More

    ಔದಾರ್ಯದಿಂದಲೇ ಕನ್ನಡಕ್ಕೆ ಅಪಾಯ

    ಶಿವಮೊಗ್ಗ: ಕನ್ನಡಿಗರು ಅನ್ಯ ಭಾಷಿಕರೊಂದಿಗೆ ವ್ಯವಹರಿಸುವಾಗ ಕನ್ನಡವನ್ನು ಬಿಟ್ಟು ಎದುರಿಗೆ ಇರುವ ವ್ಯಕ್ತಿಯ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಈ ಭಾಷಾ ಬಳಕೆಯ ಔದಾರ್ಯದಿಂದಲೇ ಕನ್ನಡಕ್ಕೆ ಅಪಾಯ ಎದುರಾಗಿದೆ ಎಂದು ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಕಳವಳ ವ್ಯಕ್ತಪಡಿಸಿದ್ದರು.

    ಶುಕ್ರವಾರ ಜಿಲ್ಲಾ ಜಂಗಮ ಸಮಾಜದ ಮಹಿಳಾ ಘಟಕದಿಂದ ಏರ್ಪಡಿಸಿದ್ದ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಬೇರೆ ಭಾಷಿಕರೊಂದಿಗೆ ರಾಜ್ಯದೊಳಗೆ ವ್ಯವಹರಿಸುವಾಗ ಕನ್ನಡದಲ್ಲೇ ಮಾತನಾಡಬೇಕು. ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಭಾಷೆ ಎನ್ನುವುದು ಸೇತುವೆ ಇದ್ದ ಹಾಗೆ. ಕನ್ನಡ ಭಾಷೆಯನ್ನು ಮರೆಯಬಾರದು. ಎಲ್ಲ ಕನ್ನಡಿಗರೂ ಮನೆಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು ಎಂದರು.
    ಸರ್ಕಾರ ಮಹಿಳೆಯರಿಗೆ ಸ್ವಂತ ಉದ್ಯೋಗ ನಡೆಸಲು ಪ್ರೋತ್ಸಾಹ ನೀಡಬೇಕು. ದುಬಾರಿ ಯುಗದಲ್ಲಿ ಗಂಡ, ಹೆಂಡತಿ ಇಬ್ಬರೂ ದುಡಿಯುವ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಆರ್ಥಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
    ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎ.ಎನ್.ಸಂಗಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಹೆಣ್ಣುಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅವರಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿದೆ ಎಂದರು.
    ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆಶಾ ಹಿರೇಮಠ್, ಪ್ರಮುಖರಾದ ಕೆ.ಆರ್.ಸೋಮನಾಥ್, ಪುಟ್ಟಯ್ಯ, ಜಗದೀಶ್, ಲಿಂಗರಾಜ್, ಉಮಾಮಹೇಶ್ವರ, ಅನ್ನಪೂರ್ಣಮ್ಮ, ಶಿಲ್ಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts