More

    ಸ್ವಾತಂತ್ರೃ ಹೋರಾಟಗಾರ ಭೋಜರಾಜ ಹೆಗ್ಡೆ ನಿಧನ

    ಮಂಗಳೂರು: ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಗ್ರಾಮದ ಭೋಜರಾಜ ಹೆಗ್ಡೆ (98) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

    1923ರ ಫೆಬ್ರವರಿ 13ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ -ಲಕ್ಷ್ಮೀಮತಿ ದಂಪತಿಯ ಪುತ್ರನಾಗಿ ಜನಿಸಿದ್ದ ಭೋಜರಾಜ ಹೆಗ್ಡೆ ಬಾಲ್ಯದಲ್ಲೇ ದೇಶಾಭಿಮಾನ ರೂಢಿಸಿಕೊಂಡಿದ್ದರು. ಅಪ್ಪಟ ಗಾಂಧಿವಾದಿಯಾಗಿ, ಸದಾ ಖಾದಿ ವಸ್ತ್ರಧಾರಿಯಾಗಿ ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ 1942ರಲ್ಲಿ ಬ್ರಿಟಿಷರ ವಿರುದ್ಧ ಆಯೋಜಿಸಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಂಗಳೂರಿನ ಗಾಂಧಿ ಪಾರ್ಕ್‌ನಲ್ಲಿ ನಡೆದಿದ್ದ ಚಳವಳಿಗೆ ಪಡಂಗಡಿಯಿಂದ ತನ್ನ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್ ಏರಿ ಮಂಗಳೂರಿಗೆ ಆಗಮಿಸಿ ಧರಣಿ ಕುಳಿತಿದ್ದರು. ಪೊಲೀಸರು ಲಾಠಿ ಬೀಸಿದಾಗ ಅಂಜದೆ ಬ್ರಿಟಿಷರ ವಿರುದ್ಧ ಘೋಷಣೆ ಕೂಗಿದ್ದರು. ಆ ಹೋರಾಟದಲ್ಲಿ ಅವರ ಧೋತಿ ಹರಿದಿತ್ತು. ಅಂದು ಖಾದಿ ಬಟ್ಟೆ ಖರೀದಿಸಿ ಧರಿಸಿದವರು ಬಳಿಕ ಖಾದಿ ಧಿರಿಸನ್ನೇ ತೊಡುತ್ತಿದ್ದರು.

    ಅಹ್ಮದಾಬಾದ್‌ನಲ್ಲಿ ಮುರಾರ್ಜಿ ದೇಸಾಯಿ ಅವರು ಭೋಜರಾಜ ಹೆಗ್ಡೆಯವರ ಸೇವೆಯನ್ನು ಗುರುತಿಸಿ ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಮೂಡುಬಿದಿರೆ ಜೈನಮಠದ ವತಿಯಿಂದ ತ್ಯಾಗಿ ಸೇವಾರತ್ನ ಬಿರುದು ಪ್ರದಾನ ಮಾಡಿ ಗೌರವಿಸಲಾಗಿತ್ತು. ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ನಿಕಟವರ್ತಿಯಾಗಿದ್ದರು. 500ಕ್ಕೂ ಅಧಿಕ ಮುನಿಗಳ ಸೇವೆ ಸಲ್ಲಿಸಿದ್ದರು.
    ಧರ್ಮಸ್ಥಳದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಿ ಡಾ.ಹೆಗ್ಗಡೆ ಕುಟುಂಬದ ಪ್ರೀತಿ ಪಾತ್ರರಾಗಿದ್ದರು. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರೊಂದಿಗೂ ನಿಕಟವರ್ತಿಯಾಗಿದ್ದರು. ಕಳೆದ ಎರಡು ವರ್ಷಗಳಿಂದ ವಯೋಸಹಜವಾಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಇವರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
    ಇವರ ನಿಧನಕ್ಕೆ ಮೂಡುಬಿದಿರೆ ಮಠದ ಶ್ರೀಚಾರುಕೀರ್ತಿ ಭಟ್ಟಾರಕ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts