More

    ನಾಳೆಯಿಂದ ಪ್ರಚಾರ ಕಣಕ್ಕೆ ಗೀತಾ ಶಿವರಾಜ್ ಕುಮಾರ್

    ಶಿವಮೊಗ್ಗ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಲೋಕಸಭೆ ಚುನಾವಣೆ ಕಣಕ್ಕೆ ಭರ್ಜರಿ ಎಂಟ್ರಿ ನೀಡಲು ಸಿದ್ಧತೆಗಳು ಪೂರ್ಣಗೊಂಡಿವೆ. ಮಾ.20ರಂದು ಗೀತಾ ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

    ಬೆಳಗ್ಗೆ 10.30ಕ್ಕೆ ಭದ್ರಾವತಿಯ ಬಾರಂದೂರು ಬಳಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. 11ಕ್ಕೆ ಎಂಆರ್‌ಎಸ್ ವೃತ್ತದಿಂದ ಲಗಾನ್ ಕಲ್ಯಾಣ ಮಂದಿರದವರೆಗೆ ಅವರನ್ನು ಮರೆವಣಿಗೆಯಲ್ಲಿ ಕರೆದೊಯ್ಯಲಾಗುವುದು. ಬೆಳಗ್ಗೆ 11.30ಕ್ಕೆ ಕಾರ್ಯಕರ್ತರ ಸಭೆ ಆರಂಭವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ನಟ ಶಿವರಾಜ್‌ಕುಮಾರ್ ಸಭೆಯ ಮುಖ್ಯ ಆಕರ್ಷಣೆ. ನಾವು ಗ್ಯಾರಂಟಿ ಆಧಾರದಲ್ಲಿ ಈ ಚುನಾವಣೆ ಎದುರಿಸುತ್ತೇವೆ. ಗೀತಾ ಶಿವರಾಜ್‌ಕುಮಾರ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಇದು ಸುಳ್ಳು ಹಾಗೂ ಸತ್ಯದ ನಡುವಿನ ಚುನಾವಣೆಯಾಗಿದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಬಿಜೆಪಿ ನಾಯಕರು ಜನರಿಗೆ ಸುಳ್ಳು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಚುನಾವಣೆಗೂ ಮೊದಲು ಘೋಷಣೆ ಮಾಡಿದ್ದ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ ಎಂದರು.
    ಗೀತಾ ಶಿವರಾಜ್‌ಕುಮಾರ್‌ಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲದಿರಬಹುದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಅವರು ಹಾಗೂ ಶಿವಣ್ಣ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಗೀತಾ ಅವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿಯಿದೆ. ಹೀಗಾಗಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
    ಮೋದಿ ಅಲೆಯಿಲ್ಲ, ಈಶ್ವರಪ್ಪ ಬಲವಿದೆ: ಕಳೆದ ಎರಡು ತಿಂಗಳವರೆಗೂ ಸ್ವಲ್ಪ ಮಟ್ಟಿಗೆ ಮೋದಿ ಅಲೆ ಕಾಣಿಸುತ್ತಿತ್ತು. ಆದರೆ ಈಗ ಅಲೆ ಕಾಣುತ್ತಿಲ್ಲ. ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಸ್‌ಬಿಐ ಮೇಲೆ ಕಿಡಿಕಾರಿದೆ. ಐಟಿ, ಇಡಿ, ಸಿಬಿಐ ಮೂಲಕ ದಾಳಿ ನಡೆಸಿ ಬಿಜೆಪಿ ಹಫ್ತಾ ವಸೂಲಿ ಮಾಡಿದೆ ಎಂದು ಸುಂದರೇಶ್ ಟೀಕಿಸಿದರು. ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ನಿಶ್ಚಿತವಾಗಿಯೂ ಅನುಕೂಲವಾಗಲಿದೆ. ಆದರೆ ಅವರು ಸ್ಪರ್ಧೆ ಮಾಡುತ್ತಾರೊ? ಇಲ್ಲವೊ? ಎಂಬುದನ್ನು ಕಡೇ ಕ್ಷಣದವರೆಗೂ ಹೇಳುವಂತಿಲ್ಲ ಎಂದರು.
    ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ನಗರಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಪ್ರಮುಖರಾದ ಚಂದ್ರಭೂಪಾಲ್, ಚಂದನ್, ಎನ್.ಡಿ.ಪ್ರವೀಣ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts