More

    ಸಿಹಿನೀರಿನ ಮೀನುಗಾರಿಕೆ ಜಾಗೃತಿ, ಮಾಹಿತಿ, ಪ್ರೇರಣೆ- ಬೂಡಿಯಾರು ಫಾರ್ಮ್‌ನಲ್ಲಿ ಮೀನು ಕೃಷಿ ಕ್ಷೇತ್ರೋತ್ಸವ

    ಪುತ್ತೂರು: ಹಿಂದೆಲ್ಲ ಹಳ್ಳಿಗಳಿಗೆ ಉಪ್ಪುನೀರಿನ ಮೀನು ಬರುತ್ತಿದ್ದುದೇ ಅಪರೂಪ. ಇಂದು ಗಲ್ಲಿಗಲ್ಲಿಗೂ ಬರುತ್ತಿದೆ. ಹಾಗಾಗಿ ಮಳೆಗಾಲದಲ್ಲೂ ಹೊಳೆ ನೀರಿನ ಮೀನು ಹಿಡಿಯುವುದು ಕಡಿಮೆಯಾಗಿದೆ. ಸಿಹಿನೀರಿನ ಮೀನು ರುಚಿ ಹೇಗಿದೆ ಎಂದು ಇದುವರೆಗೂ ಸವಿಯದವರೂ ಇದ್ದಾರೆ. ಸಹಜವಾಗಿ ಮೀನುಗಾರಿಕೆ ಎಂದ ಕೂಡಲೇ ಸಮುದ್ರ ಮೀನುಗಾರಿಕೆಯೇ ನೆನಪಿಗೆ ಬರುತ್ತದೆ. ಇದಕ್ಕೆ ಸರಿಸಮಾನಾಗಿ ಒಳನಾಡು ಅಥವಾ ಸಿಹಿನೀರಿನ ಮೀನುಗಾರಿಕೆ ನಡೆಸಲು ಸಾಧ್ಯವಿದ್ದು, ಲಾಭದಾಯಕವೂ ಹೌದು ಎಂದು ನಿರೂಪಿಸಿದವರು ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಬೂಡಿಯಾರು ರಾಧಾಕೃಷ್ಣ ರೈ.

    ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ 24×7 ಸಹಯೋಗದಲ್ಲಿ ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಪೂರ್ವ ಸಹಕಾರದಲ್ಲಿ ಬೂಡಿಯಾರು ರಾಧಾಕೃಷ್ಣ ರೈ ಅವರ ತೋಟದಲ್ಲಿ ಮಂಗಳವಾರ ‘ಮೀನು ಕೃಷಿ ಕ್ಷೇತ್ರೋತ್ಸವ- ಸಂವಾದ’ ಮಂಗಳವಾರ ನಡೆಯಿತು.

    ಕಾರ್ಯಕ್ರಮವನ್ನು ಮಂಗಳೂರಿನ ಎಕ್ಕೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಉದ್ಘಾಟಿಸಿದರು. ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನು ಕೃಷಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಮಾಹಿತಿ ನೀಡಿದರು. ಮೀನು ಕೃಷಿ ನಿರ್ವಹಣೆ ಹಾಗೂ ಮಾರುಕಟ್ಟೆ ಬಗ್ಗೆ ಬೂಡಿಯಾರು ರಾಧಾಕೃಷ್ಣ ರೈ ಮಾಹಿತಿ ನೀಡಿದರು. ವಿಜಯವಾಣಿ ಸ್ಥಾನೀಯ ಸಂಪಾದಕರಾದ ಸುರೇಂದ್ರ ಎಸ್. ವಾಗ್ಳೆ ಉಪಸ್ಥಿತರಿದ್ದರು. ವರದಿಗಾರ ಶ್ರವಣ್ ಕುಮಾರ್ ನಾಳ ಕಾರ್ಯಕ್ರಮ ನಿರೂಪಿಸಿದರು. ವಿಜಯವಾಣಿ ಜಾಹೀರಾತು ವಿಭಾಗದ ಮುಖ್ಯಸ್ಥ ನವೀನ್ ಶೆಟ್ಟಿ, ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಪೂರ್ವ ಪದಾಧಿಕಾರಿಗಳು ಹಾಜರಿದ್ದರು.

    ಕಾರ್ಯಕ್ರಮದ ಬಳಿಕ ಕೆರೆಯಿಂದ ಹಿಡಿದ ತಾಜಾ ಮೀನು ‘ತಿಲಾಪಿಯಾ’ ಮಾರಾಟವೂ ನಡೆಯಿತು. ಮೀನು ಕೃಷಿ ಆಸಕ್ತರು ಕೆರೆ ಸಂದರ್ಶಿಸಿ, ವಿಜ್ಞಾನಿಗಳು ಹಾಗೂ ತಜ್ಞರಿಂದ ಮಾಹಿತಿ ಪಡೆದುಕೊಂಡರು. ಕೊಳದಲ್ಲಿ ಹೇಗೆ ಮೀನು ಸಾಕಬಹುದು ಎಂಬ ಕುರಿತು ರಾಧಾಕೃಷ್ಣ ರೈ ಅನುಭವ ಹಂಚಿಕೊಂಡರು. ಡಾ.ಶಿವಕುಮಾರ್ ಮಗದ ಮೀನು ಕೃಷಿ ಕುರಿತು ವಿವರಣೆ ನೀಡಿದರು.

    ಕೆರೆಗಳು ಬಹುಪಯೋಗಿ:

    ಅಗತ್ಯಕ್ಕಿಂತ ಹೆಚ್ಚಿನ ಲವಣಗಳಿದ್ದಾಗ ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯಾಗುತ್ತದೆ. ಸಸ್ಯಗಳು ಲವಣಗಳ ನಿರ್ವಹಣೆಗೆ ಹೆಚ್ಚಿನ ಶ್ರಮ ಪಟ್ಟಾಗ ಇಳುವರಿ ಕಡಿಮೆಯಾಗುತ್ತದೆ. ಜಮೀನಿನ ಶೇ.5ರಿಂದ 10ರಷ್ಟು ಜಾಗದಲ್ಲಿ ಕೊಳವನ್ನು ತಗ್ಗುಪ್ರದೇಶದಲ್ಲಿ ಮಾಡಿಕೊಂಡಾಗ ಲವಣಾಂಶಗಳು, ಹೆಚ್ಚಾಗಿರುವ ನೀರು ಬಸಿದು ಹೋಗಲು ಸಹಕಾರಿಯಾಗುವ ಜತೆಗೆ ಕೃಷಿಗೆ ಅನುಕೂಲವಾಗುತ್ತದೆ. ಎಲ್ಲ ಭೂ ಪ್ರದೇಶಕ್ಕೆ ಹೋಲಿಸಿದರೆ ಕರಾವಳಿ ಪ್ರದೇಶ ವೈವಿಧ್ಯಮಯ ಕೃಷಿಯನ್ನು ಮಾಡಬಹುದಾಗಿದೆ. ಕೃಷಿ ಚಟುವಟಿಕೆ ಮಳೆಯ ವೈಪರೀತ್ಯ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ರೋಗಗಳ ಹಾವಳಿಯಿಂದ ಇಳುವರಿ ಕಡಿಮೆಯಾಗುತ್ತಿರುವ ದಿನದಲ್ಲಿ ಕೃಷಿಯನ್ನು ಲಾಭ ದಾಯಕವಾಗಿಸಲು ಸಮಗ್ರ ಕೃಷಿಯ ಅಗತ್ಯವಿದೆ ಎಂದು ಮೀನುಗಾರಿಕಾ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಅಭಿಪ್ರಾಯಪಟ್ಟರು.

    ರೈತರು ವಿಜ್ಞಾನಕ್ಕೂ ಮೊದಲು ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡಬೇಕು. ಮೀನು ಕೃಷಿ ರೈತರ ಎಲ್ಲ ಕೃಷಿಯ ಜತೆಗೆ ಹೊಂದಾಣಿಕೆಯಾಗುತ್ತದೆ. ಪೋಷಕಾಂಶಗಳ, ಮಣ್ಣಿನ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ರೈತರು ಸಿಹಿ ನೀರಿನ ಮೀನು ಕೃಷಿಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ವೈಜ್ಞಾನಿಕ ಆಲೋಚನೆಯನ್ನು ಜೋಡಿಸಿಕೊಂಡು ಕೃಷಿ ಮಾಡಿದಾಗ ಲಾಭದಾಯಕವಾಗುತ್ತದೆ.
    – ಡಾ.ಶಿವಕುಮಾರ್ ಮಗದ

    ಸವಲತ್ತು, ಸಹಾಯಧನ:

    ಒಳನಾಡು ಮೀನು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳು, ಸವಲತ್ತು, ಸಹಾಯಧನ ಒದಗಿಸಲಾಗುತ್ತಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ನೀಡುವ ಜತೆಗೆ ಮೀನುಗಾರಿಕೆ ಚಟುವಟಿಕೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯ ಮೂಲಕ ಹೊಸ ಮೀನು ಕೃಷಿಗೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಪಾಲನಾ ಮೀನು ಕೃಷಿಯ ಜತೆಗೆ ಹೂಡಿಕೆ ವೆಚ್ಚಕ್ಕೂ ಸಹಾಯಧನ ನೀಡಲಾಗುತ್ತಿದೆ. ಪುತ್ತೂರಿನಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಆರು ತಿಂಗಳ ಹಿಂದೆ ಆರಂಭಿಸಲಾಗಿದ್ದು, ಸಿಹಿನೀರು ಮೀನುಗಾರಿಕೆ ಆಸಕ್ತರು ಸಹಾಯಧನ ಮತ್ತಿತರ ಸೌಲಭ್ಯಗಳ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕಾ ಇಲಾಖೆಯ ಮಂಜುಳಾಶ್ರೀ ಶೆಣೈ ಹೇಳಿದರು.

    ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮೀನು ಕೃಷಿಯನ್ನು ಮಾಡುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ. ಅಲಂಕಾರಿಕಾ ಮೀನು ಕೃಷಿಯನ್ನು ಮಹಿಳೆಯರೂ ನಡೆಸಬಹುದಾಗಿದೆ. ಮೀನು ಕೃಷಿಗೆ ಇರುವ ಅವಕಾಶ ಯೋಜನೆಗಳನ್ನು ಕೃಷಿಕರು ಬಳಸಿಕೊಳ್ಳಬೇಕು. ಮೀನು ಮಾರುಕಟ್ಟೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇಲಾಖೆಗೆ ರೈತರಿಂದ ಬರುತ್ತಿದ್ದು, ಇದರ ಬಗ್ಗೆ ಬೇಡಿಕೆ ಇರುವ ಪ್ರದೇಶಗಳ ಜತೆಗೆ ಒಪ್ಪಂದ ಮಾಡಿಕೊಂಡು ನಿವಾರಣೆ ಮಾಡಬಹುದಾಗಿದೆ.
    – ಮಂಜುಳಾಶ್ರೀ ಶೆಣೈ

    ವೈಜ್ಞಾನಿಕ ಕೃಷಿಯಿಂದ ವೈಜ್ಞಾನಿಕ ರೀತಿಯಲ್ಲಿ ಮೀನು ಕೃಷಿ ಮಾಡಿದಾಗ ಲಾಭದಾಯಕ ಆಗುತ್ತದೆ. ಯಾವುದೇ ಮಾಹಿತಿ ಇಲ್ಲದೆ ಕೆರೆಯಲ್ಲಿ ತಂದು ಮೀನು ಬಿಟ್ಟರೆ ಸಾಕುವುದು ಸಾಧ್ಯವಿಲ್ಲ. ಈ ಕ್ಷೇತ್ರದ ವಿಜ್ಞಾನಿಗಳು, ಇಲಾಖೆಗಳು, ಅನುಭವಿಗಳನ್ನು ಸಂಪರ್ಕಿಸಿ, ಅವರಿಂದ ಮಾಹಿತಿ ಪಡೆದು ಮುಂದುವರಿಯಬೇಕು. ಮಾರುಕಟ್ಟೆಯನ್ನು ಅಧ್ಯಯನ ಮಾಡದೆ ಒಮ್ಮೆಲೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವುದು ಕೂಡ ಅಪಾಯಕಾರಿ. ಅನೇಕ ಮೀನು ಕೃಷಿಕರಲ್ಲಿ ಮಾರುಕಟ್ಟೆಯ ಬಗ್ಗೆ ಇನ್ನೂ ಗೊಂದಲವಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಗಳು ಶ್ರಮಿಸಬೇಕು. ಮೀನು ಕೃಷಿ ಬಹಳ ಸುಲಭವಾಗಿ ಮಾಡಬಹುದಾಗಿದ್ದು, ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಹೇಳಿದರು.



    ಪ್ರತಿ ಕೆ.ಜಿ. ಮೀನನ್ನು 200 ರೂಪಾಯಿಗಿಂತ ಕಡಿಮೆಗೆ ಮಾರಾಟ ಮಾಡಿದರೆ ಕೃಷಿಕರಿಗೆ ನಷ್ಟ. ಅದಕ್ಕಿಂತ ಹೆಚ್ಚಿನ ದರ ಪಡೆಯಲು ಸಾಧ್ಯವಿದೆ. ಯಾರೇ ಆದರೂ ಮೀನು ಸಾಕುವ ಮೊದಲು ಮಾರುಕಟ್ಟೆಯನ್ನು ಅಧ್ಯಯನ ಮಾಡಬೇಕು. ಸಾಕಿದ ನಂತರ ಮಾರುಕಟ್ಟೆ ಹುಡುಕುವುದು ಸರಿಯಾದ ವಿಧಾನವಲ್ಲ. ಉತ್ತಮ ತಳಿಯ ಮೀನು ಮರಿಗಳನ್ನು ಪೂರೈಸುವ ಕಾರ್ಯ ಸಂಬಂಧಪಟ್ಟ ಅಧಿಕಾರಿಗಳಿಂದ ನಡೆಯಬೇಕು.
    – ಬೂಡಿಯಾರು ರಾಧಾಕೃಷ್ಣ ರೈ

    ಮೀನು ಕೃಷಿ ಆಸಕ್ತರಾದರೆ…

    ಬೂಡಿಯಾರು ರಾಧಾಕೃಷ್ಣ ರೈ ಹಿರಿಯರಿಂದ ಬಳುವಳಿಯಾಗಿ ಬಂದ ಸುಮಾರು 100 ಎಕರೆ ಜಮೀನು ಹೊಂದಿದ್ದಾರೆ. ಇದರಲ್ಲಿ ಅಡಕೆ, ತೆಂಗು, ಕೋಳಿ ಫಾರ್ಮ್, ಹೈನುಗಾರಿಕೆ, ರಂಬೂಟನ್, ಡ್ರಾಗನ್‌ಫ್ರೂಟ್, ಪೇರಳೆ, ಗದ್ದೆ ಬೇಸಾಯ, ಮೀನುಗಾರಿಕೆ, ರಬ್ಬರ್ ತೋಟ, ಗೇರು, ಕೋಕೊ ಹೀಗೆ ಎಲ್ಲವೂ ಇರುವುದರಿಂದ ಸಮಗ್ರ ಕೃಷಿಕ. ಕಳೆದ 25 ವರ್ಷಗಳಿಂದ ಕೃಷಿ ಚಟುವಟಿಕೆ ಕುರಿತು ಆಸಕ್ತರಿಗೆ ಮಾಹಿತಿ ನೀಡುತ್ತಿದ್ದಾರೆ. ಮೀನು ಕೃಷಿಯಲ್ಲಿ ಆಸಕ್ತಿ ಇದ್ದು, ಜಮೀನು ಇಲ್ಲ ಎಂದು ಹೇಳುವವರು ಬೂಡಿಯಾರ್ ಫಾರ್ಮ್‌ನಲ್ಲಿ ಮೀನು ಕೃಷಿ ಕೈಗೊಳ್ಳಲೂ ಅವಕಾಶವಿದೆ.

    ಮೀನಿನ ತ್ಯಾಜ್ಯ ನೀರು ಗೊಬ್ಬರ:

    ಮೀನು ಮಾರಾಟದಿಂದ ಮಾತ್ರವಲ್ಲ, ಮೀನು ಸಾಕುವ ಕೆರೆಯ ನೀರಿನಿಂದಲೂ ಲಾಭವಿದೆ. ಈ ನೀರು ಅತ್ಯುತ್ತಮ ಗೊಬ್ಬರವೂ ಹೌದು. ಕೆರೆಗೆ ರೆಡಿಮೇಡ್ ಫೀಡ್ ಜತೆ ಸಗಣಿ, ಕೋಳಿ ಹಿಕ್ಕೆ ಮತ್ತಿತರ ವಸ್ತುಗಳನ್ನು ಹಾಕುವುದರಿಂದ ಮೀನುಗಳಿಗೆ ಸೇವಿಸಲು ಯಥೇಚ್ಛವಾಗಿ ಪಾಚಿ, ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಜತೆಗೆ ಮೀನಿನ ಮಲಮೂತ್ರವೂ ಸೇರಿಕೊಳ್ಳುತ್ತದೆ. ಇವೆಲ್ಲವೂ ಒಟ್ಟಾದ ತ್ಯಾಜ್ಯ ನೀರು ಅಡಕೆ, ತೆಂಗು ತೋಟಕ್ಕೆ ಅತ್ಯುತ್ತಮ ಗೊಬ್ಬರ. ಒಂದು ಗಿಡಕ್ಕೆ 25 ಲೀಟರ್‌ನಷ್ಟು ನೀರು ಹಾಕಿದರೆ ಬೇರೆ ಯಾವ ಗೊಬ್ಬರವೂ ಬೇಕಾಗಿಲ್ಲ ಎನ್ನುತ್ತಾರೆ ರಾಧಾಕೃಷ್ಣ ರೈ. ಕೆಲವರು ಮೀನು ಸಾಕುತ್ತಾರೆ, ಆದರೆ ಅವರು ಮಾರಾಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಗುರಿ ಇರುವುದು ತ್ಯಾಜ್ಯನೀರನ್ನು ತೋಟಕ್ಕೆ ಹರಿಸುವುದು ಮಾತ್ರ. ಈ ನಿಟ್ಟಿನಲ್ಲೂ ಹೆಚ್ಚಿನ ಕೃಷಿಕರು ಯೋಚಿಸಬೇಕಾಗಿದೆ. ಒಂದಕ್ಕೊಂದು ಆಂತರಿಕ ಸಂಬಂಧ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರವರು.

    ಮೀನು ಮಾರಾಟ ಮಳಿಗೆ ಶೀಘ್ರ:

    ಬೂಡಿಯಾರ್ ಫಾರ್ಮ್‌ನಲ್ಲಿ 2 ಬೃಹತ್ ಮೀನು ಸಾಕಾಣಿಕಾ ಕೊಳಗಳಿವೆ. ಇದರಲ್ಲಿ ಪ್ಲಾಸ್ಟಿಕ್ ಶೀಟ್ ಹಾಕಿ ಮೀನು ಸಾಕಲಾಗುತ್ತಿದೆ. ಪ್ರತಿದಿನ ಫೀಡ್ ಹಾಕಿಯೇ ಇದರಲ್ಲಿ ಮೀನುಗಳನ್ನು ಸಾಕಲಾಗುತ್ತದೆ. ವಾರಕ್ಕೊಮ್ಮೆ ಅಥವಾ ಬೇಡಿಕೆ ಇರುವಾಗ ತಾಜಾ ಮೀನನ್ನು ಕೆರೆಯಿಂದ ಹಿಡಿದು ಸ್ಥಳದಲ್ಲೇ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪುತ್ತೂರಿನ ಹಲವರು ಸಿಹಿನೀರಿನ ಮೀನು ಸಾಕುತ್ತಿದ್ದಾರೆ. ಇಂಥ ಆಸಕ್ತ ಮೀನು ಕೃಷಿಕರನ್ನು ಒಳಗೊಂಡಿರುವ ‘ಪುತ್ತೂರ ಮುತ್ತು’ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪನೆಯಾಗಿದ್ದು, ಇದರ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಕುಂಬ್ರದಲ್ಲಿ ಮಳಿಗೆ ಸ್ಥಾಪಿಸಲು ಸಿದ್ಧತೆ ನಡೆದಿದೆ. ಇಲ್ಲಿ ಮೀನು ಮಾರಾಟ, ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಸ್ಥಳೀಯ ಮೀನು ಕೃಷಿಕರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಮತ್ತು ಗ್ರಾಹಕರಿಗೆ ಅನುಕೂಲ ಕಲ್ಪಿಸುವುದು ಉದ್ದೇಶ.

    ವಿಶಾಲ ಕೆರೆಯಲ್ಲೂ ಮೀನು:

    ಬೂಡಿಯಾರ್ ಫಾರ್ಮ್‌ನಲ್ಲಿ ಸುಮಾರು 1 ಎಕರೆ ವಿಸ್ತೀರ್ಣದ ಒಂದು ಬೃಹತ್ ಕೆರೆ ಇದೆ. ಇದರ ಆಳ ಸುಮಾರು 30 ಅಡಿ. ಬೇಸಿಗೆಯಲ್ಲೂ ಇದರಲ್ಲಿ ನೀರಿನ ಕೊರತೆ ಆಗುವುದಿಲ್ಲ. ಈ ಕೆರೆಗೆ ಎರಡು ವರ್ಷಗಳ ಹಿಂದೆ ಸಾವಿರಾರು ಮೀನು ಮರಿಗಳನ್ನು ಬಿಡಲಾಗಿತ್ತು. ನೈಸರ್ಗಿಕ ಕೆರೆಯಾಗಿರುವುದರಿಂದ ಇದಕ್ಕೆ ಫೀಡ್, ಸಗಣಿ ಸಹಿತ ಏನನ್ನೂ ಹಾಕುತ್ತಿಲ್ಲ. ಹಾಗಾಗಿ ಖರ್ಚು ಶೂನ್ಯ. ಆದರೂ ಮೀನುಗಳು ದಷ್ಟಪುಷ್ಟವಾಗಿ ಬೆಳೆದಿವೆ. ಕಾಟ್ಲಾ ಮೀನುಗಳು ಸುಮಾರು 2 ಕೆ.ಜಿ. ತೂಗುತ್ತಿವೆ. ಈ ವರ್ಷ ಮಳೆಗಾಲದ ನಂತರ ಮೀನುಗಳನ್ನು ಹಿಡಿಯುವ ಯೋಜನೆ ರಾಧಾಕೃಷ್ಣ ರೈ ಅವರದ್ದು. ಇದಲ್ಲದೆ ಗುಡ್ಡದ ತುದಿಯಲ್ಲಿ ಇನ್ನೊಂದು ಕೆರೆ ಇದೆ. ಈ ಬಾರಿ ಆ ಕೆರೆಯನ್ನು 2 ಎಕರೆಗೆ ವಿಸ್ತರಿಸಿ ಮೀನು ಸಾಕಣೆ ಮಾಡುವ ಉದ್ದೇಶವೂ ರೈಗಳಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts