More

    ಫಲಾನುಭವಿಗಳಿಗೆ ಉಚಿತ ಆಹಾರ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪೂರೈಕೆ

    ಉಡುಪಿ: ಕೋವಿಡ್ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಆಹಾರ ಧಾನ್ಯ ವಿತರಿಸುವ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 1,64,636 ಮಂದಿ ಬಿಪಿಎಲ್ ಕಾರ್ಡ್ ಹಾಗೂ 28,422 ಅಂತ್ಯೋದಯ ಕಾರ್ಡ್ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭವಿ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿ ದೊರೆಯಲಿದೆ.

    ಕರಾವಳಿ ಜಿಲ್ಲೆಗೆ ಪ್ರಮುಖವಾಗಿ ಕುಚ್ಚಲಕ್ಕಿ ಬೇಕೆಂಬ ಬೇಡಿಕೆ ಈಡೇರಿಲ್ಲ. ಜಿಲ್ಲೆಯ ಶೇ.80ರಷ್ಟು ಜನ ಕುಚ್ಚಲಕ್ಕಿ ಬಳಸುತ್ತಾರೆ. ಜಿಲ್ಲೆಯಲ್ಲಿ ಬೆಳೆಸಲಾಗುತ್ತಿರುವ ಕುಚ್ಚಲಕ್ಕಿ ಮನೆ ಬಳಕೆಗಷ್ಟೇ ಉಪಯೋಗವಾಗುತ್ತದೆ. ಪಡಿತರ ವಿತರಣೆಗೆ ಅಗತ್ಯವಿರುವಷ್ಟು ಉತ್ಪತ್ತಿಯಾಗುತ್ತಿಲ್ಲ. ಆಂಧ್ರಪ್ರದೇಶದಿಂದ ತರಿಸುವ ಕುಚ್ಚಲಕ್ಕಿ ಇಲ್ಲಿನ ಜನರಿಗೆ ರುಚಿಸುವುದಿಲ್ಲ. ಹಾಗಾಗಿ ಆಂಧ್ರದ ಕುಚ್ಚಲಕ್ಕಿಗೆ ಬೇಡಿಕೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ತಿಂಗಳಿಗೆ ಸಾವಿರಾರು ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತಿದೆ. ಈ ಅಕ್ಕಿಯನ್ನು ಉಪಾಹಾರ, ಇತರ ಖಾದ್ಯಗಳಿಗೆ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

    ಎಲ್ಲೆಲ್ಲಿ, ಎಷ್ಟು ಫಲಾನುಭವಿಗಳು?: ಉಡುಪಿ ತಾಲೂಕಿನಿಂದ 26,381 ಬಿಪಿಎಲ್, 2,622 ಅಂತ್ಯೋದಯ. ಕಾಪು: 16,116 ಬಿಪಿಎಲ್, 2,586 ಅಂತ್ಯೋದಯ, ಬ್ರಹ್ಮಾವರ: 25,538 ಬಿಪಿಎಲ್, 5,878 ಅಂತ್ಯೋದಯ. ಕುಂದಾಪುರ: 38,662 ಬಿಪಿಎಲ್, 8,328 ಅಂತ್ಯೋದಯ. ಬೈಂದೂರು: 22,127 ಬಿಪಿಎಲ್, 4,366 ಅಂತ್ಯೋದಯ. ಕಾರ್ಕಳ: 27,637 ಬಿಪಿಎಲ್, 3,362 ಅಂತ್ಯೋದಯ. ಹೆಬ್ರಿ: 8,175 ಬಿಪಿಎಲ್, 1,281 ಅಂತ್ಯೋದಯ.

    ಈ ಹಿಂದೆ ಕೊಡುತ್ತಿದ್ದ ಪಡಿತರ ಜತೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಫಲಾನುಭವಿ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿ ವಿತರಿಸಲಾಗುವುದು. ಜಿಲ್ಲೆಗೆ 80 ಸಾವಿರ ಕ್ವಿಂಟಾಲ್‌ಗೂ ಅಧಿಕ ಅಕ್ಕಿ ಬರಲಿದ್ದು, ಈ ತಿಂಗಳಿನಿಂದ ಪಡಿತರ ವಿತರಣೆ ನಡೆಯಲಿದೆ. ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು. ಅಕ್ಕಿ ಮಾರಾಟ ಮಾಡುವವರು ಹಾಗೂ ಖರೀದಿಸುವವರ ವಿರುದ್ಧ್ದ ಕಾನೂನು ಕ್ರಮ ಜರುಗಿಸಲಾಗುವುದು.
    ಮೊಹಮ್ಮದ್ ಇಸಾಕ್,
    ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts