More

    ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಲಿ

    ಹಿರೇಕೆರೂರ: ರೈತರು ಬೆಳೆದ ಬೆಳೆ ಎಲ್ಲಿಯವರೆಗೆ ಗ್ರಾಹಕರಿಗೆ ನೇರವಾಗಿ ತಲುಪುವುದಿಲ್ಲವೋ, ಅಲ್ಲಿಯವರೆಗೆ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವುದಿಲ್ಲ. ಹೀಗಾಗಿ ರೈತರ ಆರ್ಥಿಕ ಅಭಿವೃದ್ಧಿ ಅಸಾಧ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಪಂ ಸಭಾಭವನದಲ್ಲಿ ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜದಿಂದ ಬುಧವಾರ ಏರ್ಪಡಿಸಿದ್ದ ರೈತ ದಿನಾಚರಣೆ, ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

    ನಿತ್ಯ ಸೂರ್ಯ ಉದಯಿಸುವ ಹಾಗೆ ರೈತರನ್ನು ಸ್ಮರಿಸುವ ಕೆಲಸವಾಗಬೇಕು. ಕೃಷಿ ಇಲಾಖೆ ರೈತರ ಭೂಮಿಗೆ ಆಸ್ಪತ್ರೆಯಿದ್ದ ಹಾಗೆ, ಜಮೀನುಗಳಿಗೆ ಹೆಚ್ಚಿನ ರಸಗೊಬ್ಬರ ಬಳಸುತ್ತಿರುವುದರಿಂದ ಲವಣಾಂಶ ಸಂಪೂರ್ಣ ನಶಿಸಿ, ಫಲವತ್ತತೆ ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತಿದೆ. ಕಾಲಕಾಲಕಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದು ಅವಶ್ಯ. ರೈತರು ಒಂದೇ ಬೆಳೆಗೆ ಸೀಮಿತವಾಗದೆ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡಿದಾಗ ಮಾತ್ರ ಈ ಕ್ಷೇತ್ರ ಲಾಭದಾಯಕವಾಗಲು ಸಾಧ್ಯ. ಪ್ರತಿ ಗ್ರಾಪಂಗೆ ಒಂದು ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದರು.

    ರೈತರು 20 ಜನರ ಸಂಘ ಮಾಡಿಕೊಂಡು 2 ಲಕ್ಷ ರೂ. ಇಲಾಖೆಗೆ ಭರಿಸಿದರೆ ಅಂಥ ಸಂಘಗಳಿಗೆ ಸರ್ಕಾರ 8 ಲಕ್ಷ ರೂ. ನೆರವು ನೀಡಿ ಟ್ರ್ಯಾಕ್ಟರ್ ನೀಡುತ್ತದೆ. ಈ ಹಣ ಮರಳಿಸಬೇಕಿಲ್ಲ. ಹಿರೇಕೆರೂರ ತಾಲೂಕಿನಲ್ಲಿ 13 ಟ್ರ್ಯಾಕ್ಟರ್​ಗಳನ್ನು ವಿತರಿಸಲಾಗಿದೆ. ಅವಶ್ಯವಿದ್ದರೆ ಮತ್ತಷ್ಟು ಟ್ರ್ಯಾಕ್ಟರ್​ಗಳನ್ನು ವಿತರಿಸಲಾಗುವುದು. ಮೋದಿಯವರು ಬಜೆಟ್​ನಲ್ಲಿ ಕೃಷಿಗಾಗಿ 10 ಲಕ್ಷ ಕೋಟಿ ರೂ. ಮೀಸಲಿರಿಸಿದ್ದಾರೆ. ಇದರಲ್ಲಿ 10 ಸಾವಿರ ಕೋಟಿ ರೂ. ಆಹಾರ ಪರಿಷ್ಕರಣೆಗಾಗಿ ಕಾಯ್ದಿರಿಸಿದ್ದಾರೆ. ಕಾಲ ಬದಲಾದಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು. ರೈತರು ನೆಮ್ಮದಿಯ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ನೂತನ ಕೃಷಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ರೈತರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ. ಬದಲಿಗೆ ಲಾಭದಾಯಕವಾಗಲಿದೆ. ರೈತ ಸಮೂಹ ಮೊದಲು ಇದನ್ನು ಮನಗಾಣಬೇಕಿದೆ ಎಂದರು.

    ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಅಲ್ಪ ಜಮೀನಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ಬಗ್ಗೆ ಹೆಚ್ಚು ಗಮನಹರಿಸಬೇಕು. ನೂತನ ಕೃಷಿ ಕಾಯ್ದೆ ಬಗ್ಗೆ ರೈತರು ಮೊದಲು ಅರಿತುಕೊಂಡು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜಿಡ್ಡುಗಟ್ಟಿದ ಕೃಷಿ ಇಲಾಖೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಹೊಸ ಆಯಾಮ ನೀಡುವ ಮೂಲಕ ಉತ್ತೇಜನ ನೀಡಿದ್ದಾರೆ. ಇದು ಪ್ರಶಂಸನೀಯ ಕಾರ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಜಿ. ಶಿವನಗೌಡ್ರ ಮಾತನಾಡಿದರು. ಕೃಷಿ ಪ್ರಾಧ್ಯಾಪಕ ಡಾ. ಎಚ್.ವೈ. ಪಾಟೀಲ ರೈತರೊಂದಿಗೆ ಕಿಸಾನ್ ಗೋಷ್ಠಿ ನಡೆಸಿದರು. ತಾಪಂ ಅಧ್ಯಕ್ಷ ರಾಜು ಬಣಕಾರ, ರೈತರು ಇದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ವಿ. ಮಂಜುನಾಥ, ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ ಗೌಡರ, ರೈತ ಅನುವುಗಾರ ದೇವರಾಜ ಮಾನೇರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts