More

    ಜಡೆ ಸಂಸ್ಥಾನ ಮಠದಿಂದ ಸೊರಬ ತಾಲೂಕಿನ ಕೀರ್ತಿ ಇಮ್ಮಡಿ

    ಸೊರಬ: ಜಡೆ ಸಂಸ್ಥಾನ ಮಠ ಜಾತ್ಯಾತೀತ, ಧರ್ಮಾತೀತ ಕ್ಷೇತ್ರವಾಗಿ ತಾಲೂಕಿನ ಕೀರ್ತಿ ಹೆಚ್ಚಿಸುವಂತೆ ಮಾಡಿದ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಮುಂಚೂಣಿಯಲ್ಲಿರುವು ಹೆಮ್ಮೆಯ ಸಂಗತಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಕಳೆದ ಹದಿನೈದು ದಿನದಿಂದ ಹಮ್ಮಿಕೊಂಡಿದ್ದ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಳ ಶಿಲಾಮಠ ಲೋಕಾರ್ಪಣೆ, ಡಾ. ಶ್ರೀ ಮಹಾಂತ ಸ್ವಾಮೀಜಿ ಪೀಠಾರೋಹಣದ ರಜತೋತ್ಸವ, ಉತ್ತರಾಧಿಕಾರಿಯ ಪಟ್ಟಾಧಿಕಾರ ಹಾಗೂ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
    ಡಾ. ಶ್ರೀ ಮಹಾಂತ ಸ್ವಾಮೀಜಿ ಕ್ರಿಯಾಶೀಲ ವ್ಯಕ್ತಿತ್ವವದ ಮೂಲಕ ಎಲ್ಲ ಧರ್ಮಿಯರ ಜತೆ ಸಮಾನತೆಯನ್ನು ಸಾಧಿಸಿದ ಮಹಾನ್ ಸಾಧಕರಾಗಿದ್ದಾರೆ. ಅವರ ಅವಧಿಯಲ್ಲಿ ಶ್ರೀ ಸಿದ್ಧವೃಷಬೇಂದ್ರ ಸ್ವಾಮೀಜಿ ಅವರ ಶಿಲಾಮಂಟಪವನ್ನು ನಿರ್ಮಿಸುವ ಮೂಲಕ ಮಠದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದಾರೆ. ಪಟ್ಟಾಧಿಕಾರದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಮಹಾಂತ ಶ್ರೀಗಳು ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಸಮಾಜ ಹಾಗೂ ಭಕ್ತರ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಜಡೆ ಸಂಸ್ಥಾನ ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ತಂದೆ ಬಂಗಾರಪ್ಪ ಅವರು ಶ್ರೀಗಳ ಜತೆಗೆ ಉತ್ತಮ ಭಾಂದವ್ಯ ಹೊಂದಿದ್ದರು. ಮಠದ ಪ್ರಗತಿಗೂ ಒತ್ತು ನೀಡಿದ್ದರು ಎಂದರು.
    ಪ್ರತಿಯೊಬ್ಬ ವ್ಯಕ್ತಿಗೆ ವಿಶಾಲ ಹೃದಯವಂತಿಕೆ ಇರಬೇಕು. ಎಸ್.ಬಂಗಾರಪ್ಪ ಅವರು ಮುವತ್ತೂ ವರ್ಷಗಳ ಹಿಂದೆಯೇ ಆರಾಧನ ಕಾರ್ಯಕ್ರಮದ ಮೂಲಕ ಎಲ್ಲ ದೇವರಗಳಿಗೆ ಗುಡಿ, ಗೋಪುರ ಕಟ್ಟುವ ಕೆಲಸ ಮಾಡಿದರು. ದೇವರನ್ನು ಗುಡಿಯಲ್ಲಿಟ್ಟು ಪೂಜಿಸಿದರು. ಇದೀಗ ದೇವರನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಎಷ್ಟರ ಮಟ್ಟಗೆ ಸರಿ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಕುಟಿಕಿದರು.
    ಇದೇ ವೇಳೆ ಒಂದು ಕೋಟಿ ರೂ. ವೆಚ್ಚದ ಸಭಾಭವನಕ್ಕೆ ಮಧು ಬಂಗಾರಪ್ಪ ಶಂಕುಸ್ಥಾಪನೆ ನೆರವೇರಿಸಿ, ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
    ಬೆಳಗ್ಗೆ ಜಗದ್ಗುರು ಕಮಾರ ಕೆಂಪಿನ ಶ್ರೀ ಸಿದ್ಧ ವೃಷಬೇಂದ್ರ ಸ್ವಾಮೀಜಿಗಳ ಮಹಾರಥೋತ್ಸವ ಜರಗಿತು. ಸಂಜೆ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಮಂಡ್ಯ, ಬೆಳಗಾವಿ, ಹಾವೇರಿ ಸೇರಿದಂತೆ ಸ್ಥಳೀಯ ಕಲಾವಿದರಿಂದ ಜಾನಪದ ಉತ್ಸವ ನಡೆಯಿತು.
    ಹಾವೇರಿಯ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಸಂಸ್ಥಾನ ಮಠದ ಕಿರಿಯ ಶ್ರೀಗಳಾದ ರುದ್ರದೇವರು, ಮೂಲೆಗದ್ದೆಯ ಶ್ರೀ ಚನ್ನಬಸವ ಸ್ವಾಮೀಜಿ, ಲಿಂಗನಾಯಕನಳ್ಳಿಯ ಶ್ರೀ ನಿರಂಜನ ದೇವರು, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಜಡೆ ಗ್ರಾಪಂ ಅಧ್ಯಕ್ಷ ಅಮಿತ್‌ರಾಜ್, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಸಂಜೀವ್ ತರಕಾರಿ, ಬಸವಂತಪ್ಪ ಕೋಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

    ಪ್ರತಿಯೊಬ್ಬರ ಸಹಕಾರ ಸ್ಮರಣೀಯ
    ಸಮಾರೋಪ ಭಾಷಣ ಮಾಡಿದ ಡಾ. ಶ್ರೀ ಮಹಾಂತ ಸ್ವಾಮೀಜಿ, ಮಠದ ಆಸ್ತಿಯಾಗಿರುವ ಭಕ್ತರು ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಹದಿನೈದು ದಿನಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಜಡೆ ಮಠದ ಯುವ ವೇದಿಕೆ, ಭಕ್ತರು, ದಾನಿಗಳು ಮಧ್ಯಮದವರು, ಜಡೆ ಗ್ರಾಮಸ್ಥರು, ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರನ್ನು ಸ್ಮರಿಸುತ್ತೇನೆ ಎಂದರು. ರಾಜ್ಯದ ವಿವಿಧೆಡೆಯಿಂದ ಶ್ರೀಗಳು ಆಗಮಿಸಿ ಧಾರ್ಮಿಕ ಸಂದೇಶಗಳನ್ನು ನೀಡಿದ್ದಾರೆ. ಹತ್ತು ದಿನಗಳ ಕಾಲ ಪ್ರವಚನ ನಡೆದಿದೆ. ಅಲ್ಲಮ್ಮ ಪ್ರಭುಗಳ ವಚನವನ್ನು 1,111 ಭಕ್ತರು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಇತಿಹಾಸ ಬರೆದು ಮಠದ ಘನತೆಯನ್ನು ಇಮ್ಮಡಿಗೊಳಿಸಿದ್ದಾರೆ. ಶ್ರೀ ಸಿದ್ಧವೃಷಭೇಂದ್ರ ಗುರುಗಳು ನಿರ್ವಿಕಲ್ಪ ಸಮಾಧಿಯಲ್ಲಿ ಇಂದಿಗೂ ಧ್ಯಾನಸ್ಥರಾಗಿ ನಮ್ಮೆಲ್ಲರನ್ನು ಜಾಗೃತಗೊಳಿಸುತ್ತಿದ್ದಾರೆ. ಅವರ ಶಿಲಾ ಮಂಟಪ ನಿರ್ಮಾಣ, ಉತ್ತರಾಧಿಕಾರಿಯ ಪಟ್ಟಾಧಿಕಾರದ ಸಂಭ್ರಮ, ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂತಸ ತಂದಿವೆ. ಜಡೆ ಮಠ ಭಕ್ತರಿಗೆ ಸದಾ ತೆರದಿರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts