More

    ಗೊಂದಲ, ವಿವಾದಗಳಿಗೆ ಅವಕಾಶ ನೀಡದಿರಿ: ಹಿಂದು ಪರ ಸಂಘಟನೆಗಳಿಗೆ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಸಲಹೆ

    ಗಂಗಾವತಿ: ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅಂಜನಾದ್ರಿ ಬೆಟ್ಟ ದೇವಾಲಯದ ಸಿಇಒ ಹಾಗೂ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

    ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧ ಹಿನ್ನೆಲೆಯಲ್ಲಿ ನಗರದ ತಾಲೂಕಾಡಳಿತದ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಹಿಂದು ಪರ ಸಂಘಟನೆಗಳ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದರು. ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧ ಹೇರುವ ಬಗ್ಗೆ ಕಾಯ್ದೆಯಲ್ಲಿಲ್ಲ. ಸದ್ಯ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ವ್ಯವಸ್ಥೆ ಬಗ್ಗೆ ಗಮನಹರಿಸಿದ್ದು, ಯಶಸ್ಸಿಗೆ ಶ್ರಮಿಸಲಾಗುತ್ತಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ವಿವಾದ, ಗೊಂದಲಗಳು ಬೇಡ. ಕಾರ್ಯಕ್ರಮದ ನಂತರ ಸಭೆ ಆಯೋಜಿಸಿ ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದರು.

    ಸ್ನಾನಘಟ್ಟ ಮತ್ತು ಶೌಚಗೃಹ ವ್ಯವಸ್ಥೆ ಮಾಡಿಲ್ಲ. ವಸ ಸಂಹಿತೆಗೆ ಆದ್ಯತೆ ನೀಡಬೇಕಿದ್ದು, ಅರೆಬರೆ ಬಟ್ಟೆ ತೊಟ್ಟು ಬರುವವರಿಗೆ ಅವಕಾಶ ನೀಡದಂತೆ ಗಮನಹರಿಸಬೇಕು. ಗಂಗಾವತಿಯಲ್ಲಿ ಆಯೋಜಿಸಿರುವ ಶೋಭಾಯಾತ್ರೆಗೆ ನಗರವನ್ನು ಅಲಂಕರಿಸುವಂತೆ ಹಿಂದು ಪರ ಸಂಘಟನೆ ಪದಾಧಿಕಾರಿಗಳಾದ ಅಯ್ಯನಗೌಡ ಹೇರೂರು, ಶ್ರೀಕಾಂತ ಹೊಸ್ಕೇರಿ, ನಾಗರಾಜ್ ಚಳಗೇರಿ, ಕೆ.ವೆಂಕಟೇಶ, ಯಮನೂರಚೌಡ್ಕಿ ಇತರರು ಒತ್ತಾಯಿಸಿದರು. ತಹಸೀಲ್ದಾರ್ ಯು.ನಾಗರಾಜ್, ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ, ಪಿಐಗಳಾದ ಟಿ.ವೆಂಕಟಸ್ವಾಮಿ, ಎನ್.ಮಂಜುನಾಥ ಇತರರಿದ್ದರು.

    ಬಂದೋಬಸ್ತ್ ಪರಿಶೀಲಿಸಿದ ಎಸ್ಪಿ: ಅಂಜನಾದ್ರಿ ಬೆಟ್ಟಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. ಪಾರ್ಕಿಂಗ್ ಮತ್ತು ಸಹಾಯವಾಣಿ ಕೇಂದ್ರದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ರಸ್ತೆ ಬದಿಯ ಗೂಡಂಗಡಿಗಳನ್ನು ಖಾಸಗಿ ಒಡೆತನದ ಭೂಮಿಗೆ ಸ್ಥಳಾಂತರಿಸಿದ್ದು, ಜನಜಂಗುಳಿಗೆ ಅವಕಾಶ ನೀಡದಂತೆ ವ್ಯಾಪಾರಿಗಳಿಗೆ ಸಲಹೆ ನೀಡಿದರು. ಚೆಕ್‌ಪೋಸ್ಟ್ ಮತ್ತು ಬ್ಯಾರಿಕೇಡ್‌ಗಳ ವ್ಯವಸ್ಥೆ ಕೈಗೊಳ್ಳುವಂತೆ ಅಧೀನ ಸಿಬ್ಬಂದಿಗೆ ತಿಳಿಸಿದರು. ಡಿವೈಎಸ್ಪಿ ಆರ್. ಎಸ್.ಉಜ್ಜನಕೊಪ್ಪ ಇದ್ದರು.

    ಕ್ಯಾಮರಾ ಕಣ್ಗಾವಲಿನಲ್ಲಿ ಶೋಭಾಯಾತ್ರೆ : ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಮತ್ತು ಶೋಭಾಯಾತ್ರೆ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ 100 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾಜ್ ಎಂಬುವವರಿಗೆ ಗುತ್ತಿಗೆ ನೀಡಿದ್ದು, ಅಂಜನಾದ್ರಿ ಬೆಟ್ಟದ ಬಳಿಯೂ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುತ್ತಿದ್ದು, ದಿನವಿಡೀ ಗಸ್ತು ವ್ಯವಸ್ಥೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts