More

    ತೆರಿಗೆ ಬಾಕಿ ಕಟ್ಟದಿದ್ದರೆ ಆಸ್ತಿ ಜಪ್ತಿ

    ಗಂಗಾವತಿ: ತೆರಿಗೆ ಬಾಕಿ ಪಾವತಿಗೆ ಡಂಗುರ ಸಾರಿ ಗಡುವು ನೀಡಲಾಗುವುದು. ಆದಾಗ್ಯೂ ನಿರ್ಲಕ್ಷಿಸಿದರೆ ನಗರಸಭೆ ಕಾಯ್ದೆಯನ್ವಯ ಬಾಕಿದಾರರ ಆಸ್ತಿ ಜಪ್ತಿಗೆ ಕ್ರಮವಹಿಸಲಾಗುವುದು ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.

    ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ 27 ಸಾವಿರ ಕಟ್ಟಡಗಳಿದ್ದು, ಶೇ.64 ಮಾತ್ರ ತೆರಿಗೆ ವಸೂಲಿಯಾಗುತ್ತಿದೆ. ರೈಸ್ ಮಿಲ್, ಕಲ್ಯಾಣ ಮಂಟಪ, ಚಿತ್ರಮಂದಿರ, ವಾಣಿಜ್ಯ ಮಳಿಗೆಗಳಿಂದಲೂ ತೆರಿಗೆ ಬರಬೇಕಿದೆ. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡವರ ಪಟ್ಟಿ ಸಿದ್ಧಪಡಿಸುತ್ತಿದ್ದು, ಶೀಘ್ರ ಬಿಡುಗಡೆ ಮಾಡಲಾಗುವುದು. ಬಾಕಿ ಪಾವತಿಗೆ ಕಾಲಾವಕಾಶ ನೀಡಲಾಗುವುದು. ನಿರ್ಲಕ್ಷಿಸಿದರೆ ಆಸ್ತಿ ಜಪ್ತಿ ಮಾಡಲಾಗುವುದು. ಅನಧಿಕೃತ ಲೇಔಟ್‌ಗಳಿಂದಲೂ ತೆರಿಗೆ ಬರಬೇಕಾಗಿದ್ದು, ಅಭಿವೃದ್ಧಿಯಿಲ್ಲದೆ ಖಾತೆ ನೋಂದಣಿಯಾದ ಲೇಔಟ್‌ಗಳಲ್ಲಿನ ಕಟ್ಟಡ ಪರವಾನಗಿ ರದ್ದುಪಡಿಸುವ ಅಧಿಕಾರ ನಗರಸಭೆಗಿದೆ ಎಂದು ತಿಳಿಸಿದರು.

    ಆಸ್ತಿ ತೆರಿಗೆಯಿಂದ 3.44 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, ನೀರು ಮತ್ತು ಒಳಚರಂಡಿಯಿಂದ 53.73 ಲಕ್ಷ ರೂ., ಎಸ್‌ಎ್ಸಿ, 15ನೇ ಹಣಕಾಸು ಯೋಜನೆಯಡಿ 5 ಕೋಟಿ ರೂ. ಬರುವ ನಿರೀಕ್ಷೆಯಿದೆ. ಅನಧಿಕೃತ ಲೇಔಟ್, ತೆರಿಗೆ ವಂಚಿಸುವ ಬಹುಮಡಿ ಕಟ್ಟಡಗಳ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದರೆ ಸಂಬಂಧಪಟ್ಟ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಎಪಿಎಂಸಿ, ಜೆಸ್ಕಾಂ, ಹೌಸಿಂಗ್ ಬೋರ್ಡ್, ಕಂದಾಯ, ಲೋಕೋಪಯೋಗಿ ಮತ್ತು ಉಗ್ರಾಣ ನಿಗಮದ ವಸತಿ ಗೃಹಗಳಿಂದಲೂ ತೆರಿಗೆ ಬರಬೇಕಿದ್ದು, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ ಎಂದರು.

    ಪರಶುರಾಮ್ ಮಡ್ಡೇರ್ ಮತ್ತು ಎಂ.ಡಿ.ಉಸ್ಮಾನ್ ಮಾತನಾಡಿ, ತೆರಿಗೆ ವಸೂಲಿ ಬಗ್ಗೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಭಿವೃದ್ಧಿಯಿಲ್ಲದ ಲೇಔಟ್‌ಗಳಲ್ಲೂ ತೆರಿಗೆ ವಂಚನೆ ಹೆಚ್ಚುತ್ತಿದ್ದು, ಬಹುಮಹಡಿ ಕಟ್ಟಡಗಳಿಂದಲೂ ಆದಾಯ ಬರುತ್ತಿಲ್ಲ. ರೈಸ್ ಮಿಲ್‌ಗಳು 2017ರಿಂದ ತೆರಿಗೆ ಪಾವತಿಸದಿರುವುದು ಕಂಡು ಬಂದಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
    ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಪರಿಸರ ಇಂಜಿನಿಯರ್ ಹೇಮಂತ ನಾಯ್ಕ, ಕಂದಾಯ ಅಧಿಕಾರಿ ನಿಜಾಮುದ್ದೀನ್ ಖತೀಬ್, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ವ್ಯವಸ್ಥಾಪಕ ಷಣ್ಮುಖಪ್ಪ, ಲೆಕ್ಕಾಧಿಕಾರಿ ಮಂಜುನಾಥ ಇತರರಿದ್ದರು.

    ವಿಜಯವಾಣಿ ವಾರ್ಡ್‌ವಾಚ್ ಪ್ರತಿಧ್ವನಿ: ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿಜಯವಾಣಿ ಪ್ರಕಟಿಸುತ್ತಿರುವ ‘ವಾರ್ಡ್‌ವಾಚ್’ ಸರಣಿ ವರದಿ ಪ್ರತಿಧ್ವನಿಸಿತು. ಈ ಬಗ್ಗೆ ಪೌರಾಯುಕ್ತ ಮತ್ತು ನಗರಸಭೆ ಸದಸ್ಯರು ಪ್ರಸ್ತಾಪಿಸಿದರು. ಸಭೆಗೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಮತ್ತು ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್ ಸೇರಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುತೇಕ ಸದಸ್ಯರು ಗೈರಾಗಿದ್ದು, ಮಾಜಿ ಅಧ್ಯಕ್ಷರು ಮತ್ತು ಪ್ರಮುಖರು ಬಂದಿರಲಿಲ್ಲ. ಆದಾಯ ನಿರೀಕ್ಷೆ ಚರ್ಚೆಗಿಂತ ಸಾಮಾನ್ಯ ಸಭೆ ರೀತಿಯಲ್ಲಿ ಸದಸ್ಯರು ಮಾತನಾಡಿದ್ದು ಸಭೆ ಮಹತ್ವ ಕಳೆದುಕೊಂಡಿತು. ಒಂದೇ ಗಂಟೆಯಲ್ಲಿ ಸಭೆ ಮೊಟಕುಗೊಳಿಸಿದ್ದು, ನಿರೀಕ್ಷಿತ ಸಲಹೆಗಳು ಬರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts