ತಿದೆ ಭೂ ಸರ್ವೇ

    ಬೆಳಗಾವಿ: ಸರ್ಕಾರ ಅನೇಕ ಪ್ರಕಾರಗಳ ರೈತಸ್ನೇಹಿ ನಿಯಮ ಜಾರಿಗೊಳಿಸಿದ್ದರೂ ‘ಭೂ ಸರ್ವೇ’ ಕಾರ್ಯ ಮಾತ್ರ ಭೂತದಂತೆ ಕಾಡುತ್ತಿದ್ದು, ರೈತರ ನಿದ್ದೆಗೆಡಿಸಿದೆ. ಅಧಿಕ ಖರ್ಚಿನ ಜತೆಗೆ ಅನೇಕ ಸಮಸ್ಯೆ ಎದುರಾಗಿದ್ದು, ಸರ್ವೇ ಕೆಲಸಕ್ಕಾಗಿ ರೈತರು ಕಚೇರಿಗೆ ಅಲೆದಾಡುವಂತಾಗಿದೆ.

    ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ನನೆಗುದಿಗೆ ಬಿದ್ದಿರುವ ಸುಮಾರು 23 ಸಾವಿರ ಅರ್ಜಿಗಳು ಇನ್ನೂ ವಿಲೇವಾರಿಗೊಂಡಿಲ್ಲ. ಕೃಷಿ ಜಮೀನು ಸೇರಿದಂತೆ ಇನ್ನಿತರ ಅರ್ಜಿಗಳು ತ್ವರಿತಗತಿಯಲ್ಲಿ ಭೂಮಾಪಕರ ಕೈಸೇರುತ್ತಿವೆ. ಆದರೆ ಕರೊನಾ ಲಾಕ್‌ಡೌನ್, ಮಳೆ, ಸಿಬ್ಬಂದಿ ಕೊರತೆ ಇನ್ನಿತರ ಕಾರಣಗಳಿಂದಾಗಿ ಸರ್ವೇ ಕಾರ್ಯ ಮಾತ್ರ ನಡೆಯುತ್ತಿಲ್ಲ.

    ಭೂಮಿಯ ಅಳತೆ, ಭೂಮಿ ಹಂಚಿಕೆ, ತತ್ಕಾಲ್, ಹದ್ದುಬಸ್ತು (11 ಇ ಭೂಮಿ ನಕ್ಷೆ) ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಾಯಬೇಕಾದ ಸ್ಥಿತಿ ಇತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ 2015ರಿಂದಲೇ ಅರ್ಜಿ ವಿಲೇವಾರಿಗೆ ಆನ್‌ಲೈನ್ ವ್ಯವಸ್ಥೆ ಅನುಷ್ಠಾನಗೊಳಿಸಿದೆ. ಆದರೆ, ವಾಸ್ತವದಲ್ಲಿ ರೈತರು ಮತ್ತು ಸಾರ್ವಜನಿಕರು ಸರ್ವೇಗಾಗಿ ಅರ್ಜಿ ಸಲ್ಲಿಸಿ 4 ರಿಂದ 5 ತಿಂಗಳು ಕಾಯಬೇಕು. ಅರ್ಜಿ ಸಲ್ಲಿಸಿ ತಿಂಗಳಾದ ನಂತರ ಭೂಮಾಪಕರಿಗೆ ನೆನಪಿಸಬೇಕಾಗಿದೆ.

    ಸರ್ವೇಗೆ ಅಧಿಕ ಖರ್ಚು: ಸರ್ಕಾರದ ನಿಯಮದ ಪ್ರಕಾರ ಸರ್ವೇಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ತಮ್ಮ ಜಮೀನಿನ ಚಕ್‌ಬಂದಿ ಆಧಾರದ ಮೇಲೆ 170 ರಿಂದ 200 ರೂ. ಶುಲ್ಕ ಕಟ್ಟುತ್ತಿದ್ದಾರೆ. ಬಳಿಕ ಭೂ ದಾಖಲೆಗಳ ಇಲಾಖೆ ಆಯುಕ್ತರು ಸರ್ವೇ ಅರ್ಜಿಗಳನ್ನು ಹಂಚಿಕೆ ಮಾಡಿ ಜಿಲ್ಲಾ, ತಾಲೂಕು ಮಟ್ಟದ ಭೂಮಾಪಕರಿಗೆ ಕಳುಹಿಸಿಕೊಡುತ್ತಾರೆ. ಬಳಿಕ ಸರ್ವೇಗಾಗಿ ಬರುವ ಭೂಮಾಪಕರಿಗೆ ಅರ್ಜಿದಾರರು ಹೆಚ್ಚುವರಿ ಹಣ ಖರ್ಚು ಮಾಡಬೇಕು. ನಿಗದಿತ ಸಮಯದಲ್ಲಿ ಯಾವುದೇ ಭೂಮಾಪಕರು ಸರ್ವೇ ಮಾಡಲು ಬರುವುದಿಲ್ಲ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿ ಸಿದ್ದಮ್ಮನವರ ಆರೋಪಿಸಿದ್ದಾರೆ.

    ಆರಂಭವಾಗದ ಡ್ರೋನ್ ಸಮೀಕ್ಷಾ ಕಾರ್ಯ: ಈಗಾಗಲೇ ಸರ್ಕಾರದ ಭೂಮಿ ನಕ್ಷೆಯಲ್ಲಿ ಮತ್ತು ಆರ್‌ಟಿಸಿಯಲ್ಲಿ ಭೂಮಿ ವಿಸ್ತೀರ್ಣದಲ್ಲಿ ಅಜಗಜಾಂತರ ವ್ಯತ್ಯಾಸ ಉಂಟಾಗುತ್ತಿದೆ. ಹೀಗಾಗಿ ಈ ಸಮಸ್ಯೆ ತಡೆಗಟ್ಟಲು ರೈತರ ಜಮೀನು, ಸರ್ಕಾರಿ ಆಸ್ತಿಗಳನ್ನು ಡ್ರೋನ್ ಮೂಲಕ ಮರು ಸಮೀಕ್ಷೆ ನಡೆಸಲು
    ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯನ್ನು ಆಯ್ಕೆ ಮಾಡಿದೆ. ಆದರೆ, ಇನ್ನೂ ಡ್ರೋನ್ ಮೂಲಕ ಸಮೀಕ್ಷೆ ಕಾರ್ಯ ಆರಂಭವಾಗಿಲ್ಲ. ಇನ್ನು, ಕೃಷಿ ಭೂಮಿ ಸರ್ವೇಯಲ್ಲಿ ನ್ಯಾಯ, ತಕರಾರು ಇದ್ದರೆ ಅಂತಹ ಅರ್ಜಿಗಳ ವಿಲೇವಾರಿಗೆ ಒಂದು ವರ್ಷ ಕಾಯುವ ಪರಿಸ್ಥಿತಿ ಬಂದಿದೆ.

    ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ವಿಲೇವಾರಿ ಆಗದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುವುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಳ್ಳಲಾಗುವುದು. ಕರೊನಾ ಲಾಕ್‌ಡೌನ್ ಹೆಸರಿನಲ್ಲಿ ಸರ್ವೇ ಮಾಡಲು ವಿಳಂಬ ಮಾಡಿದ್ದರೆ ಕ್ರಮ ಜರುಗಿಸಲಾಗುವುದು.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

    ಭೂಮಿಯ ಅಳತೆಗಾಗಿ, ಭೂಮಿ ಹಂಚಿಕೆಗಾಗಿ, ಹದ್ದುಬಸ್ತು ಇನ್ನಿತರ ಕಾರ್ಯಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಇದೀಗ ಲಾಕ್‌ಡೌನ್, ಮಳೆ ಕಾರಣದಿಂದ ವಿಳಂಬವಾಗುತ್ತಿದೆ. ಅಲ್ಲದೆ, ಕರೊನಾ ವೈರಸ್ ಹಿನ್ನೆಲೆಯಲ್ಲಿ ರೈತರು ಸ್ವಲ್ಪ ದಿನಗಳ ಕಾಲ ಸಮಯ ಅವಕಾಶ ಕೇಳಿದ್ದರಿಂದ ವಿಳಂಬವಾಗಿದೆ.
    | ನಿಸಾರ್‌ಅಹ್ಮದ್. ಜಿಲ್ಲಾ ಉಪ ನಿರ್ದೇಶಕ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts