More

    ಕೊಳಚೆಯಲ್ಲಿ ಅರಳಿದ ಹೂದೋಟ!

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ತ್ಯಾಜ್ಯ ನಿರ್ವಹಣಾ ಘಟಕಗಳ ಸುತ್ತ ಕಣ್ಣು ಹಾಯಿಸಿದರೆ ಸಾಮಾನ್ಯವಾಗಿ ತ್ಯಾಜ್ಯದ ರಾಶಿಯೇ ಗೋಚರಿಸುತ್ತದೆ. ಅಲ್ಲಿ ಗೆಬ್ಬೆದ್ದು ನಾರುತ್ತಿರುವ ಪರಿಸ್ಥಿತಿಯೂ ಇರುತ್ತದೆ. ಆದರೆ, ಕಾರ್ಕಳದಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಹೂ-ಗಿಡಗಳು ಕಂಗೊಳಿಸುತ್ತಿದ್ದು, ಅಲ್ಲೊಂದು ಸುಂದರ ಉದ್ಯಾನವನ ಮೈದಳೆದಿದೆ.

    ಕಾರ್ಕಳ ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಪ್ರದೇಶದಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವೀಗ ಹೂ-ಗಿಡಗಳಿಂದ ಗಮನ ಸೆಳೆಯುತ್ತಿದೆ. ತ್ಯಾಜ್ಯ ನಿರ್ವಹಣೆ ಜತೆಯಲ್ಲಿ ಉದ್ಯಾನವನವಾಗಿಯೂ ಬೆಳೆಯುತ್ತಿದ್ದು, ಸುಂದರ ಹೂದೋಟದ ನಿರ್ಮಾಣವಾಗಿದೆ.

    ಹೂಗಳ ಆಕರ್ಷಣೆ

    ಹಿಂದಿನ ಸರ್ಕಾರದ ಅವಧಿಯಲ್ಲಿ ಎಎಸ್‌ಎಸ್‌ಎಂಅನ್ನು ಮೊದಲ ಬಾರಿಗೆ ಕಾರ್ಕಳದಲ್ಲಿ ಪರಿಚಯಿಸಲಾಗಿತ್ತು. ಸುಮಾರು 2 ಕೋಟಿ ರೂ.ವೆಚ್ಚದ ಯೋಜನೆಗೆ 2022ರ ಜೂನ್ ತಿಂಗಳಲ್ಲಿ ಕರಿಯಕಲ್ಲು ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಭೂಮಿಪೂಜೆ ಮಾಡಲಾಗಿತ್ತು. ಅದೇ ವೇಳೆ ಅಲ್ಲಿನ ಮಲೀನ ನೀರಿನಿಂದ ಹೂದೋಟವನ್ನೂ ಮಾಡಲಾಗಿತ್ತು, ಸಂಸ್ಕರಣಾ ಘಟಕದ ಮರುಪೂರಣ ನೀರನ್ನು ಸದ್ಬಳಕೆ ಮಾಡಿ ತ್ಯಾಜ್ಯ ನಿರ್ವಹಣಾ ಘಟದ ಸುತ್ತಮುತ್ತ ವಿವಿಧ ಜಾತಿಯ ಹೂವಿನ ಗಿಡ ಬೆಳೆಸಲಾಗಿತ್ತು. ಆ ಗಿಡಗಳೆಲ್ಲ ಈಗ ಹೂವು ಬಿಟ್ಟಿದ್ದು, ಆಕರ್ಷಣೀಯವಾಗಿದೆ.

    ಸ್ವಚ್ಛತೆಯ ಪರಿಸರ

    ಇಲ್ಲಿನ ಸುಂದರ ಹೂದೋಟದಿಂದಾಗಿ ತ್ಯಾಜ್ಯ ನಿರ್ವಹಣೆಯ ಘಟಕವೀಗ ಪರಿಸರ ಸ್ನೇಹಿಯಾಗಿ ರೂಪುಗೊಂಡಿದೆ. ತ್ಯಾಜ್ಯ ತುಂಬಿ ದುರ್ನಾತ ಬೀರುವ ಘಟಕಗಳ ಮಧ್ಯೆ ಕಾರ್ಕಳದ ತ್ಯಾಜ್ಯ ನಿರ್ವಹಣಾ ಘಟಕ ಕಣ್ಮನ ಸೆಳೆಯುತ್ತಿದೆ. ತ್ಯಾಜ್ಯ ನಿರ್ವಹಣಾ ಘಟಕವೆಂದರೆ ಮೂಗುಮುಚ್ಚಿ ಸಾಗಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ, ಕಾರ್ಕಳದ ತ್ಯಾಜ್ಯ ಘಟಕವು ಸ್ವಚ್ಛತೆಯೊಂದಿಗೆ ಸುಂದರ ಹೂದೋಟದ ಮೂಲಕ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

    ಕಸದಿಂದ ಗೊಬ್ಬರ ತಯಾರಿಕೆ

    ರಾಜ್ಯದಲ್ಲಿ ಮೊದಲ ಬಾರಿಗೆ ಗ್ರಾಮೀಣ ಭಾಗದ ಪೌರಾಡಳಿತ ಪ್ರದೇಶಕ್ಕೆ ತ್ಯಾಜ್ಯ ನಿರ್ವಹಣಾ ಘಟಕ ಯೋಜನೆ ತರುವಲ್ಲಿ ಶಾಸಕ ವಿ.ಸುನೀಲ್‌ಕುಮಾರ ಯಶಸ್ವಿಯಾಗಿದ್ದರು. ಪುರಸಭೆ ಅಧ್ಯಕ್ಷೆಯಾಗಿದ್ದ ಸುಮಾ ಕೇಶವ ಅವರ ಅವಧಿಯಲ್ಲಿ ಯೋಜನೆ ಕಾರ್ಯಗತಗೊಂಡಿದ್ದು, ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಸಹಿತ ಆಡಳಿತ-ವಿಪಕ್ಷ ಸದಸ್ಯರ ಸಹಕಾರದಿಂದ ಈ ಯೋಜನೆ ಇಲ್ಲಿ ಉತ್ತಮವಾಗಿ ಕಾರ್ಯಗತಗೊಂಡಿತ್ತು. ಇಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿರುವುದೂ ಈ ಘಟಕದ ಇನ್ನೊಂದು ವಿಶೇಷ.

    ವಾಸನೆ ರಹಿತ ಪರಿಸರಸ್ನೇಹಿ ಘಟಕವಾಗಿ, ಕೊಳಚೆ ಮುಕ್ತವಾಗಿ ಸುಂದರ ವಾತಾವರಣ ಸೃಷ್ಟಿಗೊಂಡಿದೆ. ಸಮರ್ಪಕವಾಗಿ ಯೋಜನೆ ಕಾರ್ಯಗತಗೊಳಿಸಲಾಗಿದ್ದು, ಘಟಕದಲ್ಲಿ ಹೂದೋಟದ ಸುಂದರ ಉದ್ಯಾನವನ ನಿರ್ಮಿಸಲಾಗಿದೆ. ಗಿಡಗಳು ಹೂವು ಬಿಟ್ಟು ಇಡೀ ಪರಿಸರ ಸುಂದರವಾಗಿ ಕಾಣುತ್ತಿದೆ.
    ರೂಪಾ ಟಿ. ಶೆಟ್ಟಿ
    ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ

    ತ್ಯಾಜ್ಯ ನಿರ್ವಹಣಾ ಘಟಕ ಎಂದರೆ ಮೂಗು ಮುಚ್ಚಿ ಸಾಗುವ ಪರಿಸ್ಥಿತಿಯೇ ಹೆಚ್ಚು. ಆದರೆ, ಕಾರ್ಕಳದ ಈ ಘಟಕ ಕಂಡರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಇಲ್ಲಿನ ಪರಿಸರ ಸುಂದರವಾಗಿದ್ದು, ಹೂದೋಟ ನೋಡಲು ಖುಷಿ ಕೊಡುತ್ತಿವೆ.
    ಸುರೇಶ
    ಗ್ರಾಮಸ್ಥ, ಕರಿಯಕಲ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts