More

    ಆರತಿ ಬೆಳಗಿ, ಪುಷ್ಪ ವಿತರಿಸಿ ಸ್ವಾಗತ

    ಗಂಗಾವತಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಖಂಡ ತಾಲೂಕಿನ 24 ಕೇಂದ್ರದಲ್ಲಿ ಸೂಕ್ತ ಬಂದೋಬಸ್ತ್‌ನಲ್ಲಿ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನದ ಕನ್ನಡ ವಿಷಯ ಪರೀಕ್ಷೆಗೆ 116 ವಿದ್ಯಾರ್ಥಿಗಳು ಗೈರಾಗಿದ್ದರು.

    ಗಂಗಾವತಿ 15, ಕನಕಗಿರಿ 4, ಕಾರಟಗಿ ತಾಲೂಕಿನ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಾಯಿತ 7035 ವಿದ್ಯಾರ್ಥಿಗಳ ಪೈಕಿ 6919 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಪ್ರತಿ ಕೇಂದ್ರಗಳಲ್ಲಿ ಸ್ಯಾನಿಟರೈಸ್, ಆರೋಗ್ಯ ತಪಾಸಣೆ ವ್ಯವಸ್ಥೆಗೆ ಆಶಾಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಅಂಗವಿಕಲ 15 ವಿದ್ಯಾರ್ಥಿಗಳಿಗೆ ಬಾಲಕರ ಪ.ಪೂ.ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀ. ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರಶ್ನೆ ಪತ್ರಿಕೆ ವಿತರಣೆಗಾಗಿ 6 ರೂಟ್‌ಗಳ ವ್ಯವಸ್ಥೆಯಿದ್ದು, ಸ್ಕ್ವಾಡ್, ಮೇಲ್ವಿಚಾರಕರು ಸೇರಿ 300ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

    ಅದ್ದೂರಿ ಸ್ವಾಗತ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನಗರದ ಲಿಟಲ್ ಹಾರ್ಟ್ಸ್ ಶಾಲೆಯ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿ ಮತ್ತು ಇನ್ನರ್ ವ್ಹೀಲ್ ಕ್ಲಬ್‌ನಿಂದ ಆರತಿ ಎತ್ತಿ, ಪುಷ್ಪ ವಿತರಿಸಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಉಲ್ಲಾಸದಿಂದ ಭಯಮುಕ್ತವಾಗಿ ಬಂದು ಪರೀಕ್ಷೆ ಬರೆಯಲು ಧೈರ್ಯ ತುಂಬುವುದಕ್ಕಾಗಿ ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಕ್ಲಬ್ ಅಧ್ಯಕ್ಷೆ ಪ್ರಿಯಾಕುಮಾರಿ ತಿಳಿಸಿದರು. ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಸದಸ್ಯೆ ಹಿಮಾ ರೆಡ್ಡಿ, ಪರೀಕ್ಷಾ ಕೇಂದ್ರದ ಅಧೀಕ್ಷಕ ಶಂಕರಪ್ಪ , ಸಹಾಯಕರಾದ ರಮೇಶ ಕುಲಕರ್ಣಿ, ಪ್ರದೀಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts