More

    ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಗೆ ದರ ನಿಗದಿ

    ಗದಗ: ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ  ರೈತರಿಂದ ಭತ್ತ ಖರೀದಿಗೆ  ದರ ನಿಗದಿಪಡಿಸಲಾಗಿದ್ದು  ನವೆಂಬರ್ 15 ರಿಂದ ಡಿಸೆಂಬರ್ 31 ರವರೆಗೆ  ರೈತರ ನೊಂದಣಿಗೆ ಅವಕಾಶವಿದೆ  ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ನೇಮಿಸಲ್ಪಟ್ಟ  ಸಂಗ್ರಹಣಾ ಏಜೆನ್ಸಿಗಳು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ರೈತರಿಂದ ಭತ್ತವನ್ನು ಖರೀದಿಸಲು  ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು.  ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಗರಿಷ್ಟ 40 ಕ್ವಿಂಟಲ್ ಮೀರದಂತೆ ಖರೀದಿಸಬೇಕು. ಸರ್ಕಾರವು ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಭತ್ತವನ್ನು ಖರೀದಿಸುವಂತಿಲ್ಲ. ಈ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕೆಂದು  ತಿಳಿಸಿದರು.

    ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಎಂ. ಅವರು ಮಾತನಾಡಿ  2023-2024 ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ  ಕೇಂದ್ರ ಸರ್ಕಾರವು ನಿಗದಿಪಡಿಸಿರುವ 2.5 ಲಕ್ಷ ಮೆಟ್ರಿಕ್  ಟನ್ ಭತ್ತವನ್ನು ಸಾಮಾನ್ಯ ಭತ್ತ – ಪ್ರತಿ ಕ್ವಿಂಟಾಲ್ ಗೆ 2,183 ರೂ.  ಹಾಗೂ ಗ್ರೇಡ್ ಎ ಭತ್ತ – ಪ್ರತಿ ಕ್ವಿಂಟಾಲ್ ಗೆ 2,203 ರೂ. ದರದಲ್ಲಿ ಖರೀದಿಸಲು ಆದೇಶಿಸಿದೆ ಎಂದರು. ಮುಂಡರಗಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತದ ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು,  ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಸಂಗ್ರಹಣಾ ಸಂಸ್ಥೆಯನ್ನಾಗಿ ನೇಮಿಸಿದೆ ಎಂದು ಸಭೆಗೆ ತಿಳಿಸಿದರು.

    ಸಭೆಯಲ್ಲಿ  ಉಪವಿಭಾಗಾಧಿಕಾರಿ  ಡಾ.ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ , ಎಪಿಎಂಸಿ ಸಹಾಯಕ ನಿರ್ದೇಶಕ ಎಂ.ಆರ್. ನದಾಫ್ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು, ಟಾಸ್ಕ್ ಫೋರ್ಸ ಸಮಿತಿ ಸದಸ್ಯರು ಹಾಜರಿದ್ದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts