More

    ಮಹಿಳಾ ಸಬಲೀಕರಣಕ್ಕಾಗಿ ಜವಳಿ ಪಾರ್ಕ್ ಸ್ಥಾಪನೆ

    ಗಂಗಾವತಿ: ಬಡ ಮತ್ತು ಶೋಷಿತ ಸಮುದಾಯಕ್ಕೆ ಸುಸಜ್ಜಿತ ಸೂರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಮಹಿಳಾ ಸಬಲೀಕರಣಕ್ಕಾಗಿ ಜವಳಿ ಪಾರ್ಕ್ ಆರಂಭಿಸಲಾಗುವುದು ಎಂದು ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಗಾಲಿಜನಾರ್ದನರೆಡ್ಡಿ ಹೇಳಿದರು.

    ನಗರದ ವಿರೂಪಾಪುರ ತಾಂಡಾ ಬಳಿ ಕೆಆರ್‌ಪಿಪಿಯಿಂದ ಭಾನುವಾರ ಆಯೋಜಿಸಿದ್ದ ಬಹಿರಂಗ ಸಭೆ ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರ ಕೆಆರ್‌ಪಿಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಂಗಾವತಿ ರಾಜಕೀಯದ ಕರ್ಮಭೂಮಿಯಾಗಿದ್ದು, ದೂರ ಸರಿಯುವ ಪ್ರಶ್ನೆಯಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ನಗರದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಜತೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವ ಗುರಿಯಿದೆ. ಐತಿಹಾಸಿಕ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಐದು ವರ್ಷಗಳಲ್ಲಿ ಐದುಸಾವಿರ ಕೋಟಿ ರೂ. ಮೀಸಲಿಡಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಸುಸಜ್ಜಿತ ವಾಣಿಜ್ಯ ಮಳಿಗೆ ನಿರ್ಮಾಣ ಜತೆಗೆ ಆರ್ಥಿಕ ಸೌಲಭ್ಯ ಕಲ್ಪಿಸಲಾಗುವುದು ಎಂದರು.

    ಗಂಗಾವತಿಗೆ ರಾಜಕೀಯ ಮಾಡಲು ಬಂದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಕಟ್ಟಿದ್ದೇನೆ. ಚುನಾವಣೆಯಲ್ಲಿ ಗೆದ್ದ ನಂತರ ಬಳ್ಳಾರಿಗೆ ಹೋಗುತ್ತಾರೆ ಎನ್ನುವವರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತೇನೆ. ಬೆಳಗ್ಗೆ 5 ರಿಂದ ರಾತ್ರಿ 10ರವರೆಗೆ ಜನರಿಗಾಗಿ ದುಡಿಯುತ್ತೇನೆ. ಹಗಲು ನಿದ್ದೆ ಮಾಡಿ, ರಾತ್ರಿ ಕೆಲಸ ಮಾಡುವ ಜಾಯಮಾನ ನನ್ನದಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು. ಇದೇ ಸಂದರ್ಭದಲ್ಲಿ ತಾಂಡಾದ ಅನಾಥ ಮಕ್ಕಳನ್ನು ದತ್ತುಪಡೆದರು. ಬಳ್ಳಾರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಅರುಣಾಲಕ್ಷ್ಮೀ, ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ವೇಷಭೂಷಣದೊಂದಿಗೆ ಭಾಗವಹಿಸಿ ಗಮನಸೆಳೆದರು. ಇದಕ್ಕೂ ಮುನ್ನ ಭಾರಿ ಗಾತ್ರದ ಹೂವಿನಹಾರದೊಂದಿಗೆ ಕಾರ್ಯಕರ್ತರು ಸ್ವಾಗತಿಸಿದರು.

    ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ವಿವಿಧ ಘಟಕಗಳ ಪದಾಧಿಕಾರಿಗಳಾದ ಅಮರಜ್ಯೋತಿ ನರಸಪ್ಪ, ರಾಮಾನಾಯ್ಕ, ವೀರೇಶ ಬಲ್ಕುಂದಿ, ಈ. ರಾಮಕೃಷ್ಣ, ರಾಮಣ್ಣನಾಯಕ, ಪಕ್ಕೀರಪ್ಪ ಇತರರಿದ್ದರು. ನಂತರ ಕಿಲ್ಲಾಏರಿಯಾ, ಬಾಬುಜಗಜೀನವರಾಂ ವೃತ್ತ ಮತ್ತು ಬಸಾಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿದರು.

    ನೂರು ಕುರಿ ಕೊಡುಗೆಗೆ ತಡೆ: ಕೆಆರ್‌ಪಿಪಿ ಗೆಲುವಿಗಾಗಿ ಸ್ಥಳೀಯ ಮುಖಂಡ ಯಮನೂರಪ್ಪ ಪುಂಡಗೌಡ ಬೆಂಬಲಿಗರು ನೀಡಲು ತಂದಿದ್ದ 100 ಕುರಿಗಳನ್ನು ಚುನಾವಣೆ ಅಧಿಕಾರಿಗಳ ತಂಡ ತಡೆಹಿಡಿಯಿತು. ಎರಡು ವಾಹನಗಳಲ್ಲಿ ಬಂದಿದ್ದ ಕುರಿಗಳನ್ನು ನಗರದ ಗ್ರಾಮ ದೇವತೆ ಶ್ರೀದುರ್ಗಾದೇವಿ ದೇವಾಲಯದ ಪೂಜೆ ನೆರವೇರಿಸಿದ ನಂತರ ಮೆರವಣಿಗೆ ಮೂಲಕ ಕೆಆರ್‌ಪಿಪಿ ಕಚೇರಿಗೆ ತೆರಳಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿಗೆ ನೀಡುವ ಉದ್ದೇಶವಿತ್ತು. ಮಾಹಿತಿ ಅರಿತ ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ಅಧಿಕಾರಿಗಳ ತಂಡ, ವಾಹನಗಳನ್ನು ದೇವಾಲಯ ಮುಂದೆ ತಡೆಹಿಡಿದಿದ್ದು, ಯಾವುದೇ ಆಮಿಷಗಳನ್ನು ಒಡ್ಡುವಂತಿಲ್ಲ ಎಂದು ನೀತಿ ಸಂಹಿತೆಯ ಬಗ್ಗೆ ಮಾಹಿತಿ ನೀಡಿದ್ದರಿಂದ ಕುರಿಗಳನ್ನು ನೇರ ಬಳ್ಳಾರಿಗೆ ಕಳುಹಿಸಲಾಯಿತು. ತಿಂಗಳ ಹಿಂದೆ 101 ಕುರಿ ನೀಡುವ ಬಗ್ಗೆ ವಾಗ್ದಾನ ಮಾಡಿದ್ದು, ಅಂದು ಒಂದು ಕುರಿ ಸಾಂಕೇತಿಕವಾಗಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts