More

    ಅಪ್ರಜ್ಞಾಪೂರ್ವಕ ಸ್ಥಿತಿಯಿಂದ ಪರಮಪ್ರಜ್ಞೆಯವರೆಗೆ

    wd ಈ ಭೂಮಿಗೆ ಬರುವ ಪ್ರತಿಯೊಬ್ಬ ಮಾನವರೂ ಉಪಪ್ರಜ್ಞೆ, ಅಪ್ರಜ್ಞ ಮತ್ತು ಪ್ರಜ್ಞಾಪೂರ್ವಕವಾದ ಮನಸ್ಸಿನೊಡನೆ ಬರುತ್ತಾರೆ. ಪ್ರಜ್ಞಾಪೂರ್ವಕ ಮನಸ್ಸು ಸಕ್ರಿಯವಾದಷ್ಟೂ ಕಲಿಕೆಯು ಆರಂಭವಾಗುತ್ತದೆ. ಯಾವುದೇ ಕಲಿಕೆಯಾಗಲು ಗುರುವಿನ ಇರುವಿಕೆ ಆವಶ್ಯಕ. ಕಲಿಕೆಯು ಜೀವನವಿಡೀ ಮುಂದುವರಿಯುವುದರಿಂದ ಗುರುಗಳ ಇರುವಿಕೆಯೂ ಜೀವನವಿಡೀ ಮುಂದುವರಿಯುತ್ತದೆ. ಗುರುಗಳನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಸಿದಾಗ ಹೆಚ್ಚು ಕಲಿಯುತ್ತೀರಿ.

    ಕೆಲವೊಮ್ಮೆ ಜೀವನದಲ್ಲಿ ಸಿಲುಕಿಕೊಂಡಂತೆ ಅನಿಸಿದಾಗ ಗುರುಗಳ ಇರುವಿಕೆಯಿಂದ ಮುನ್ನಡೆಯುತ್ತೀರಿ. ಇದರಿಂದ ಎಲ್ಲೂ ಸಿಲುಕಿಕೊಳ್ಳುವುದಿಲ್ಲ. ಘಟನೆಗಳಿಂದ, ಪರಿಸ್ಥಿತಿಗಳಿಂದ, ಪರಿಕಲ್ಪನೆಗಳಿಂದ ಸಿಲುಕಿಕೊಂಡಿದ್ದೇವೆ ಅನಿಸುತ್ತದೆ. ಅನೇಕ ಸಲ ನೀವು ಸಿಲುಕಿದ್ದೀರಿ ಎಂಬ ಅರಿವೂ ಇರುವುದಿಲ್ಲ. ಗುರುಗಳ ಇರುವಿಕೆಯಿಂದ ಅರಿವು ಉಂಟಾಗಿ ಮುನ್ನಡೆಯುತ್ತೀರಿ.

    ನಿಮಗೇನು ಬೇಕೋ ಅದನ್ನು ಪಡೆಯಲು ನಿಮಗೆ ಮಾರ್ಗದರ್ಶನ ಬೇಕು. ಬಯಕೆಗಳಿಗೆ ಕೊನೆಯೇ ಇರುವುದಿಲ್ಲ. ಅನೇಕ ಸಲ ನಿಮ್ಮ ಬಯಕೆಗಳ ಬಗ್ಗೆ ನೀವೇ ಖಚಿತವಾಗಿರುವುದಿಲ್ಲ. ಇಲ್ಲಿ ಗುರುವಿನ ಪಾತ್ರ ಬರುತ್ತದೆ. ಗುರುತತ್ವವು ನಿಮಗೇನು ಬೇಕೊ ಅದನ್ನು ಕೊಡದೆ, ನಿಮಗೇನು ಒಳ್ಳೆಯದೊ ಅದನ್ನೇ ಕೊಡುತ್ತದೆ. ಗುರುವು ನಿಮನ್ನು ಕಲ್ಪನಾಲೋಕದಲ್ಲಿ ಇರಲು ಬಿಡದೆ, ವಿಶ್ವದ ಅಂತಿಮ ವಾಸ್ತವತೆಗೆ ಎಚ್ಚೆತ್ತುಕೊಂಡು ನೋಡುವಂತೆ, ಕಂಡುಕೊಳ್ಳುವಂತೆ ಮಾಡುತ್ತಾರೆ. ಅದೇ ಮುಕ್ತಿ, ಸ್ವಾತಂತ್ರ್ಯ. ಆದ್ದರಿಂದ, ಗುರುಗಳ ಬಳಿಯಿರುವುದರಿಂದ ಜ್ಞಾನ, ಗಮನ(ಚಲನೆ), ಸಾಧನೆ ಮತ್ತು ಮುಕ್ತಿ, ಈ ನಾಲ್ಕು ದೊರಕುತ್ತದೆ. ಪ್ರಜ್ಞಾಪೂರ್ವಕವಾದ ಮನಸ್ಸಿನಿಂದ ಮಾತ್ರವೇ ಸ್ವ-ಪ್ರಯತ್ನ ಆಗಲು ಸಾಧ್ಯ. ಉಪಪ್ರಜ್ಞಾ ಮನಸ್ಸಿನಿಂದ ಯತ್ನ ಮಾಡಲು ಸಾಧ್ಯವಿಲ್ಲ. ಅದರ ಮೇಲೆ ಪ್ರಭಾವಬೀರಲು ಬೇರೆ ಯಾರೋ ಬೇಕಾಗುತ್ತದೆ. ಉನ್ನತವಾದ ಶಕ್ತಿ ಬೇಕಾಗುತ್ತದೆ. ಅಪ್ರಜ್ಞೆಯ ಸ್ಥಿತಿಯಲ್ಲಿರುವ ಮನಸ್ಸನ್ನು ಪರಮಪ್ರಜ್ಞೆಯ ಸ್ಥಿತಿಯವರೆಗೆ ಕೊಂಡೊಯ್ಯಲು ಖಂಡಿತವಾಗಿಯೂ ಸಹಾಯ ಬೇಕು. ಈ ಕಾರಣಕ್ಕಾಗಿಯೇ ಪ್ರಕೃತಿಯು ನಮಗೆ ಗುರುಪರಂಪರೆಯನ್ನು ನೀಡಿರುವುದು.

    ಗುರುಗಳ ಬಳಿ ಮೂರು ರೀತಿಯ ಜನರು ಬರುತ್ತಾರೆ- ವಿದ್ಯಾರ್ಥಿ, ಶಿಷ್ಯರು ಮತ್ತು ಭಕ್ತರು. ವಿದ್ಯಾರ್ಥಿ ಶಿಕ್ಷಕರ ಬಳಿ ಬಂದು ಏನನ್ನೋ ಕಲಿತು ಹೊರಟುಬಿಡುತ್ತಾನೆ. ಶಿಷ್ಯರು ಜ್ಞಾನದ ಸಲುವಾಗಿ ಗುರುಗಳ ಉದಾಹರಣೆಯನ್ನು ಅನುಸರಿಸುತ್ತಾರೆ ಮತ್ತು ಮೋಕ್ಷವನ್ನು ಪಡೆಯಲು ಬಯಸುತ್ತಾರೆ. ನಂತರ ಭಕ್ತರು. ಇವರು ಜ್ಞಾನಕ್ಕಾಗಿ ಗುರುಗಳ ಬಳಿ ಇರುವುದಿಲ್ಲ. ಜ್ಞಾನದೊಡನೆ, ಅನಂತತೆಯೊಡನೆ, ದೈವದೊಡನೆ ಆಳವಾದ ಪ್ರೇಮದಲ್ಲಿರುತ್ತಾರೆ.

    ವಿದ್ಯಾರ್ಥಿಗಳು ಹೇರಳವಾಗಿರುತ್ತಾರೆ, ಶಿಷ್ಯರು ಕೆಲವರಿರುತ್ತಾರೆ, ಆದರೆ ಭಕ್ತರು ವಿರಳ. ಬುದ್ಧನ ಶಿಷ್ಯನಾದ ಸರಿಪುತ್ರನಿಗೆ ಜ್ಞಾನೋದಯವಾದಾಗ ಬುದ್ಧನು ಆತನನ್ನು ಕರೆದು ಈ ಜಗತ್ತಿನಲ್ಲಿ ಸಂಚರಿಸಿ ನನ್ನ ಕಾರ್ಯವನ್ನು ಮುಂದುವರಿಸಿ ಎಂದ. ಸರಿಪುತ್ರ ಹೊರಟನಾದರೂ ಅಳುತ್ತಿದ್ದ. ಅವನ ಅಳುವಿನ ಕಾರಣವೇನೆಂದು ಇತರರು ಕೇಳಿದಾಗ ಸರಿಪುತ್ರ, ಯಾರಿಗೆ ಬೇಕಿತ್ತು ಜ್ಞಾನೋದಯ? ಅದು ಕಾಯಬಹುದಿತ್ತು. ಭಕ್ತನಾಗಿ ಇರುವ ಆನಂದ, ಬುದ್ಧನ ಪಾದದ ಬಳಿಯಿರುವ ಆನಂದ ಅಷ್ಟು ದೊಡ್ಡದಾಗಿತ್ತು. ಜ್ಞಾನೋದಯದ ಬದಲು ನನಗೆ ಅದೇ ಬೇಕಿತ್ತು ಎಂದ.

    ಈ ಭೂಮಿಯ ಮೇಲೆ ಭಕ್ತರು ಅರಳಿದಾಗ ಭಗವಂತ ಸಂತಸಪಡುತ್ತಾನೆ! ನೀವು ಬಹಳ ಪ್ರಾಮಾಣಿಕವಾದ ಭಕ್ತರು ಎಂದುಕೊಂಡು ಬಿಡಿ! ನಿಮಗೆ ನೀವೇ ಉತ್ತಮ ಅಂಕಿಗಳನ್ನು ನೀಡಿ. ನಾನೇ ಪ್ರಪ್ರಥಮವಾದ, ಅಗ್ರಗಣ್ಯನಾದ ಭಕ್ತ, ಅಗ್ರಗಣ್ಯಳಾದ ಭಕ್ತೆ, ಯಾರೂ ನನ್ನಂತಿಲ್ಲ ಎಂದುಕೊಂಡುಬಿಡಿ. ಭಕ್ತಿ ಬೆಳೆಯುವುದೇ ಹೀಗೆ. ಗುರುವನ್ನು ನೀವು ಪ್ರೀತಿಸಬಲ್ಲಿರಿ, ಆದರೆ ಗುರುವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಏನನ್ನೋ ಪ್ರೀತಿಸಿ, ಅದನ್ನು ಹಿಡಿದಿಟ್ಟುಕೊಳ್ಳದಿರುವ ಅನುಭವ ನಿಮಗೆಂದಿಗೂ ಆಗಿಯೇ ಇಲ್ಲ. ಗುರುಗಳಲ್ಲಿ ಆ ಪ್ರೇಮವನ್ನು ಅನುಭವಿಸುತ್ತೀರಿ. ಆದರೆ ಅದನ್ನು ಹಿಡಿದಿಟ್ಟುಕೊಳ್ಳಲು ನಿಮ್ಮ ಮನಸ್ಸಿಗೆ ಸಾಧ್ಯವಿಲ್ಲ. ನಿಮಗೆ ಈ ರೀತಿಯ ಪ್ರೇಮ ತಿಳಿದಿಲ್ಲವಾದ್ದರಿಂದ ನಿಮ್ಮ ಮನಸ್ಸು ಸ್ವಲ್ಪ ಒತ್ತಡಕ್ಕೆ ಒಳಗಾಗಬಹುದು, ಆಶಾಭಂಗಕ್ಕೆ ಒಳಗಾಗಬಹುದು. ಅದು ಹುಳಿಯಾದ ದ್ರಾಕ್ಷಿ ಇದ್ದಂತೆ. ಆದರೆ ಅದರಿಂದ ನೀವೆಲ್ಲೂ ಮುಂದುವರಿಯಲು ಸಾಧ್ಯವಿಲ್ಲ. ಈಜಲು ಬಂದಿರಿ, ಆದರೆ ಅದರ ಬದಲಿಗೆ ನಿಮ್ಮ ಪಾದಗಳನ್ನು ಒದ್ದೆ ಮಾಡಿಕೊಂಡು ಹೊರಟುಬಿಟ್ಟಿರಿ. ಪ್ರೀತಿಸುವ ಹೊಸ ದಾರಿಯನ್ನು ಕಂಡುಕೊಳ್ಳಬೇಕು, ಮತ್ತದೇ ಸಮಯದಲ್ಲಿ ಕೇಂದ್ರೀಕೃತರಾಗಿಯೂ ಇರಬೇಕು. ಗುರುಗಳ ಬಳಿ ಬಂದಾಗ ಆಗುವುದೇ ಇದು. ಗುರುವನ್ನು ಪ್ರೀತಿಸುವುದು ಮೊದಲನೆಯ ಹೆಜ್ಜೆ. ಭಗವಂತ ಬಹಳ ಸಾರ್ವಜನಿಕನಾದವನು. ಅತೀ ವೈಶ್ವಿಕನಾದವನು, ಎಲ್ಲರಿಗೂ ಸೇರಿದವನು. ಆದರೆ ಗುರುಗಳ ಮೂಲಕ ವೈಯಕ್ತಿಕವಾದ ಸಂಬಂಧವಿರುತ್ತದೆ ಮತ್ತು ಆ ಬಂಧ ಅನಂತವಾದದ್ದು. ಅದು ಸೇತುವೆ. ಏಕೆಂದರೆ ನಿಮಗೆ ವೈಯಕ್ತಿಕವಾದ ಸಂಬಂಧಗಳ ಬಗ್ಗೆ ಮಾತ್ರ ತಿಳಿದಿದೆ. ಪ್ರೇಮವನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಗುರುಗಳು ನಿಮ್ಮಲ್ಲಿ ಮುರಿಯುತ್ತಾರೆ.

    ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

    ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ರಾಜ್ಯಪಾಲರಿಗೆ ಇಸಿ ಸಲಹೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts