More

    ಖಾರ್ಲ್ಯಾಂಡ್ ಒಡ್ಡುಗಳಿಗೆ ಗೇಟ್


    ಸುಭಾಸ ಧೂಪದಹೊಂಡ ಕಾರವಾರ
    ಈ ವರ್ಷದ ಬಜೆಟ್​ನಲ್ಲಿ ಘೊಷಣೆಯಾಗಿರುವ ಉತ್ತರ ಕನ್ನಡ ಕರಾವಳಿಯ ಖಾರ್ಲ್ಯಾಂಡ್ ಒಡ್ಡುಗಳಿಗೆ ಫ್ಲಾŒಪ್ ಗೇಟ್ ಅಳವಡಿಕೆ ಕಾರ್ಯಕ್ಕೆ ಸರ್ವೆ ಆರಂಭವಾಗಿದೆ. ಈ ಯೋಜನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್​ನಲ್ಲಿ 300 ಕೋಟಿ ರೂ. ಘೊಷಣೆ ಮಾಡಿದ್ದರು.
    ಜಿಲ್ಲೆಯ ಕಾರವಾರ-ಅಂಕೋಲಾ, ಕುಮಟಾ-ಹೊನ್ನಾವರ ಹಾಗೂ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಗಳಿಗೆ ತಲಾ 100 ಕೋಟಿ ರೂಪಾಯಿಯಂತೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ಈ ಅನುದಾನ ವಿನಿಯೋಗಿಸಿ ಕಾಮಗಾರಿ ಕೈಗೊಳ್ಳಲು ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಜಲ ಸಂಪನ್ಮೂಲ ಸಚಿವ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯಿಸಲಾಗಿದೆ.
    ಜಿಲ್ಲೆಯ ಕರಾವಳಿಯಲ್ಲಿ ಈಗಿರುವ ಖಾರ್ಲ್ಯಾಂಡ್ ಬಂಡ್​ಗಳು ಹಾಗೂ ಹೊಸದಾಗಿ ನಿರ್ವಿುಸಬೇಕಾಗಿರುವ ಒಡ್ಡುಗಳ ಬಗ್ಗೆ ಸಣ್ಣ ನೀರಾವರಿ ಇಲಾಖೆ ಸರ್ವೆ ಕಾರ್ಯ ಪ್ರಾರಂಭಿಸಿದೆ. ಕಾರವಾರ-ಅಂಕೋಲಾದಲ್ಲಿ ಸರ್ವೆ ಕಾರ್ಯ ಮುಗಿದಿದ್ದು, ಉಳಿದ ತಾಲೂಕುಗಳ ಸಮೀಕ್ಷೆಯನ್ನು ಇಲಾಖೆ ಇಂಜಿನಿಯರ್​ಗಳು ಹಾಗೂ ಖಾಸಗಿ ಕಂಪನಿ ಸಿಬ್ಬಂದಿ ಜತೆಗೂಡಿ ನಡೆಸಿದ್ದಾರೆ. ಸರ್ವೆ ವರದಿ ಆಧರಿಸಿ ಶೀಘ್ರದಲ್ಲಿ ವಿಸõತ ಯೋಜನಾ ವರದಿ (ಡಿಪಿಆರ್) ತಯಾರಿಸಬೇಕಿದೆ. ನಂತರ ಮೊದಲ ವರ್ಷ ತುರ್ತು ಇರುವ 100 ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಲು ಇಲಾಖೆ ಯೋಜನೆ ರೂಪಿಸಿಕೊಂಡಿದೆ.
    ಸಾವಿರಾರು ಎಕರೆಗೆ ಹಾನಿ: ಪಶ್ಚಿಮ ಘಟ್ಟದಿಂದ ಹರಿದು ಬರುವ 4 ದೊಡ್ಡ ನದಿಗಳು ಹಾಗೂ 10ಕ್ಕೂ ಹೆಚ್ಚು ಪುಟ್ಟ ನದಿಗಳು ಜಿಲ್ಲೆಯ ಕರಾವಳಿಯ ಐದು ತಾಲೂಕುಗಳಲ್ಲಿ ವಿವಿಧೆಡೆ ಸಮುದ್ರ ಸೇರುತ್ತವೆ. ಉಬ್ಬರ ಹಾಗೂ ಇಳಿತದ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರು ಈ ನದಿಗಳಿಗೆ ನುಗ್ಗುತ್ತದೆ. ಕೆಲ ನದಿ ಅಳಿವೆ ಪ್ರದೇಶಗಳಲ್ಲಿ ಸಮುದ್ರದಿಂದ ಹಿಂದೆ 40 ಕಿಮೀವರೆಗೂ ಉಪ್ಪು ನೀರಿನ ಪ್ರಭಾವ ಉಂಟಾಗುವುದಿದೆ. ನದಿ ಹರಿವಿನ ಪ್ರದೇಶ ಮಾತ್ರವಲ್ಲ ಅದರಿಂದ ರಚನೆಯಾದ ಹಿನ್ನೀರು ಪ್ರದೇಶಗಳಿಗೂ ನುಗ್ಗುತ್ತದೆ. ಅಷ್ಟೇ ಏಕೆ ಸಾವಿರಾರು ಎಕರೆ ಕೃಷಿ ಭೂಮಿಗಳಿಗೂ ಸಾಗರದ ಉಪ್ಪು ನೀರು ಆಗಾಗ ದಾಳಿ ಇಡುತ್ತದೆ. ಇದರಿಂದ ಸಮೀಪ ಇರುವ ಬಾವಿಗಳ ನೀರೆಲ್ಲ ಉಪ್ಪಾಗಿಬಿಡುತ್ತದೆ. ನದಿಗಳ ನೀರಿನ ಹರಿವು ಕಡಿಮೆಯಾಗುವ ಬೇಸಿಗೆಯಲ್ಲಿ ಈ ಉಪ್ಪು ನೀರಿನ ಹಾವಳಿ ಹೆಚ್ಚು. ಇದು ಅಳಿವೆ ಪ್ರದೇಶಗಳ ಸಾಮಾನ್ಯ ಪ್ರಕ್ರಿಯೆ ಇದರಿಂದ ಅಳಿವೆ ಪ್ರದೇಶ ವಿಶೇಷ ಜೀವ ವೈವಿಧ್ಯ ತಾಣವಾಗಿದೆ. ಇದರಿಂದ ಉಪ್ಪು ತಯಾರಿಕೆ, ಶಿಗಡಿ ಕೃಷಿ ಮುಂತಾದವಕ್ಕೆ ಅನುಕೂಲವಾಗುತ್ತದೆ. ಆದರೆ, ಭತ್ತ ಮುಂತಾದ ಕೃಷಿಗೆ ಸಮಸ್ಯೆಯಾಗುತ್ತದೆ. ಉಪ್ಪು ನೀರು ನುಗ್ಗುವುದರಿಂದ ಕೃಷಿ ಭೂಮಿ ಬಳಕೆಗೆ ಅಯೋಗ್ಯವಾಗುತ್ತದೆ. ಇದನ್ನು ತಡೆಯಲು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಖಾರ್ಲ್ಯಾಂಡ್ (ಉಪ್ಪು ನೀರು ನುಗ್ಗುವ ಜೌಗು ಪ್ರದೇಶ) ಒಡ್ಡುಗಳ ನಿರ್ಮಾಣ ಯೋಜನೆ ರೂಪಿಸಿದರು. ಭಾರತ ಸರ್ಕಾರದ ಜಲಸಂಪನ್ಮೂಲ ಇಲಾಖೆ 2017ರಲ್ಲಿ ನಡೆಸಿದ ಸರ್ವೆಯಂತೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಸದ್ಯ ಸುಮಾರು 81 ಖಾರ್ಲ್ಯಾಂಡ್ ಒಡ್ಡುಗಳಿವೆ. ಸುಮಾರು 9599 ಎಕರೆ ಪ್ರದೇಶಕ್ಕೆ ಇವು ಉಪ್ಪು ನೀರು ನುಗ್ಗುವುದನ್ನು ತಡೆಯುತ್ತವೆ.
    ನೂರಾರು ಕೋಟಿ ವ್ಯಯ: ಈ ಒಡ್ಡುಗಳ ನಿರ್ವಣಕ್ಕಾಗಿ ಸರ್ಕಾರ ಇದುವರೆಗೆ ನೂರಾರು ಕೋಟಿ ರೂಪಾಯಿ ವ್ಯಯ ಮಾಡಿದೆ. ಒಡ್ಡುಗಳಿಗೆ ಹಳೆಯ ಪದ್ಧತಿಯಂತೆ ಕಬ್ಬಿಣದ ಹಾಗೂ ಮರ ಬಳಸಿ ಗೇಟ್ ಮಾಡಲಾಗುತ್ತಿತ್ತು. ಗೇಟ್​ಗಳು ಮಳೆಗಾಲದಲ್ಲಿ ಬರುವ ಸಿಹಿ ನೀರನ್ನು ಸಮುದ್ರದೆಡೆ ಹರಿಯಲು ಬಿಡಬೇಕು. ಬೇಸಿಗೆಯಲ್ಲಿ ಸಮುದ್ರದೆಡೆಯಿಂದ ಬರುವ ಉಪ್ಪು ನೀರು ಮೇಲಿನ ಪ್ರದೇಶಕ್ಕೆ ನುಗ್ಗದಂತೆ ತಡೆಯಬೇಕು. ಆದರೆ, ಕರಾವಳಿಯ ವಾತಾವರಣಕ್ಕೆ ಈ ಗೇಟ್​ಗಳು ವರ್ಷದಲ್ಲೇ ಹಾಳಾಗಿಬಿಡುತ್ತವೆ. ಪ್ರತಿ ಬಾರಿ ಗೇಟ್​ಗೆ ಹಲಗೆ ಹಾಕಿ ತೆಗೆಯುವ ಕಾರ್ಯ ಕಷ್ಟಕರ. ಇದರಿಂದ ಜಿಲ್ಲೆಯಲ್ಲಿರುವ ಖಾರ್ಲ್ಯಾಂಡ್ ಒಡ್ಡುಗಳಲ್ಲಿ ಶೇ. 80 ರಷ್ಟು ಒಡ್ಡುಗಳು ಉಪು್ಪ ನೀರು ನುಗ್ಗುವುದನ್ನು ತಡೆಯಲು ವಿಫಲವಾಗಿವೆ ಎಂಬ ದೂರಿದೆ.
    ಫ್ಲಾŒಪ್ ಗೇಟ್ ಅಳವಡಿಕೆ: ಈ ಸಮಸ್ಯೆಯಿಂದ ಪಾರಾಗಲು ತನ್ನಿಂದ ತಾನಾಗಿಯೇ ಸಿಹಿ ನೀರನ್ನು ಸಮುದ್ರದೆಡೆ ಹರಿಯಲು ಬಿಟ್ಟು ಉಪ್ಪು ನೀರನ್ನು ತಡೆಯುವ ಆಧುನಿಕ ಗೇಟ್ ವ್ಯವಸ್ಥೆ ಈಗ ಬಂದಿದೆ. ಅದನ್ನು ಅಳವಡಿಸುವ ಯೋಜನೆಯನ್ನು ಈ ಬಜೆಟ್​ನಲ್ಲಿ ಘೊಷಿಸಲಾಗಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗಲಿದ್ದು, ಗೇಟ್​ಗಳು ಹೆಚ್ಚು ವರ್ಷ ಬಾಳಿಕೆ ಬರಲಿವೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.
    ಅನುದಾನ ಕಡಿತ ಚಿಂತೆ: ಕರಾವಳಿಯ ಖಾರ್ಲ್ಯಾಂಡ್ ಅಭಿವೃದ್ಧಿಗೆ ಸಮಗ್ರ ಯೋಜನೆ ಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಈಗ ಸರ್ಕಾರ ಇದಕ್ಕೆ ಅನುದಾನ ನೀಡಿದೆ. ಯೋಜನೆ ರೂಪುಗೊಳ್ಳುತ್ತಿದೆ. ಆದರೆ, ಕೋವಿಡ್ ಕಾರಣ ಬಜೆಟ್​ನಲ್ಲಿ ವಿವಿಧ ಇಲಾಖೆಗಳಿಗೆ ಘೊಷಿಸಿದ ಅನುದಾನ ಕಡಿತ ಮಾಡಲಾಗುತ್ತಿದ್ದು, ಈ ಅನುದಾನವೂ ಕಡಿತವಾದರೆ ಎಂಬ ಆತಂಕವೂ ಇದೆ.

    ಕರಾವಳಿಯ ಖಾರ್ಲ್ಯಾಂಡ್ ಒಡ್ಡುಗಳ ಸರ್ವೆ ಕಾರ್ಯ ನಡೆದಿದೆ. ಅದು ಮುಗಿದ ನಂತರ ವಿಸõತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆದು ಮುಂದೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.
    | ಸದಾನಂದ ರಾಯ್ಕರ್, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಹಳಿಯಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts