More

    ಉದಾರೀಕರಣದಿಂದ ವಿನಾಶದಂಚಿಗೆ ರೈತ ಕುಲ: ಮೋಟೆಬೆನ್ನೂರಲ್ಲಿ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

    ಬ್ಯಾಡಗಿ: ದೇಶದಲ್ಲಿ ಉದಾರೀಕರಣ ನೀತಿಯಿಂದ ವಿದೇಶಿ ಕಂಪನಿ ಹಾಗೂ ಕಾಪೋರೇಟ್​ಗಳು, ದೊಡ್ಡ ಉದ್ದಿಮೆದಾರರು ರೈತರ ಮೇಲೆ ಬಂಡವಾಳ ಚೆಲ್ಲಿ ದಬ್ಬಾಳಿಕೆ ಮಾಡುತ್ತ, ರೈತ ಕುಲ ವಿನಾಶದ ಅಂಚಿಗೆ ತಳ್ಳುತ್ತಿದ್ದಾರೆ ಎಂದು ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ ಹೇಳಿದರು.

    ತಾಲೂಕಿನ ಮೋಟೆಬೆನ್ನೂರು ಗ್ರಾಮದ ನವೋದಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ರೈತರ ತರಬೇತಿ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ರೈತರು ಮಾತ್ರ ಬಡವರಾಗಿದ್ದು, ರೈತರ ಆರ್ಥಿಕ ಸ್ಥಿತಿಗತಿ ಇಂದಿಗೂ ಸುಧಾರಣೆ ಕಂಡಿಲ್ಲ. ಸರ್ಕಾರದ ಆರ್ಥಿಕ ನೀತಿಗಳು ರೈತರನ್ನು ನೆಲಸಮಗೊಳಿಸಿವೆ. ದೇಶದ ರಾಜಕಾರಣಿಗಳು, ಬಂಡವಾಳಶಾಹಿ ಹಾಗೂ ಅಧಿಕಾರಿಗಳ ಕೈಯಲ್ಲಿ ಸಿಲುಕಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ವಿದ್ಯುತ್ ಖಾಸಗೀಕರಣಗೊಳಿಸುವ ಮೂಲಕ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರ ನಡೆದಿದ್ದು, ರೈತರು ಇಂದಿನಿಂದಲೇ ಜಾಗೃತರಾಗಬೇಕು ಎಂದರು.

    1965ರಲ್ಲಿ ಹಸಿರು ಕ್ರಾಂತಿ ವೇಳೆ ದೇಶದಲ್ಲಿ ಆಹಾರ ದಾಸ್ತಾನು 20 ದಶಲಕ್ಷ ಟನ್ ಇತ್ತು. ಈಗ 220 ದಶಲಕ್ಷ ಟನ್​ಗೆ ಏರಿಕೆಯಾಗಿದ್ದು, ರಾಜಕಾರಣಿಗಳು ರೈತರಿಗೆ ಸರಿಯಾದ ನ್ಯಾಯ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರೈತ ಸಂಘದ ಹೋರಾಟ ಹತ್ತಿಕ್ಕಲು ಸರ್ಕಾರ ಸಂಘಟನೆ ಒಡೆಯುವ ತಂತ್ರ ಮಾಡುತ್ತಿದೆ. ರೈತರಿಗೆ ವಿಮೆ, ಬೆಳೆ ಪರಿಹಾರ, ನೀರಾವರಿ ಯೋಜನೆ, ಬಗರಹುಕುಂ ಜಮೀನು ಕೊಡಿಸುವ ವೇಳೆ ರೈತ ಸಂಘದ ಹೋರಾಟ ಪರಿಣಾಮಕಾರಿಯಾಗಿದೆ ಎಂದರು.

    ನವೋದಯ ಸಂಸ್ಥೆ ಅಧ್ಯಕ್ಷ ಬಸವರಾಜ ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಹನುಮನಮಟ್ಟಿ ಕೆವಿಕೆ ಮುಖ್ಯಸ್ಥ ಗುರುಪ್ರಸಾದ ಜಿ.ಎಸ್, ಪಶು ವೈದ್ಯಾಧಿಕಾರಿ ಮಹೇಶ ಕಡಗಿ, ಹಾಗೂ ಸಾವಯವ ಕೃಷಿಕ ಕೆ. ಆದರ್ಶ ಅವರು ಬೇಸಾಯ ಪದ್ಧತಿ, ಮಣ್ಣಿನ ರಕ್ಷಣೆ, ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ, ವಿ.ಎಚ್. ಗುಡಗೂರು, ಶಿವಬಸಪ್ಪ ಗೋವಿ, ಅಡಿವೆಪ್ಪ ಆಲದಕಟ್ಟೆ, ಮಹಮದ್​ಗೌಸ ಪಾಟೀಲ, ಮಾಲತೇಶ ಪೂಜಾರ, ದಿಳ್ಳೆಪ್ಪ ಮಣ್ಣೂರು, ಶಂಕರಗೌಡ್ರ ಶಿರಗಂಬಿ, ಶೇಖಪ್ಪ ಕಾಶಿ, ನಿಂಗಪ್ಪ ಮಾಸಣಗಿ, ಮಂಜಣ್ಣ ತೋಟದ, ಕೆ.ವಿ. ದೊಡ್ಡಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts