More

    ಸಭಾಂಗಣಗಳಲ್ಲಿ ಗಣೇಶೋತ್ಸವ

    ಮಂಗಳೂರು: ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ. ಆದರೆ, ಸ್ಥಳೀಯ ಪೊಲೀಸರ ಅನುಮತಿಯೊಂದಿಗೆ ಸಭಾಂಗಣಗಳಲ್ಲಿ ಒಂದು ದಿನದ ಸರಳ ಆಚರಣೆಗೆ ಹೆಚ್ಚಿನ ಸಮಿತಿಗಳು ಸಿದ್ಧತೆ ನಡೆಸಿವೆ.
    ಜಿಲ್ಲೆಯ ವಿವಿಧೆಡೆ ಸಣ್ಣ, ದೊಡ್ಡ ಮೈದಾನಗಳಲ್ಲಿ ಮೂರರಿಂದ ಐದು ದಿನಗಳ ಸಾರ್ವಜನಿಕ ಆಚರಣೆಗಳು ವಿಜ್ರಂಭಣೆಯಿಂದ ಜರುಗುತಿದ್ದವು. ಸರ್ಕಾರದ ಮಾರ್ಗಸೂಚಿ ಪ್ರಕಾರ, ರಸ್ತೆ ಬದಿ, ಮೈದಾನಗಳಲ್ಲಿ ಪೆಂಡಾಲ್ ಹಾಕಿ ಆಚರಣೆ ಮಾಡುವಂತಿಲ್ಲ. ಆದ್ದರಿಂದ ಜಿಲ್ಲೆಯ ವಿವಿಧಡೆ ಮೈದಾನಗಳಲ್ಲಿ ನಡೆಯುತ್ತಿದ್ದ ಆಚರಣೆಗಳು, ದೇವಳಗಳ ಸಭಾಂಗಣಕ್ಕೆ ಸ್ಥಳಾಂತರಗೊಂಡಿದ್ದು, ಸಮಿತಿಯವರೇ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.
    ಬೆಳಗ್ಗೆ ಮೂರ್ತಿ ಪ್ರತಿಷ್ಠಾಪಿಸಿ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ಸಾಯಂಕಾಲ ವಿಸರ್ಜನಾ ಪೂಜೆ ಮಾಡಿ, 6 ಗಂಟೆಯೊಳಗೆ ಸಭಾಂಗಣದ ಪಕ್ಕದ ಕೆರೆ, ಬಾವಿಗಳಲ್ಲಿ ಜಲಸ್ತಂಭನ ಮಾಡಲು ಸಮಿತಿಗಳು ತೀರ್ಮಾನ ತೆಗೆದುಕೊಂಡಿದೆ. ಜತೆಗೆ ಮೂರ್ತಿಗಳ ಎತ್ತರವನ್ನೂ ಈ ಬಾರಿ ಕಡಿಮೆ ಮಾಡಲಾಗಿದ್ದು, ವಿಸರ್ಜನಾ ಮೆರವಣಿಗೆ ಇಲ್ಲ.

    ಪ್ರಮುಖ ಆಚರಣೆ ಸ್ಥಳ ಬದಲು
    ಕೇಂದ್ರ ಮೈದಾನದಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಬಾಳಂಭಟ ಸಭಾಂಗಣಕ್ಕೆ, ಕೆಎಸ್‌ಆರ್‌ಟಿಸಿ ಆವರಣದ ಗಣೇಶೋತ್ಸವ ಅಲ್ಲಿನ ದೇವಸ್ಥಾನಕ್ಕೆ, ಬಂಟ್ವಾಳ ಜಕ್ರಿಬೆಟ್ಟು ಮೈದಾನದ ಗಣೇಶೋತ್ಸವ ಬಂಟ್ವವಾಳ ಹನುಮಂತ ದೇವಸ್ಥಾನಕ್ಕೆ ಸ್ಥಳಾಂತರಗೊಂಡಿವೆ. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುತ್ತಿದ್ದ ಗಣೇಶೋತ್ಸವವನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಉತ್ಸವ ಆಚರಿಸಿದರೆ ಸಾರ್ವಜನಿಕರನ್ನು ನಿಯಂತ್ರಿಸಲು ಕಷ್ಟವಾಗುವುದರ ಜತೆಗೆ ಸರ್ಕಾರದ ಆದೇಶ ಮೀರಿದಂತಾಗುತ್ತದೆ ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಭಾಂಗಣಗಳಲ್ಲಿ ಸಮಿತಿಯವರೇ ಸೇರಿ ಗಣಪತಿ ಪ್ರತಿಷ್ಠಾಪಿಸಲು ಅವಕಾಶ ಇರುವುದರಿಂದ ಮೈದಾನಗಳಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ಸಭಾಂಗಣಗಳಿಗೆ ಸ್ಥಳಾಂತರಿಸಲಾಗಿದೆ. ಬೆಳಗ್ಗೆ ಪ್ರತಿಷ್ಠಾಪಿಸಿ ಸಾಯಂಕಾಲ ವಿಸರ್ಜಿಸಲಾಗುತ್ತದೆ. ಸಾರ್ವಜನಿಕರಿಗೆ ಭಾಗ ವಹಿಸಲು ಅವಕಾಶಲ್ಲ.
    ವೇದವ್ಯಾಸ ಕಾಮತ್, ಶಾಸಕ

    ಸರ್ಕಾರದ ಮಾರ್ಗಸೂಚಿ ಪ್ರಕಾರ ರಸ್ತೆ, ಮೈದಾನಗಳಲ್ಲಿ ಪೆಂಡಾಲ್ ಹಾಕಿ ಗಣೇಣೋಶ್ಸವ ಮಾಡುವಂತಿಲ್ಲ. ಜಿಲ್ಲಾಡಳಿತವೂ ಅನುಮತಿ ಕೊಡುವುದಿಲ್ಲ. ಆದರೆ ಸಾರ್ವಜನಿಕರಿಗೆ ಪ್ರವೇಶ ನೀಡದೆ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ತಡೆಯುವುದಿಲ್ಲ. ದೇವಸ್ಥಾನಗಳ ಸಭಾಂಗಣಗಳಲ್ಲಿ ಆಚರಣೆಗೆ ಸರ್ಕಾರ ಅವಕಾಶ ನೀಡಿದೆ.
    ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಉಡುಪಿಯಲ್ಲಿ ಮುಂದುವರಿದ ಗೊಂದಲ
    ಉಡುಪಿ: ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂಬಂಧಿಸಿ ಜಿಲ್ಲೆಯಲ್ಲಿ ಗೊಂದಲ ಮುಂದುವರಿದಿದೆ.
    ಗಣೇಶೋತ್ಸವ ಸಮಿತಿ ಮುಖಂಡರು ಸೀಮಿತ ಸಂಖ್ಯೆಯ ಸದಸ್ಯರ ಉಪಸ್ಥಿತಿಯಲ್ಲಾದರೂ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಿದ್ದಾರೆ. ಶಾಸಕ ಕೆ. ಸುನೀಲ್ ಕುಮಾರ್ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆಚರಣೆಗೆ ಅವಕಾಶ ಕೋರಿದ್ದಾರೆ. ಇನ್ನೊಂದೆಡೆ, ಸೋಮವಾರ ಕುಂದಾಪುರ, ಕಾರ್ಕಳದ ಕೆಲವು ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರನ್ನು ಕರೆಸಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಕೈಬಿಟ್ಟು ಮನೆಯಲ್ಲೇ ಆಚರಿಸುವಂತೆ ಸಲಹೆ ನೀಡಲಾಗಿದೆ. ರಾಜ್ಯ ಸರ್ಕಾರ ಭಾನುವಾರ ಹೊರಡಿಸಿದ ಪರಿಷ್ಕೃತ ಆದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಡಲಾಗಿದೆ ಎಂದು ತಿಳಿಸಲಾಗಿತ್ತು. ಜಿಲ್ಲಾಧಿಕಾರಿಗಳು ಮಂಗಳವಾರ ಶಾಸಕರೊಡನೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts