More

    ಸಿಗುತ್ತಿಲ್ಲ ತಾಜಾ ಹಣ್ಣು, ವಿದೇಶ, ಹೊರ ರಾಜ್ಯಗಳಿಂದ ಪೂರೈಕೆ ವ್ಯತ್ಯಯ

    ನರೇಂದ್ರ ಎಸ್. ಹೆಬ್ರಿ
    ಕೋವಿಡ್ ಲಾಕ್‌ಡೌನ್‌ನಿಂದ ಉಡುಪಿ ಜಿಲ್ಲೆಗೆ ವಿದೇಶ, ಹೊರ ರಾಜ್ಯಗಳಿಂದ ತಾಜಾ ಹಣ್ಣು ಪೂರೈಕೆ ಇಲ್ಲದೆ ಸಣ್ಣ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸುವಂತಾಗಿದೆ.
    ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇಬು ಹಾಗೂ ಕಿತ್ತಳೆ ಹಾಗೂ ಇತರ ಕೆಲವು ಹಣ್ಣು ವಿದೇಶ, ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತವೆ. ಆದರೆ ಪ್ರಸ್ತುತ ಲಾಕ್‌ಡೌನ್‌ನಿಂದ ನಿತ್ಯ ಪೂರೈಕೆ ಇಲ್ಲದೆ ರಖಂ ವ್ಯಾಪಾರಿಗಳು ಸ್ಟೋರೇಜ್‌ನಲ್ಲಿ ಇರಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸುವುದರಿಂದ ತಾಜಾ ಹಣ್ಣು ಸಿಗುತ್ತಿಲ್ಲ. ದರವೂ ದುಬಾರಿ ಆಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

    ಉದಾಹರಣೆಗೆ ಹೆಬ್ರಿ ಪೇಟೆಯಲ್ಲಿ ಸುಮಾರು 10 ರಿಂದ 15 ಹಣ್ಣುಹಂಪಲುಗಳ ಅಂಗಡಿ-ಮುಂಗಟ್ಟುಗಳಿದ್ದು ಗಿರಾಕಿಗಳಿಲ್ಲದೆ ಕೆಲವು ಶಾಶ್ವತವಾಗಿ ಮುಚ್ಚಿದ್ದು, ಇನ್ನುಳಿದ ಅಂಗಡಿಗಳು ತೆರೆದು ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸುತ್ತಿವೆ. ಜಿಲ್ಲೆಯ ಇತರ ಭಾಗಗಳ ಪರಿಸ್ಥಿತಿಯೂ ಇದೇ ರೀತಿ ಇದೆ.

    ಪ್ರಸ್ತುತ ಮಂಗಳೂರು ಮತ್ತು ಉಡುಪಿ ಮಾರುಕಟ್ಟೆಗಳಿಂದ ಜಿಲ್ಲೆಯ ಚಿಲ್ಲರೆ ವ್ಯಾಪಾರಿಗಳಿಗೆ ಹಣ್ಣು ತರಿಸಲಾಗುತ್ತಿದೆ. ಲಾಕ್‌ಡೌನ್ ಮೊದಲು ಶಿವಮೊಗ್ಗ, ಬೆಂಗಳೂರು ಮತ್ತು ಮುಂಬೈಯಿಂದ ಬರುತ್ತಿದ್ದು ಕಡಿಮೆ ಬೆಲೆಯಲ್ಲೂ ಸಿಗುತ್ತಿತ್ತು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ತಾಜಾ ಹಣ್ಣುಗಳು ಸಿಗುತ್ತಿಲ್ಲ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದರು.
    ವ್ಯಾಪಾರ-ವಹಿವಾಟು ಶೇ.20ಕ್ಕೆ ಕುಸಿದಿದೆ. ಒಂದು ಅಂಗಡಿಯಲ್ಲಿ 4 ರಿಂದ 5 ಜನ ಕೆಲಸಕ್ಕಿದ್ದಾರೆ. ಹಿಂದೆ ಹೊರರಾಜ್ಯಗಳಿಂದ ದಿನಂಪ್ರತಿ ಹಣ್ಣುಗಳ ಪೂರೈಕೆಯಾಗುತ್ತಿದ್ದರೆ ಈಗ ವಾರದಲ್ಲಿ ಒಂದು ದಿನ ಮಾತ್ರ ಬರುತ್ತಿದೆ. ಇದರಿಂದಾಗಿ ತಾಜಾ ಹಣ್ಣುಗಳು ಸಿಗದೆ ಬಾಳೆಹಣ್ಣು, ಮೂಸಂಬಿ, ಕಿತ್ತಳೆ, ಕಲ್ಲಂಗಡಿ ಹಣ್ಣು ಯಾರೂ ಖರೀದಿಸುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ.

    ಕಿವಿ ಹಣ್ಣಿಗೆ ಬೇಡಿಕೆ
    ಕರೊನಾದ ಕಾರಣ ಕಿವಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಮಂಡಿಗಳಲ್ಲಿ ಇದರ ಬೆಲೆ ಗಗನಕ್ಕೇರಿದ ಪರಿಣಾಮ ಸಾಮಾನ್ಯ ಜನರು ಯಾರು ಕೊಂಡುಕೊಳ್ಳುತ್ತಿಲ್ಲ.

    ಎಳನೀರು ಅಭಾವ
    ಹೊರಜಿಲ್ಲೆಗಳಿಂದ ಎಳನೀರಿನ ಪೂರೈಕೆ ಇಲ್ಲದ ಕಾರಣ ಹೆಬ್ರಿ ಪೇಟೆಯಲ್ಲಿ ಎಳನೀರಿನ ಅಭಾವ ಕಂಡುಬಂದಿದೆ. ಆಸ್ಪತ್ರೆಗೆ ಕೊಂಡೊಯ್ಯಲು ಒಂದು ಎಳನೀರು ಕೂಡ ಸಿಗುತ್ತಿಲ್ಲ ಎಂದು ರೋಗಿಯ ಸಂಬಂಧಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಆ್ಯಪಲ್ ಹಾಗೂ ಕಿತ್ತಳೆ ಹಣ್ಣುಗಳು ವಿದೇಶದಿಂದ ಆಮದಾಗುತ್ತಿದ್ದು, ಪ್ರಸ್ತುತ ಲಾಕ್‌ಡೌನ್‌ನಿಂದ ವ್ಯತ್ಯಯವಾಗುತ್ತಿದೆ. ನಾವು ಸ್ಟೋರೇಜ್‌ನಲ್ಲಿ ಇರಿಸಿ ಪೂರೈಸುತ್ತಿರುವುದರಿಂದ ತಾಜಾತನ ಉಳಿಯುವುದಿಲ್ಲ. ಮಾವಿನ ಹಣ್ಣು, ಬಾಳೆಹಣ್ಣು ಹಾಗೂ ಸ್ಥಳೀಯವಾಗಿ ಬೆಳೆಯುವ ಹಣ್ಣುಗಳ ಪೂರೈಕೆಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
    ಬ್ರಹ್ಮಾನಂದ ಭಟ್, ಹಣ್ಣು, ತರಕಾರಿ ರಖಂ ವ್ಯಾಪಾರಿ ಕಾಪು

    ಮಾರುಕಟ್ಟೆಯಲ್ಲಿ ತಾಜಾ ಹಣ್ಣುಗಳು ಸಿಗುತ್ತಿಲ್ಲ. ಹಣ್ಣು ಬೆಲೆ ಗಗನಕ್ಕೇರಿದೆ. ಇದರಿಂದ ಗಿರಾಕಿಗಳು ಖರೀದಿಸಲು ಮುಂದೆ ಬರುತ್ತಿಲ್ಲ. ಅಂಗಡಿ ನಡೆಸಲು ಬಹಳ ಕಷ್ಟವಾಗುತ್ತಿದೆ. ಬಹಳ ನಷ್ಟವಾಗುತ್ತಿದೆ.
    ಗಿರೀಶ್ ನಾಯಕ್, ಹಣು ವ್ಯಾಪಾರಿ ಹೆಬ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts