More

    ಮುದ್ದಣ್ಣ ಮಂಟಪದಲ್ಲಿ ರಂಗ ಸಂಗಮ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಸಾಮಾನ್ಯವಾಗಿ ಒಂದು ತಂಡದ ಸುಮಾರು 10ರಿಂದ 15 ಕಲಾವಿದರು ಸೇರಿ ಒಂದು ನಾಟಕ ಪ್ರದರ್ಶಿಸುವುದು ಸಾಮಾನ್ಯ. ಆದರೆ, ಉಡುಪಿ ಜಿಲ್ಲೆಯ ವಿವಿಧ ತಂಡದ 50ಕ್ಕೂ ಹೆಚ್ಚು ಕಲಾವಿದರು ಒಂದೇ ವೇದಿಕೆಯಲ್ಲಿ 6 ನಾಟಕ ಪ್ರದರ್ಶಿಸಿ ವಿಶೇಷ ರಂಗಪ್ರಯೋಗ ಮಾಡಿದ್ದಾರೆ.

    ಇತ್ತೀಚೆಗೆ ಉಡುಪಿಯ ಎಂಜಿಎಂ ಕಾಲೇಜ್‌ನ ಮುದ್ದಣ ಮಂಟಪದಲ್ಲಿ ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ ‘ರಂಗ ಸಂಗಮ’ ಕಾರ್ಯಕ್ರಮ ವಿಶಿಷ್ಟತೆಯಿಂದ ಕೂಡಿತ್ತು.

    ಮನ ರಂಜಿಸಿದ ನಾಟಕ

    ಇತ್ತೀಚೆಗಿನ ದಿನಗಳಲ್ಲಿ ಒಂದು ತಂಡದ ನಾಟಕ ಕಲಾವಿದರು ಮತ್ತೊಂದು ತಂಡದಲ್ಲಿ ನಟಿಸುವುದು ಅಪರೂಪ. ಆದರೆ, ಉಡುಪಿ ಜಿಲ್ಲೆಯ ಎಲ್ಲ ನಾಟಕ ಕಲಾವಿದರು ಜತೆಯಾಗಿ ಒಂದೇ ವೇದಿಕೆಯಲ್ಲಿ ಭಿನಯಿಸುವ ಮೂಲಕ ಕಲಾಭಿಮಾನಿಗಳ ಮನ ರಂಜಿಸಿದ್ದಾರೆ. ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಾಪು ಲೀಲಾಧರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಲಾಗಿತ್ತು. ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿದ್ದು ಉಚ್ಚಿಲ ಅವರ ನಿರ್ದೇಶದಲ್ಲಿ ವಿವಿಧ ಭಾಷೆಯ ಪ್ರಸಿದ್ಧ 6 ನಾಟಕವನ್ನು ವಿವಿಧ ಕಲಾವಿದರು ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.

    ranga sangama

    ಸುಮಧುರ ಸಂಗೀತ

    ಕಳೆದೆರಡು ವಾರದಿಂದ ಜಿಲ್ಲೆಯ ವಿವಿಧ ನಾಟಕ ತಂಡದ ಕಲಾವಿದರು ಶರತ್ ಉಚ್ಚಿಲ ಅವರ ಸಹಕಾರದಲ್ಲಿ ನಾಟಕ ಅಭ್ಯಾಸ ಮಾಡಿ ಪ್ರದರ್ಶನ ಮಾಡಿದ್ದಾರೆ. ನಾಟಕದುದ್ದಕ್ಕೂ ಶೋಧನ್ ಎರ್ಮಾಳ್ ಹಾಗೂ ಮೇಘನಾ ಕುಂದಾಪುರ ಅವರು ಸುಂದರವಾರ ಸಂಗೀತ ನೀಡಿದ್ದರು. ತುಳುರಂಗಭೂಮಿಯ ಪ್ರಸಿದ್ಧ ಕಲಾವಿದ ಸಂದೀಪ ಶೆಟ್ಟಿ ಮಾಣಿಬೆಟ್ಟು, ನಾಗರಾಜ ವರ್ಕಾಡಿ ಸಹಕರಿಸಿದ್ದರು.

    ಪ್ರಸಿದ್ಧ ನಾಟಕಗಳು

    ನಾಡಿನ ಪ್ರಸಿದ್ಧ ನಾಟಕಗಳಲ್ಲಿ ಪ್ರಮುಖವಾಗಿದ್ದ 6 ನಾಟಕಗಳು ಪ್ರದರ್ಶನಗೊಂಡವು. ವಿಲಿಯಂ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕಗಳಲ್ಲಿ ಒಂದಾದ ಮ್ಯಾಕ್ ಬೆತ್, ತುಳುನಾಡು ಸೇರಿದಂತೆ ನಾನಾ ಭಾಗಗಳಲ್ಲಿ ಸಾವಿರಾರು ಪ್ರದರ್ಶನ ಕಂಡ ಡಾ.ಸಂಜೀವ ದಂಡೆಕೇರಿ ರಚಿಸಿರುವ ಬಯ್ಯ ಮಲ್ಲಿಗೆ, ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋರ‌್ದಬ್ಬು ತನ್ನಿಮಾನಿಗ ದೈವ ಕಥೆ ಒಳಗೊಂಡ ಕೋರ‌್ದಬ್ಬು ತನ್ನಿಮಾನಿಗ, ಪ್ರಸಿದ್ಧ ತುಳು ನಾಟಕ ಗೊಂದೊಳು, ಹಾಗೂ ಸುಪ್ರಸಿದ್ಧ ನಾಟಕಗಳಾದ ಭರತ ವಾಕ್ಯ, ಚೇಕಾವ್ ಟು ಶ್ಯಾಂಪೇನ್ ಹೀಗೆ ಅನೇಕ ನಾಟಕ ಪ್ರದರ್ಶನಗೊಂಡವು. ಉಡುಪಿ ಜಿಲ್ಲೆಯ ತುಳು ನಾಟಕದ ತಂಡದ ವಿವಿಧ ಕಲಾವಿದರು ಜತೆಯಾಗಿದ್ದರು.

    ಒಂದು ತಂಡ ಪ್ರದರ್ಶಿಸುವ ನಾಟಕವನ್ನು ಪ್ರೇಕ್ಷಕರು ನೋಡಿರುತ್ತಾರೆ. ಆದರೆ, ಇಲ್ಲಿ ಅನೇಕ ತಂಡದ ಕಲಾವಿದರು ಜತೆಯಾಗಿ ವಿವಿಧ ಪ್ರಸಿದ್ಧ ನಾಟಕವನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿರುವುದು ನಿಜಕ್ಕೂ ಮೆಚ್ಚುವಂತದ್ದು. ಕಲಾವಿದನಾಗಿ ನನಗೂ ಸಂತಸ ತಂದಿದೆ.
    -ಸತೀಶ ಪಿಲಾರ್, ರಂಗಭೂಮಿ ಕಲಾವಿದ

    ವಿದ್ದು ಉಚ್ಚಿಲ ಅವರ ನಿರ್ದೇಶನದಲ್ಲಿ ಜಿಲ್ಲೆಯ ನಾನಾ ತಂಡದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದಾರೆ. ಒಂದು ವಿಶೇಷ ಪ್ರಯೋಗ ಮಾಡಿದ್ದಾರೆ. ನಿಜಕ್ಕೂ ಈ ಪ್ರಯೋಗ ಗೆದ್ದಿದೆ.
    -ಪ್ರಭಾಕರ ಕಲ್ಯಾಣಿ, ಕಾರ್ಯದರ್ಶಿ, ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ

    ನಮ್ಮ ಒಕ್ಕೂಟದ ವತಿಯಿಂದ ವಿದ್ದು ಉಚ್ಚಿಲ ಅವರ ನಿರ್ದೇಶನದಲ್ಲಿ ಈ ನಾಟಕ ಆಯೋಜಿಸಲಾಗಿತ್ತು. ಅನೇಕ ನಾಟಕ ತಂಡದ ಕಲಾವಿದರು ಜತೆಯಾಗಿ ಒಂದೇ ವೇದಿಕೆಯಲ್ಲಿ ನಟಿಸಿದ್ದನ್ನು ನೋಡುವುದೇ ಖುಷಿಯ ವಿಚಾರ.
    -ಲೀಲಾಧರ ಶೆಟ್ಟಿ
    ಅಧ್ಯಕ್ಷ, ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts