More

    ಮಳೆ-ಗಾಳಿ ಹೊಡೆತಕ್ಕೆ ರೈತ ತತ್ತರ, ಬೆಳೆಯಿದ್ದರೂ ಇಳುವರಿ ಕುಂಠಿತ

    ಗಂಗಾವತಿ: ಭತ್ತದ ಎರಡನೇ ಬೆಳೆ ಕೈಗೂಡುವ ಮುನ್ಸೂಚನೆ ಮುನ್ನವೇ ಮಳೆ ಮತ್ತು ಗಾಳಿಯಿಂದ ಮೊದಲ ಬೆಳೆಯ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರಿದೆ.

    ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 36ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ತುಂಗಭದ್ರಾ ಎಡದಂಡೆ ಕಾಲುವೆ, ಬೋರ್‌ವೆಲ್ ಆಶ್ರಿತ ಪ್ರದೇಶದಲ್ಲಿ ಕಾವೇರಿ ಸೋನಾ, ಆರ್‌ಎನ್‌ಆರ್, 1020 ಮತ್ತು ಶಿರ‌್ಲಾ ತಳಿಗಳಿಗೆ ಆದ್ಯತೆ ನೀಡಿದ್ದು, ಸೋನಾ ಮಸೂರಿಗೆ ಅಗ್ರಸ್ಥಾನ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಇಳುವರಿ ಲಕ್ಷಣಗಳಿದ್ದು, ಆರಂಭಿಕ ಹಂತದಲ್ಲಿ ಸಸಿ ಮಡಿಗಳನ್ನು ಹಚ್ಚಿದ್ದ ರೈತರು ಮೊದಲ ಸಲನ್ನು ಅಕ್ಟೋಬರ್ ಕೊನೇ ವಾರದಲ್ಲಿ ಪಡೆದುಕೊಂಡಿದ್ದಾರೆ.

    ಎಡದಂಡೆ ಕಾಲುವೆ ವ್ಯಾಪ್ತಿಯ ಸಿದ್ದಿಕೇರಿ, ಬಸಾಪಟ್ಟಣ, ದಾಸನಾಳ, ಚಿಕ್ಕಜಂತಕಲ್, ಕೇಸರಹಟ್ಟಿ, ಹೇರೂರು ಭಾಗದಲ್ಲಿ ಶೇ.40 ಕೊಯ್ಲು ಮುಗಿದಿದೆ. ನವೆಂಬರ್ ಮಾಸಂತ್ಯದಲ್ಲಿ ಕೈಗೆ ಸೇರಬೇಕಾದ ಭತ್ತದ ಇಳುವರಿಗೆ ಮಳೆ ಮತ್ತು ಗಾಳಿ ಅಡ್ಡಿಯಾಗಿದ್ದು, ಭಾಗಶಃ ನೆಲಕಚ್ಚಿದೆ.

    ಖರೀದಿದಾರರಿಗೆ ತೇವಾಂಶ ನೆಪ

    ಸೋನಾ ಮಸೂರಿಗೆ ಆರಂಭಿಕ ಕ್ವಿಂಟಾಲ್‌ಗೆ 2200 ರೂ.ದರ ನಿಗದಿಯಾಗಿದ್ದು, ಎರಡನೇ ಬೆಳೆ ಇಲ್ಲದಿದ್ದರಿಂದ ರೈಸ್‌ಮಿಲ್ ಮಾಲೀಕರು ಮುಗಿಬಿದ್ದು ಖರೀದಿಸಿದ್ದಾರೆ. ತಿಂಗಳಿಂದ ಒಂದೇ ದರವಿದ್ದರೂ, ಬೆಳೆ ನೆಲಕ್ಕೊರಗುತ್ತಿದ್ದಂತೆ ಖರೀದಿದಾರರು ಭತ್ತ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಶೇ.14ಕ್ಕಿಂತ ಮೊಯಿಶ್ಚರ್ (ತೇವಾಂಶ) ಕಡಿಮೆಯಿರದ ಭತ್ತ ತರಲು ಖರೀದಿದಾರರು ರೈತರಿಗೆ ಸೂಚಿಸುತ್ತಿರುವುದು ನುಂಗಲಾರದ ತುಪ್ಪವಾಗಿದೆ. ಒಣಗಲು ಹಾಕಿದ್ದ ಭತ್ತ ಮಳೆಯಿಂದ ಒದ್ದೆಯಾಗಿದ್ದು, ಕಳೆದ ಮೂರು ದಿನಗಳಿಂದ ನಿರೀಕ್ಷೆಯಂತೆ ಬಿಸಿಲು ಕಾಣುತ್ತಿಲ್ಲ. ಇದೇ ನೆಪದಲ್ಲಿ 1800 ರೂ.ಗಳಿಂದ 2000ರೂ.ವರೆಗೆ ದಲ್ಲಾಳಿ ಮೂಲಕ ಖರೀದಿದಾರರು ಬೆಲೆ ಇಳಿಕೆ ಮಾಡುತ್ತಿದ್ದಾರೆ. ತ್ರಿವಳಿ ತಾಲೂಕಿನಲ್ಲಿ 1200 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿರುವ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸರ್ವೆಯಿಂದ ಗೊತ್ತಾಗಿದೆ.

    ಪ್ರತಿಬಾರಿಯೂ ರೈತರಿಗೆ ದೋಖಾ

    ಎಡದಂಡೆ ಕಾಲುವೆ ನೀರು ನಂಬಿರುವ ರೈತರಿಗೆ ಪ್ರತಿಬಾರಿಯೂ ಅನ್ಯಾಯವಾಗುತ್ತಿದ್ದು, ಇಳುವರಿ ಬಂದಾಗ ಬೆಲೆಯಿರಲ್ಲ, ಬೆಲೆಯಿದ್ದಾಗ ಇಳುವರಿ ಸಿಗಲ್ಲ. ಕಳೆದ ವರ್ಷ 1800 ರೂ.ಬೆಲೆಯಿದ್ದು, ಈ ಬಾರಿ 2200 ರೂ. ಬೆಲೆ ಇದ್ದರಿಂದ ರೈತರು ಖುಷ್ ಆಗಿದ್ದರು. ಆದರೆ ಕೊಯ್ಲು ಹಂತದಲ್ಲಿ ಹವಾಮಾನ ವೈಪರಿತ್ಯ ಚಿಂತಿಗೀಡು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯ ಬರಿದಾಗಿದ್ದು, ತುಂಬುವ ಸಾಧ್ಯತೆಗಳಿಲ್ಲ. ಹೀಗಾಗಿ ಎರಡನೇ ಬೆಳೆಯಂತೂ ಸಿಗಲ್ಲ, ಸಿಕ್ಕ ಬೆಳೆ ಉಳಿಸಿಕೊಳ್ಳಲು ಸಣ್ಣ ರೈತರಿಗೆ ಅವಕಾಶವಿಲ್ಲ. ಖರೀದಿದಾರರು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಬಂದಿದೆ. ಪ್ರತಿ ಬಾರಿಯೂ ಒಂದಲ್ಲ, ಒಂದು ಕಾರಣದಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದು, ಎಕರೆಗೆ ಖರ್ಚು ಮಾಡಿದ್ದಷ್ಟು ವಾಪಾಸ್ ಬರುತ್ತೇ ಎನ್ನುವುದಕ್ಕೂ ಗ್ಯಾರಂಟಿಯಿಲ್ಲ. ಒಟ್ಟಾರೆ ಹವಾಮಾನ ವೈಪರಿತ್ಯ ದೀಪಾವಳಿ ಸಂದರ್ಭದಲ್ಲಿ ರೈತರಿಗೆ ಖುಷಿ ಬದಲು, ಕಣ್ಣೀರು ನೀಡಿದೆ.

    ದೊರೆಯದ ನಿರೀಕ್ಷಿತ ಪರಿಹಾರ

    ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ದುಬಾರಿಯಾಗುತ್ತಿದ್ದು, ನರೇಗಾ ಯೋಜನೆಯಿಂದ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ತಾಂತ್ರಿಕತೆಗೆ ಸಣ್ಣ ರೈತರು ಒಗ್ಗುತ್ತಿಲ್ಲ. ಸಕಾಲಕ್ಕೆ ತಾಂತ್ರಿಕ ಸಲಕರಣೆಗಳು ಸಿಗುತ್ತಿಲ್ಲ. ಇನ್ನು ಕೊಯ್ಲು ಯಂತ್ರಗಳ ಬಾಡಿಗೆ ದುಬಾರಿಯಾಗಿದ್ದು, ಭತ್ತದ ಇಳುವರಿಯೂ ಸಿಗುತ್ತಿಲ್ಲ. ಗುತ್ತಿಗೆ ಪಡೆದ ರೈತರಿಗಂತೂ ನಿರೀಕ್ಷೆಯಂತೆ ಲಾಭ ಸಿಗುವುದು ಅಪರೂಪ. ಮಳೆ ಮತ್ತು ಗಾಳಿಗೆ ತುತ್ತಾದ ಭತ್ತದ ಇಳುವರಿ ಉಳಿಸಿಕೊಳ್ಳುವ ಹೊಸ ತಾಂತ್ರಿಕತೆ ನಮ್ಮಲ್ಲಿಲ್ಲ. ಸಿಕ್ಕಷ್ಟೆ ಪಡೆಯಬೇಕೆಂಬ ನಂಬಿಕೆ ಮೇಲೆ ಕೃಷಿ ಚಟುವಟಿಕೆ ನಿಂತಿದ್ದು, ಪರ್ಯಾಯ ಬೆಳೆಗಳತ್ತ ರೈತರು ಗಮನಹರಿಸುತ್ತಿಲ್ಲ. ರೈತರು ನಿರೀಕ್ಷಿಸಿದಂತೆ ಪರಿಹಾರ ಸಿಗಲ್ಲ. ಎಕರೆಗೆ ಗರಿಷ್ಠ 4 ಸಾವಿರ ರೂ. ಸಿಕ್ಕರೂ ಅದೇ ದೊಡ್ಡ ಮೊತ್ತ.

    ತ್ರಿವಳಿ ತಾಲೂಕಿನಲ್ಲಿ ಮಳೆ, ಗಾಳಿಯಿಂದ ಭತ್ತದ ಬೆಳೆ ಹಾಳಾಗಿದ್ದು, ಭಾಗಶಃ ನೆಲಕ್ಕೊರಗಿವೆ. ಅಂದಾಜು 1200 ಹೆಕ್ಟೇರ್ ಪ್ರದೇಶದಲ್ಲಿ ಭತ್ತಕ್ಕೆ ಹಾನಿಯಾಗಿದೆ. ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
    ಮಂಜುನಾಥ ಭೋಗಾವತಿ ತಹಸೀಲ್ದಾರ್, ಗಂಗಾವತಿ

    ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಸರ್ವೇ ಕೈಗೊಂಡಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 70 ಕೋಟಿ ರೂ.ಅಗತ್ಯವಿದೆ.
    ಸಂತೋಷ್ ಪಟ್ಟದಕಲ್
    ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts