More

    ಖಾಲಿ ನಿವೇಶನಗಳಲ್ಲಿ ಕಸ ಸಂಗ್ರಹ

    ಎಂ.ಪವನ್ ಕುಮಾರ್ ಕೊಳ್ಳೇಗಾಲ
    ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಪಟ್ಟಣ ಅನೈರ್ಮಲ್ಯದ ತಾಣವಾಗಿ ಮಾರ್ಪಡಾಗುತ್ತಿದೆ.
    ಕೊಳ್ಳೇಗಾಲ ಪಟ್ಟಣ 31 ವಾರ್ಡ್‌ಗಳನ್ನು ಹೊಂದಿದ್ದು, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಇದೇ ಲಕ್ಷಣ ಕಂಡುಬರುತ್ತಿದೆ. ಖಾಲಿ ನಿವೇಶನಗಳಲ್ಲಿ ಕಸ, ಪ್ಲಾಸ್ಟಿಕ್ ವಸ್ತುಗಳು, ಖಾಲಿ ಬಾಟಲ್, ಇನ್ನಿತರ ತ್ಯಾಜ್ಯ ಸಂಗ್ರಹವಾಗುತ್ತಿದೆ. ಆದರೆ, ನಗರಸಭೆ ಪಟ್ಟಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತಿಲ್ಲ.

    ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ, ರಾಮಸ್ವಾಮಿ ಲೇಔಟ್, ಶ್ರೀ ಚಂದ್ರಶೇಖರ್ ರಸ್ತೆ, ಆದರ್ಶನಗರ, ಶ್ರೀ ಮಹದೇಶ್ವರ ಕಾಲೇಜು ರಸ್ತೆ, ಬಸ್ತೀಪುರ ಹೊಸ ಬಡಾವಣೆ ಹೀಗೆ ಹಲವು ಬಡಾವಣೆಗಳಲ್ಲಿ ಖಾಲಿ ನಿವೇಶನಗಳಲ್ಲಿ ಹೆಚ್ಚಾಗಿ ತ್ಯಾಜ್ಯ ಕಂಡು ಬರುತ್ತಿವೆ. ಅಲ್ಲದೆ ಗಿಡಗಂಟಿಗಳು ಬೆಳೆದು ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಬರುವಂತಿದೆ.

    ನಿತ್ಯ ನಗರಸಭೆಯ ಕಸ ಸಂಗ್ರಹವಾಹನ ಬಂದರೂ ಕೆಲವರು ಖಾಲಿ ಜಾಗದಲ್ಲಿ ಕಸ ಸುರಿಯುತ್ತಿರುವುದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಕಸ ವಿಲೇವಾರಿ ವಾಹನಕ್ಕೆ ಕಸ ಹಾಕದೆ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿರುವುದು, ಜತೆಗೆ ಕಸ ಸುರಿಯುತ್ತಿರುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಯಾಗುತ್ತಿದೆ. ಈ ಕುರಿತು ಹಲವು ಬಾರಿ ದೂರುಗಳನ್ನು ಸಾರ್ವಜನಿಕರು ನೀಡಿದರೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲ.

    ಪಾಲನೆಯಾಗದ ನಿರ್ಣಯ
    ಇತ್ತೀಚೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ, ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ಪಟ್ಟಣದ ಸ್ವಚ್ಛತೆ ಆದ್ಯತೆ ನೀಡುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಇದುವರೆಗೆ ಪಾಲನೆಯಾಗಿಲ್ಲ.

    ಶ್ರೀ ಶಿವಕುಮಾರ ಸ್ವಾಮೀಜಿ ನಾಮಫಲಕ ಸುತ್ತಲು ಅನೈರ್ಮಲ್ಯ
    ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ರಸ್ತೆಯಿಂದ ಶ್ರೀ ಶಿರಡಿ ಸಾಯಿ ಮಂದಿರ ಕಡೆಗೆ ತೆರಳುವ ರಸ್ತೆಯ ಎಡ ಭಾಗದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ ಹೆಸರಿನ ನಾಮಫಲಕದ ಸುತ್ತ ಕಸ ಸುರಿಯಲಾಗುತ್ತಿದೆ. ನಾಮಫಲಕ ಎದುರಿನ ನೀರಿನ ಓವರ್‌ಹೆಡ್ ಟ್ಯಾಂಕ್ ಕೆಳಗೆ ಗಿಡಗಂಟಿಗಳು ಬೆಳೆದಿವೆ. ಪಕ್ಕದ ರಸ್ತೆಯಲ್ಲೇ ಕಸ ಸುರಿಯಲಾಗುತ್ತಿದೆ. ಇದು ಶ್ರೀಗಳಿಗೆ ಅಗೌರವ ತೋರಿದಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts