More

    ಕೊಪ್ಪಳ ರಸ್ತೆ ನಾಮ್ ಕೇ ವಾಸ್ತೆ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ನಂದಳಿಕೆ-ಕೊಪ್ಪಳ ರಸ್ತೆ ಮಾರ್ಗದಲ್ಲಿ ಅರೆಬರೆ ಕಾಮಗಾರಿ ನಡೆದಿದ್ದು, ಪೂರ್ಣಗೊಳ್ಳದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ನಂದಳಿಕೆ ಗ್ರಾಪಂ ವ್ಯಾಪ್ತಿಯಿಂದ ಗೋಳಿಕಟ್ಟೆ ಪಡುಬೆಟ್ಟು ವರೆಗೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದ್ದು, ಕೆಲವೊಂದು ಭಾಗದಲ್ಲಿ ಇನ್ನೂ ರಸ್ತೆಯ ಕಾಮಗಾರಿ ಬಾಕಿ ಉಳಿದಿದೆ. ಹೀಗಾಗಿ ಗುತ್ತಿಗೆದಾರರಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

    ಬೋರ್ಡ್ ಶಾಲೆಯಿಂದ ಆರಂಭಗೊಂಡ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತೇಪೆ ಹಾಕಿ ಸರಿಪಡಿಸಲಾಗಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

    ರಸ್ತೆ ಹೊಂಡಮಯ

    ಸಂಪೂರ್ಣ ಕಾಂಕ್ರೀಟ್ ರಸ್ತೆ ಮಾಡುವ ಕಾಮಗಾರಿ ಇದಾಗಿದ್ದು, ಪಡುಬೆಟ್ಟು ಭಾಗದಲ್ಲಿ ಸುಮಾರು 200 ಮೀಟರ್ ರಸ್ತೆ ಹಾಗೂ ಕೊಪ್ಪಳ ಭಾಗದಲ್ಲಿ ಸುಮಾರು 100 ಮೀಟರ್ ರಸ್ತೆ ಕಾಮಗಾರಿ ಇನ್ನೂ ಬಾಕಿ ಇದೆ. ಅಲ್ಲೀಗ ಮಳೆಯಿಂದಾಗಿ ಹೊಂಡಗಳು ಬಿದ್ದಿದ್ದು, ಕೆಸರು ನೀರು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಬಳಿಕ ಗುತ್ತಿಗೆದಾರರು ಜಲ್ಲಿಕಲ್ಲು ಸುರಿದಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಆ ಸ್ಥಳದಲ್ಲಿ ಮತ್ತೆ ದೊಡ್ಡ ಹೊಂಡ ನಿರ್ಮಾಣವಾಗಿದೆ.

    ಅವೈಜ್ಞಾನಿಕ ಕಾಮಗಾರಿ

    ಹದಗೆಟ್ಟ ಈ ರಸ್ತೆಯಿಂದಾಗಿ ಬಸ್ ಹಾಗೂ ರಿಕ್ಷಾ ಚಾಲಕರೂ ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಬರುವ ಬಹುತೇಕ ವಾಹನಗಳು ಪಂಕ್ಚರ್ ಆಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಮಗಾರಿ ಮುಗಿದ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿದ್ದರಿಂದ ಮಳೆ ನೀರಿನಿಂದ ಅವು ಕೆಸರುಮಯವಾಗಿದೆ. ಇಲ್ಲಿ ರಸ್ತೆಯಿಂದ ಕೆಳಗೆ ವಾಹನ ಇಳಿಸಲೂ ಆಗುತ್ತಿಲ್ಲ. ಅಲ್ಲದೆ ಗೋಳಿಕಟ್ಟೆ ಇಳಿಜಾರು ರಸ್ತೆಯ ಪಕ್ಕದಲ್ಲೇ ಆಳವಾದ ಗುಂಡಿಯಿದ್ದರೂ ಮಣ್ಣು ಹಾಕಿ ಸಮತಟ್ಟು ಮಾಡಲು ಗುತ್ತಿಗೆದಾರರಿಗೆ ಪುರುಸೊತ್ತು ಇಲ್ಲ. ಚಾಲಕರು ಸ್ವಲ್ಪ ಎಡವಿದರೂ ವಾಹನ 30 ಅಡಿ ಆಳದ ಪ್ರಪಾತಕ್ಕೆ ಕುಸಿಯುವುದರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಂಚಾರಕ್ಕೆ ಸಮಸ್ಯೆ

    ಅವೈಜ್ಞಾನಿಕ ಕಾಮಗಾರಿಯಿಂದ ಕೊಪ್ಪಳ ಭಾಗದಲ್ಲಿ ಕಾಂಪೌಂಡ್ ಕುಸಿದಿದೆ. ಗುತ್ತಿಗೆದಾರರ ನಿರ್ಲಕ್ಷೃದಿಂದ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಇದೆ. ಪಡುಬೆಟ್ಟು, ನಂದಳಿಕೆ ಭಾಗದಲ್ಲಿ ಕ್ರಶರ್ ಹಾಗೂ ಕಲ್ಲು ಕೋರೆಗಳಿದ್ದು ನಿತ್ಯ ನೂರಾರು ಘನ ವಾಹನ ಸಂಚರಿಸುತ್ತದೆ. ಆ ವಾಹನಗಳ ಆರ್ಭಟಕ್ಕೆ ಕೊಪ್ಪಳ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯದ ಜಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದಾಗಿ ಮಕ್ಕಳನ್ನು ಸಾಗಿಸುವ ಶಾಲಾ ವಾಹನ, ರಿಕ್ಷಾ, ಕಾರುಗಳ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಸಂಕಷ್ಟ ಪಡುವಂತಾಗಿದೆ.

    ಇಲ್ಲಿನ ರಸ್ತೆ ಕಾಮಗಾರಿ ಸರಿಯಾಗಿ ಆಗಿಲ್ಲ. ಕಾಮಗಾರಿ ಇನ್ನೂ ಬಾಕಿ ಇದ್ದು, ವಾಹನ ಸಂಚಾರಕ್ಕೆ ಕಷ್ಟವಾಗಿದೆ. ನಿತ್ಯವೂ ಮಕ್ಕಳನ್ನು ಶಾಲೆಗೆ ಕಳುಹಿಸಲು ತೊಂದರೆ ಆಗುತ್ತಿದೆ. ಗ್ರಾಮಸ್ಥರೂ ಈ ರಸ್ತೆಯಿಂದ ಸಮಸ್ಯೆ ಅನುಭವಿಸುವಂತಾಗಿದೆ.
    -ಸುಜಾತಾ ಗ್ರಾಮಸ್ಥೆ

    ಈಗಾಗಲೇ ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜವಾಗಿಲ್ಲ. ರಸ್ತೆಯಲ್ಲಿ ಹೊಂಡ ಇರುವುದರಿಂದ ಯಾವುದೇ ವಾಹನಗಳ ಚಾಲಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಪೂರ್ಣಗೊಳಿಸದೆ ಹೀಗೆ ಮುಂದುವರಿದಲ್ಲಿ ಪ್ರತಿಭಟಿಸಬೇಕಾಗುತ್ತದೆ.
    -ದೀಕ್ಷಿತ್ ಗ್ರಾಮಸ್ಥ

    ಗೋಳಿಕಟ್ಟೆಯ ಇಳಿಜಾರಿನಲ್ಲಿ ಸ್ವಲ್ಪ ಎಡವಿದರೂ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಓಡಾಟಕ್ಕೆ ಕಷ್ಟವಾಗಿದೆ. ಈ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ.
    ಪ್ರಸಾದ ಶೆಟ್ಟಿ
    ಸದಸ್ಯ, ನಂದಳಿಕೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts