ಚಹಾ ಕೊಡಲು ತಡ ಮಾಡಿದ ಪತ್ನಿ; ಸಿಟ್ಟಿನಿಂದ ಆಕೆಯ ಶಿರಚ್ಛೇದ ಮಾಡಿದ

Sundari
Published on

ಲಖನೌ: ಕೇಳಿದ ತಕ್ಷಣ ಚಹಾ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಶಿರಚ್ಛೇದ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯ ಭೋಜ್‌ಪುರ್​ ಎಂಬ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಂದರಿ (50) ಎಂದು ಗುರತಿಸಲಾಗಿದ್ದು, ಈಕೆಯ ಪತಿ ಧರಮ್​ವೀರ್​ (52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಗಾಜಿಯಾಬಾದ್‌ ವಿಭಾಗದ ಎಸಿಪಿ ಜ್ಞಾನ್ ಪ್ರಕಾಶ್ ರೈ, ಬುಧವಾರ ಬೆಳಗ್ಗೆ ಸುಂದರಿ ಹಾಗೂ ಧರಮ್​ವೀರ್​ ನಡುವೆ ಚಹಾ ಮಾಡುವ ವಿಚಾರವಾಗಿ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ತನ್ನ ಪತ್ನಿಯ ಶಿರಚ್ಛೇದ ಮಾಡಿದ್ದಾನೆ. ಘಟನೆ ನಡೆದ ವೇಳೆ ದಂಪತಿಯ ನಾಲ್ವರು ಮಕ್ಕಳು ಬೇರೊಂದು ಕೋಣೆಯಲ್ಲಿ ಮಲಗಿದ್ದರು ಎಂದು ತಿಳಿದು ಬಂದಿದೆ.

ಸುಂದರಿಯ ಕಿರುಚಾಟವನ್ನು ಕೇಳಿದ ಮಕ್ಕಳು ಹಾಗೂ ನೆರೆಹೊರೆಯವರು ಆಕೆಯ ನೆರವಿಗೆ ಧಾವಿಸುವಷ್ಟರಲ್ಲೇ ಆರೋಪಿ ಶಿರಚ್ಚೇದ ಮಾಡಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಹಿಡಿದ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಎಸಿಪಿ ಜ್ಞಾನ್ ಪ್ರಕಾಶ್ ರೈ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net